ADVERTISEMENT

ಗೋತ್ರಪುರುಷ ಮಾದಾರ ಚೆನ್ನಯ್ಯ: ಉದ್ಯಮಿ ಸಿದ್ದೇಶ್ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2024, 15:15 IST
Last Updated 28 ಡಿಸೆಂಬರ್ 2024, 15:15 IST
ಮಾದಾರ ಚೆನ್ನಯ್ಯನವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿದ್ದೇಶ್ ನಾಗೇಂದ್ರ, ಪಿನಾಕಪಾಣಿ, ವಚನಜ್ಯೋತಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು
ಮಾದಾರ ಚೆನ್ನಯ್ಯನವರ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಿದ್ದೇಶ್ ನಾಗೇಂದ್ರ, ಪಿನಾಕಪಾಣಿ, ವಚನಜ್ಯೋತಿ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು   

ಬೆಂಗಳೂರು: ‘ಅಂಬಲಿಯಿಂದ ಶಿವನನ್ನೇ ಕೃತಾರ್ಥನನ್ನಾಗಿ ಮಾಡಿದ ಮಾದಾರ ಚೆನ್ನಯ್ಯನವರು ಬಸವಣ್ಣನವರಿಂದ ‘ಅಪ್ಪನು ನಮ್ಮ ಮಾದಾರ ಚೆನ್ನಯ್ಯ’ ಎಂಬ ಸ್ತುತಿ ಪಡೆದ ಬಸವ ಧರ್ಮದ ಗೋತ್ರಪುರುಷ’ ಎಂದು ಉದ್ಯಮಿ ಸಿದ್ದೇಶ್ ನಾಗೇಂದ್ರ ಹೇಳಿದರು.

ವಚನಜ್ಯೋತಿ ಬಳಗವು ವಿಜಯನಗರದ ಭೈರವ ರಾಗ ಅಂಗಳದಲ್ಲಿ ಆಯೋಜಿಸಿದ್ದ ಮಾದಾರ ಚೆನ್ನಯ್ಯ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಸವಣ್ಣ ಕಟ್ಟಿದ ಕಲ್ಯಾಣ ಸಮಾಜವು ಅದೇ ಹಾದಿಯಲ್ಲಿ ಮುಂದುವರೆದಿದ್ದರೆ ಈ ನಾಡಿನ ಚಿತ್ರಣವೇ ಬೇರೆಯಾಗುತ್ತಿತ್ತು. ದುರದೃಷ್ಟವಶಾತ್ ವಚನ ಸಾಹಿತ್ಯ ಮರೆಯಾಯಿತು. ವಿಚಾರಶೀಲ ಧರ್ಮ ಸಂಪ್ರದಾಯಿಗಳ ಕೈವಶವಾಗಿ ಇದೀಗ ಮರುಹುಟ್ಟು ಪಡೆಯುತ್ತಿದೆ ಎಂದರು.

ADVERTISEMENT

ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಮಾತನಾಡಿ, ‘ಬಸವಣ್ಣನವರ ನಡೆಯಿಂದ ಆಕರ್ಷಿತರಾಗಿ ಕಲ್ಯಾಣಕ್ಕೆ ಬಂದ ಚೆನ್ನಯ್ಯನವರು, ಅಣ್ಣನವರ‌ ಜೊತೆಯಾಗಿ ನಿಂತು ಅಪ್ಪನೆಂಬ ಅಭಿದಾನಕ್ಕೆ ಪಾತ್ರರಾಗಿದ್ದು ಅವರ ಘನ ವ್ಯಕ್ತಿತ್ವಕ್ಕೆ ಸಾಕ್ಷಿ’ ಎಂದರು.

ಉಪನ್ಯಾಸ ನೀಡಿದ ಕವಿ ಗುಂಡೀಗೆರೆ ವಿಶ್ವನಾಥ್ ಅವರು, ಚೆನ್ನಯ್ಯನವರ ಜೀವನ ಚರಿತ್ರೆಯನ್ನು ತಿಳಿಸಿ, ಅರಿನಿಜಾತ್ಮ ರಾಮ ರಾಮ ಅಂಕಿತದಲ್ಲಿ ಪ್ರಕಟಿತ ಹತ್ತು ವಚನಗಳ ಅರ್ಥ ವಿವರಿಸಿದರು.

ಪುಟಾಣಿಗಳಾದ ಶ್ರಾವಣಿ ಹಣ್ಣಿ, ಸಿದ್ದು ಧವನ್, ಪೂರ್ಣಿಕ ಆರಾಧ್ಯ, ಹವ್ಯಾಸಿ ಗಾಯಕಿ ಚಂದ್ರಮತಿ ಮಜ್ಗಿ, ಮುಕ್ತಾಯಕ್ಕ ಬಳಗ ಹಾಗೂ ವಚನ ಕಲಿಕೆ ತರಗತಿ ವಿದ್ಯಾರ್ಥಿಗಳು ವಚನ ಗಾಯನ ಮಾಡಿದರು. ಮಾದಾರ ಚೆನ್ನಯ್ಯ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಎಂ.ನಂಜಪ್ಪ ಅವರನ್ನು ಅಭಿನಂದಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.