ADVERTISEMENT

ಮೆಜೆಸ್ಟಿಕ್‌ನಲ್ಲಿ ಗಬ್ಬೆದ್ದು ನಾರುತಿವೆ ಕೆಳಸೇತುವೆ! ಇದೇನಾ Brand ಬೆಂಗಳೂರು?

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2026, 2:14 IST
Last Updated 10 ಫೆಬ್ರುವರಿ 2026, 2:14 IST
<div class="paragraphs"><p>ಪಾದಚಾರಿ ಕೆಳಸೇತುವೆಯಲ್ಲಿ ಕಸದ ಮೂಟೆಗಳನ್ನು ಇಟ್ಟಿದ್ದಾರೆ</p></div>

ಪಾದಚಾರಿ ಕೆಳಸೇತುವೆಯಲ್ಲಿ ಕಸದ ಮೂಟೆಗಳನ್ನು ಇಟ್ಟಿದ್ದಾರೆ

   

ಬೆಂಗಳೂರು: ನಗರದ ಹೃದಯಭಾಗದಲ್ಲಿ ಇರುವ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ನಿಲ್ದಾಣ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (ಕೆಎಸ್‌ಆರ್) ರೈಲು ನಿಲ್ದಾಣಕ್ಕೆ ಪಾದಚಾರಿಗಳು ಸುಲಭವಾಗಿ ಹಾದು ಹೋಗಲು ನಿರ್ಮಿಸಿರುವ ಕೆಳಸೇತುವೆ ಗಬ್ಬೆದ್ದು ನಾರುತ್ತಿದ್ದು, ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ.

ಗೋಡೆಗಳ ಮೇಲೆ ಪಾನ್ ಉಗುಳಿನ ಕಲೆ, ಕಿತ್ತುಹೋದ ನೆಲಹಾಸು, ಅಲ್ಲಲ್ಲಿ ಚೆಲ್ಲಿರುವ ತಿನಿಸುಗಳು, ಸೇದಿ ಬಿಸಾಡಿದ ಬೀಡಿ–ಸಿಗರೇಟ್ ತುಂಡುಗಳು, ಮದ್ಯ ಸೇವಿಸಿ ಎಸೆದಿರುವ ಪ್ಯಾಕೆಟ್‌ಗಳು, ಮೂತ್ರದ ವಾಸನೆಯ ನಡುವೆಯೇ ನಿತ್ಯ ಸಾವಿರಾರು ಪ್ರಯಾಣಿಕರು ಮೂಗು ಮುಚ್ಚಿಕೊಂಡು ಓಡಾಡುವ ದುಃಸ್ಥಿತಿ ಇದೆ.

ADVERTISEMENT

2016ರಲ್ಲಿ ‘ನಮ್ಮ ಮೆಟ್ರೊ’ ಉದ್ಘಾಟನೆ ವೇಳೆ ಕೆಳಸೇತುವೆ ಪಾದಚಾರಿ ಮಾರ್ಗದ ನವೀಕರಣದ ಕೆಲಸಗಳಾಗಿದ್ದವು. ಆ ನಂತರ ಇದರ ನಿರ್ವಹಣೆಯೇ ಆಗಿಲ್ಲ. ಜಿಬಿಎ ಮತ್ತು ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿಗೆ ಭೇಟಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುವುದರಿಂದ, ಕೆಳಸೇತುವೆ ಮಾರ್ಗ ಬಳಸುವುದು ಪಾದಚಾರಿಗಳಿಗೆ ಅನಿವಾರ್ಯ. ಆದರೆ ಶುಚಿಯಿಲ್ಲದ ಇಲ್ಲಿನ ವಾತಾವರಣ ಹೇಸಿಗೆ ತರಿಸುತ್ತದೆ ಎಂದು ಪಾದಚಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಬಸ್‌ ನಿಲ್ದಾಣ ಮತ್ತು ರೈಲು ನಿಲ್ದಾಣಗಳಿಂದ ಹೊರ ಬರುವ ಪ್ರಯಾಣಿಕರನ್ನು ಸ್ವಾಗತಿಸುವ ರೀತಿ ಈ ಕೆಳಸೇತುವೆಗಳು ನಳನಳಿಸುವಂತಿರಬೇಕು. ಆದರೆ ಇಲ್ಲಿ ತದ್ವಿರುದ್ಧವಾಗಿದೆ. ಮೊದಲ ಬಾರಿಗೆ ನಗರಕ್ಕೆ ಬಂದವರು ಮತ್ತೆಂದಿಗೂ ಇಲ್ಲಿ ಸುಳಿಯಬಾರದು ಎಂಬ ನಿರ್ಣಯಕ್ಕೆ ಬರುತ್ತಾರೆ’ ಎಂದು ಜಿ.ಆರ್.ಪ್ರೀತಮ್ ಹೇಳಿದರು.

