ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಪ್ರತಿಮೆಯನ್ನು ಕಲಾವಿದರು ಅಳವಡಿಸಿದರು
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಆದಿಕವಿ ಮಹರ್ಷಿ ವಾಲ್ಮೀಕಿ ವಿಷಯ ಆಧಾರಿತ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಜನವರಿ 16ರಿಂದ 27ರವರೆಗೆ ನಡೆಯಲಿದೆ’ ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಡಿ.ಎಸ್. ರಮೇಶ್ ತಿಳಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ವರ್ಷ ನಡೆಯುವ ಫಲಪುಷ್ಪ ಪ್ರದರ್ಶನದಲ್ಲಿ ಮಹರ್ಷಿ ವಾಲ್ಮೀಕಿ ಅವರಿಗೆ ಪುಷ್ಪ ಗೌರವ ಸಲ್ಲಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ವಾಲ್ಮೀಕಿ ಅವರ ಜೀವನ, ಸಾಧನೆ, ರಾಮಾಯಣದ ಚರಿತ್ರೆಯನ್ನು ಹೂವುಗಳಲ್ಲಿ ಅನಾವರಣ ಮಾಡಲಾಗುತ್ತದೆ. ಈ ಬಾರಿಯ ಫಲಪುಷ್ಪ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ’ ಎಂದರು.
‘ತೋಟಗಾರಿಕೆ ಇಲಾಖೆ ಹಮ್ಮಿಕೊಂಡಿರುವ 217ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನಕ್ಕೆ ವೇದಿಕೆ ಸಜ್ಜು ಮಾಡಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ (ಜ. 16) ಬೆಳಿಗ್ಗೆ 10ಕ್ಕೆ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಭಾಗವಹಿಸಲಿದ್ದು, ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಬಿ. ಗರುಡಾಚಾರ್ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದು ಮಾಹಿತಿ ನೀಡಿದರು.
‘ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ಬೃಹತ್ ಹುತ್ತದ ಮಾದರಿಯೊಳಗೆ ಮಹರ್ಷಿ ವಾಲ್ಮೀಕಿ ಅವರು ತಪಸ್ಸು ಮಾಡುವ ಭಂಗಿಯ ಪ್ರತಿಕೃತಿಯನ್ನು ಪ್ರದರ್ಶಿಸಲಾಗುತ್ತದೆ. ಇದು 10 ಅಡಿ ಎತ್ತರ ಹಾಗೂ 38 ಅಡಿ ಸುತ್ತಳತೆಯನ್ನು ಹೊಂದಿದೆ. ಒಂದು ಬಾರಿಗೆ 1.5 ಲಕ್ಷ ಡಚ್ ಗುಲಾಬಿ, 400 ಕೆ.ಜಿ. ಪಿಂಚ್ಡ್ ಗುಲಾಬಿ ಹಾಗೂ 300 ಕೆ.ಜಿ. ಹೈದರಾಬಾದ್ ಸೇವಂತಿಗೆ ಹೂವುಗಳನ್ನು ಬಳಸಿಕೊಂಡು ಈ ಪರಿಕಲ್ಪನೆಯನ್ನು ಸಿದ್ಧಪಡಿಸಲಾಗಿದೆ. ವಾಲ್ಮೀಕಿ ಅವರು ರಾಮಾಯಣ ಮಹಾಕಾವ್ಯ ಬರೆಯುತ್ತಿರುವ ಭಂಗಿಯ ಪ್ರತಿಮೆ, ರಾಮಾಯಾಣದ ಪಂಚವಟಿ ಬಿಂಬಿಸುವ 3ಡಿ ಕಲಾಕೃತಿಗಳು, ವಾಲ್ಮೀಕಿ ಆಶ್ರಮ, ಹನುಮ, ಜಟಾಯು, ಜಾಂಬವಂತ, ಅಳಿಲಿನ ಕಲಾಕೃತಿಗಳು ಹಾಗೂ ಹಲವಾರು ಕವಿಗಳ ಪುತ್ಥಳಿಗಳು ಇರಲಿವೆ’ ಎಂದರು.
