
ಬೆಂಗಳೂರು: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ (ಮಾಹೆ) ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನ 33ನೇ ಘಟಿಕೋತ್ಸವ ಶನಿವಾರ ನಡೆಯಿತು.
ಯಲಹಂಕದ ಕ್ಯಾಂಪಸ್‌ನಲ್ಲಿ ಸಹ ಕುಲಾಧಿಪತಿ ಎಚ್. ಎಸ್. ಬಲ್ಲಾಳ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 12 ಪಿಎಚ್.ಡಿ ಪದವಿ ಸೇರಿ ಒಟ್ಟು 746 ಮಂದಿಗೆ ಪದವಿ ಪ್ರದಾನ ಮಾಡಲಾಯಿತು. ವಿದ್ಯಾರ್ಥಿಗಳಾದ ರಿಯಾನಾ ಚಟ್ಟೋಪಾಧ್ಯಾಯ, ಮೋಹನಿಶ್ ರಾಜ್ ಕೆ, ದಿಬ್ಯಾಭ್ ದೇಬ್ ಅವರಿಗೆ ‘ಡಾ.ಟಿ.ಎಂ.ಎ. ಪೈ ಚಿನ್ನದ ಪದಕ’ ನೀಡಿ ಗೌರವಿಸಲಾಯಿತು.
ಆ್ಯಕ್ಸಿಸ್ ಬ್ಯಾಂಕ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ರಾಜ್‌ಕಮಲ್ ವೆಂಪತಿ ಮಾತನಾಡಿ, ‘ಕೃತಕ ಬುದ್ಧಿಮತ್ತೆ (ಎ.ಐ) ತಂತ್ರಜ್ಞಾನ ಎಷ್ಟೇ ವೇಗವಾಗಿದ್ದರೂ ಮನುಷ್ಯರಂತೆ ಯೋಚಿಸುವ ಶಕ್ತಿ ಇಲ್ಲ. ಹಾಗಾಗಿ ತಂತ್ರಜ್ಞಾನವನ್ನು ಸಾಧನವನ್ನಾಗಿ ಬಳಸಿಕೊಂಡು ನಿಮ್ಮಲ್ಲಿರುವ ಕುತೂಹಲ ಉಳಿಸಿಕೊಂಡರೆ, ಭವಿಷ್ಯ ಉತ್ತಮವಾಗಿರುತ್ತದೆʼ ಎಂದು ಸಲಹೆ ನೀಡಿದರು.
‘ವೃತ್ತಿ ಜೀವನದ ಹಾದಿ ಸರಳವಾಗಿರುವುದಿಲ್ಲ. ಸಾಕಷ್ಟು ತಿರುವುಗಳು, ಪ್ರಶ್ನೆಗಳು ಎದುರಾಗುತ್ತವೆ. ಸವಾಲುಗಳನ್ನು ಎದುರಿಸಿದರೆ, ಸಾಧನೆ ಮಾಡಲು ಸಾಧ್ಯ’ ಎಂದರು.
ಕುಲಪತಿ ಎಂ. ಡಿ. ವೆಂಕಟೇಶ್ ಮಾತನಾಡಿ, ‘ಬೆಂಗಳೂರು ಕ್ಯಾಂಪಸ್‌ನ ಶೈಕ್ಷಣಿಕ ಮತ್ತು ಸಂಶೋಧನಾ ವ್ಯವಸ್ಥೆಯನ್ನು ಬಲಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯವಾಗಿ 7-ಕ್ಯೂಬಿಟ್ ಕ್ವಾಂಟಮ್ ಕಂಪ್ಯೂಟಿಂಗ್ ಸೌಲಭ್ಯ, ‘ಐ-ಫ್ಯಾಕ್ಟರಿ’, ರೊಬೊಟಿಕ್ಸ್, ಮಣಿಪಾಲ್ ಯೂನಿವರ್ಸಿಟಿ ಟೆಕ್ನಾಲಜಿ ಬ್ಯುಸಿನೆಸ್ ಇನ್‌ಕ್ಯುಬೇಟರ್, ಸ್ಯಾಟಲೈಟ್ ಕೇಂದ್ರ ಪ್ರಾರಂಭಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.