‘ಈ ಕೆಳಸೇತುವೆ ನಿರಾಶ್ರಿತರು ಮತ್ತು ಭಿಕ್ಷುಕರಿಗೆ ಆಶ್ರಯ ತಾಣವಾಗಿದೆ. ಮದ್ಯವ್ಯಸನಿಗಳು ಇಲ್ಲೇ ಇರುತ್ತಾರೆ. ಇದರಿಂದ ಮಹಿಳೆಯರು, ವಿದ್ಯಾರ್ಥಿನಿಯರು ಆತಂಕಪಡುವ ಸ್ಥಿತಿ ಎದುರಾಗಿದೆ. ಇಲ್ಲಿ ಸುರಕ್ಷತೆ ವಾತಾವರಣ ನಿರ್ಮಾಣವಾಗಬೇಕು’ ಎಂದು ರಕ್ಷಿತಾ ಸಿದ್ದರಾಜು ಅಭಿಪ್ರಾಯಪಟ್ಟರು.

‘ಹಣಕ್ಕೆ ಪೀಡಿಸುತ್ತಾರೆ’

‘ಲಿಂಗತ್ವ ಅಲ್ಪಸಂಖ್ಯಾತರು ಹಣಕ್ಕಾಗಿ ಪೀಡಿಸುತ್ತಾರೆ. ನಿರ್ಲಕ್ಷಿಸಿ ಮುಂದೆ ಸಾಗಿದರೂ ಬಿಡದೇ ಕೈಹಿಡಿದು ಎಳೆದಾಡಿ ಬಲವಂತದಿಂದ ಹಣ ವಸೂಲಿ ಮಾಡುತ್ತಾರೆ. ಇಂಥವರಿಂದ ಸಾರ್ವಜನಿಕರಿಗೆ ರಕ್ಷಣೆ ಒದಗಿಸಬೇಕು’ ಎಂದು ಪಾದಚಾರಿ ಹೇಮಂತ್ ಜಿ.ಎಸ್. ಆಗ್ರಹಿಸಿದರು.

‘ಒಂದೆಡೆ ಭಿಕ್ಷಾಟನೆ ಮಾಡುವವರ ಕಾಟ. ಮತ್ತೊಂದೆಡೆ ಲೈಂಗಿಕ ಕಾರ್ಯಕರ್ತೆಯರ ಹಾವಳಿ. ಇದರಿಂದ ಉಸಿರುಗಟ್ಟುವ ವಾತಾವರಣ ಎದುರಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಿ.ಸಿ.ಟಿ.ವಿ ಕ್ಯಾಮೆರಾಗಳು ಸಕ್ರಿಯವಾಗಿರುವಂತೆ ನೋಡಿಕೊಳ್ಳಬೇಕು. ಶುದ್ಧ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸುಸಜ್ಜಿತ ವ್ಯವಸ್ಥೆ ಕಲ್ಪಿಸಬೇಕು. ಸೂಕ್ತ ನಿರ್ವಹಣೆ ಆಗಬೇಕು
ನೂರ್ ಮೊಹಮ್ಮದ್, ಬಟ್ಟೆ ವ್ಯಾಪಾರಿ
ಸಂಯೋಜಿತ ವ್ಯಾಪಾರ ವ್ಯವಸ್ಥೆ ಕಲ್ಪಿಸಬೇಕು. ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ನೀಡಬೇಕು. ಟೈಲ್ಸ್ ಬದಲಿಸಬೇಕು. ಚಾವಣಿ ಮತ್ತು ಗೋಡೆಗಳಿಗೆ  ಸುಣ್ಣಬಣ್ಣ ಬಳಿಯಬೇಕು
ಶರತ್ ಕೆ.ಆರ್., ಪ್ರಯಾಣಿಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.