ಲಾಲ್‍ಬಾಗ್‍ನ ಗಾಜಿನ ಮನೆಯಲ್ಲಿ ಆಯೋಜಿಸಿರುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ರಾಮಾಯಣ ಗ್ರಂಥದ ಮಾದರಿಯನ್ನು ಜೋಡಿಸಿದ ಕಾರ್ಮಿಕರು
ಜ. 18ರಂದು ನಡೆಯುವ ಇಕೆಬಾನ, ತರಕಾರಿ ಕೆತ್ತನೆ, ಪುಷ್ಪಭಾರತಿ, ಬೋನ್ಸಾಯ್, ಡಚ್ ಹೂವಿನ ಜೋಡಣೆ, ಥಾಯ್ ಆರ್ಟ್, ಜಾನೂರು ಒಣಹೂವಿನ ಜೋಡಣೆಯ ಕಲೆಗಳ ಸ್ಪರ್ಧೆಯ ಪ್ರದರ್ಶನವನ್ನು ಚಲನಚಿತ್ರ ನಟಿ ಪ್ರೇಮಾ ಉದ್ಘಾಟಿಸಲಿದ್ದಾರೆ. ಇಕೆಬಾನ ಸೇರಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಜ. 24ರಂದು ಬಹುಮಾನಗಳನ್ನು ವಿತರಿಸಲಾಗುತ್ತದೆ ಎಂದು ತಿಳಿಸಿದರು.
ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್, ಉಪ ನಿರ್ದೇಶಕ ಬಾಲಕೃಷ್ಣ ಟಿ.ಎಚ್., ಸುದ್ದಿಗೋಷ್ಠಿಯಲ್ಲಿದ್ದರು.
ಲಾಲ್ಬಾಗ್ನ ಎಲ್ಲ ಪ್ರವೇಶ ದ್ವಾರಗಳಲ್ಲಿ ಎಲೆಕ್ಟ್ರಾನಿಕ್ ಟಿಕೆಟ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ. https:/hasiru.karnataka.gov.in/flowershow/login.aspx ಕೊಂಡಿ ಬಳಸಿ ಆನ್‌ಲೈನ್ ಮೂಲಕ ಟಿಕೆಟ್ ಬುಕ್ಕಿಂಗ್ ಮಾಡಿಕೊಳ್ಳಬಹುದು.
ವಯಸ್ಕರಿಗೆ ₹ 80, ರಜೆ ದಿನಗಳಲ್ಲಿ ₹ 100
ಮಕ್ಕಳಿಗೆ ₹ 30
ಸಮವಸ್ತ್ರ ಧರಿಸಿ ಬರುವ ಶಾಲಾ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ
ಪ್ರದರ್ಶನದ ಸಮಯ: ಬೆಳಿಗ್ಗೆ 6ರಿಂದ ಸಂಜೆ 6.30ರವರೆಗೆ
ಹಾಪ್‌ಕಾಮ್ಸ್ ಆವರಣ ಮತ್ತು ಜೆ.ಸಿ. ರಸ್ತೆಯಲ್ಲಿರುವ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣ
ಶಾಂತಿನಗರ ಬಸ್ ನಿಲ್ದಾಣದ ಬಹುಮಹಡಿ ವಾಹನ ನಿಲ್ದಾಣ
ಅಲ್ ಅಮೀನ್ ಕಾಲೇಜು ಮೈದಾನ
ಲಾಲ್‌ಬಾಗ್ ಗಾಜಿನ ಮನೆಯಲ್ಲಿ ನಡೆಯುವ ಗಣರಾಜ್ಯೋತ್ಸವ ಫಲಪುಷ್ಪ ಪ್ರದರ್ಶನದ ಸಿದ್ಧತೆಯಲ್ಲಿ ತೊಡಗಿರುವ ಕಲಾವಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.