ADVERTISEMENT

ನಗರಸಭೆಯಾಗಿ ಮಾದನಾಯಕನಹಳ್ಳಿ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 20:22 IST
Last Updated 12 ನವೆಂಬರ್ 2020, 20:22 IST
ಮಾದನಾಯಕನಹಳ್ಳಿ ನಗರ ನಭೆ ಕಚೇರಿ
ಮಾದನಾಯಕನಹಳ್ಳಿ ನಗರ ನಭೆ ಕಚೇರಿ   

ಹೆಸರಘಟ್ಟ: ಬೆಂಗಳೂರು ಉತ್ತರ ತಾಲ್ಲೂಕಿನ ಮಾದನಾಯಕನಹಳ್ಳಿ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲು ಸಂಪುಟ ಸಭೆ ಅನುಮೋದನೆ ನೀಡಿದೆ.

ಮಾದಾವರ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆ ರಚಿಸಲಾಗಿತ್ತು. ಇದೀಗ ಶ್ರೀಕಂಠಪುರ, ಚಿಕ್ಕಬಿದರಕಲ್ಲು, ಲಕ್ಷ್ಮೀಪುರ ಗ್ರಾಮಗಳನ್ನು ಸೇರಿಸಿಕೊಂಡು ನಗರಸಭೆಯನ್ನಾಗಿ ಮಾಡಲಾಗಿದೆ.

ಹತ್ತು ವರ್ಷಗಳಿಂದ ಹಿಂದೆ ಈ ಆರು ಗ್ರಾಮಗಳು ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿದ್ದವು. ಅನುದಾನಗಳ ಕೊರತೆಯಿಂದ ಈ ಪ್ರದೇಶಗಳು ಹತ್ತು ವರ್ಷಗಳಿಂದ ಪ್ರಾಥಮಿಕ ಸೌಲಭ್ಯದಿಂದ ವಂಚಿತವಾಗಿದ್ದವು. ಕೃಷಿ ವಲಯದ ಭೂಮಿ ಅನಧಿಕೃತ ಬಡಾವಣೆಗಳಾಗಿದ್ದರಿಂದ ಪಂಚಾಯಿತಿಗೆ ಹೆಚ್ಚಿನ ವರಮಾನ ಇರಲಿಲ್ಲ. ಇರುವ ಅಲ್ಪ ಆದಾಯದಲ್ಲೇ ಮೂಲ ಸೌಲಭ್ಯವನ್ನು ಜನರಿಗೆ ನೀಡಬೇಕಿತ್ತು. ನಗರಸಭೆ ಅಸ್ತಿತ್ವಕ್ಕೆ ಬಂದರೆ ಮೂಲಸೌಕರ್ಯ ದೊರೆಯುವ ವಿಶ್ವಾಸ ಇಲ್ಲಿಯ ಜನರದ್ದು.

ADVERTISEMENT

’ಆರು ಗ್ರಾಮಗಳು ನಾಗಾಲೋಟದಿಂದ ಬೆಳೆಯುತ್ತಿವೆ. ಅನೇಕ ಕಾರ್ಖಾನೆಗಳು, ಉದ್ದಿಮೆದಾರರು ಇಲ್ಲಿ ಬಂಡವಾಳ ಹೂಡುತ್ತಿದ್ದಾರೆ. ಜನರಿಗೆ ಪ್ರಾಥಮಿಕ ಸೌಲಭ್ಯ ಮತ್ತು ಸರ್ಕಾರದ ಯೋಜನೆಗಳನ್ನು ತಲುಪಿಸಲು ನಗರ ಸಭೆ ಆಡಳಿತ ಇಲ್ಲಿ ಅವಶ್ಯಕತೆಯಾಗಿತ್ತು. ಹಾಗಾಗಿ ನಗರಸಭೆಯನ್ನು ಮಾಡಬೇಕಾಯಿತು‘ ಎನ್ನುತ್ತಾರೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್‌.

’ನಗರಸಭೆ ಅಸ್ತಿತ್ವಕ್ಕೆ ಬರುವ ವಿಷಯ ತಿಳಿದು ಸಂತಸವಾಗಿದೆ. ಸರ್ಕಾರದ ಅನುದಾನಗಳು ಹೆಚ್ಚಾಗಿ ಸಿಕ್ಕಿ ಇಲ್ಲಿಯ ಪ್ರದೇಶಗಳು ಅಭಿವೃದ್ದಿಗೊಳ್ಳಲಿವೆ. ಸಾಕಷ್ಟು ರಸ್ತೆಗಳು, ವಿದ್ಯುತ್ , ಕುಡಿಯುವ ನೀರನ್ನು ನಾವು ಪಡೆಯಬಹುದಾಗಿದೆ. ಸರ್ಕಾರದಿಂದ ಮನೆ ಪಡೆಯುವ ನಮ್ಮ ಕನಸು ನನಸಾಗಬಹುದು‘ ಎನ್ನುತ್ತಾರೆ ಶ್ರೀಕಂಠಪುರ ಗ್ರಾಮದ ನಿವಾಸಿ ಕಮಲಮ್ಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.