ADVERTISEMENT

ಬ್ರ್ಯಾಂಡ್ ಬೆಂಗಳೂರು: ಎಂಎಆರ್‌ ಕಾಮಗಾರಿ ಚುರುಕು

ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ, ಶೇಕಡ 90ರಷ್ಟು ಕೆಲಸ ಪೂರ್ಣ

ಕೆ.ಎಸ್.ಸುನಿಲ್
Published 20 ಅಕ್ಟೋಬರ್ 2025, 23:30 IST
Last Updated 20 ಅಕ್ಟೋಬರ್ 2025, 23:30 IST
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋ ಮೀಟರ್ ಉದ್ದದ ಪ್ರಮುಖ ಮುಖ್ಯರಸ್ತೆ ಕಾಮಗಾರಿ ನಡೆಯುತ್ತಿದೆ. 
ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋ ಮೀಟರ್ ಉದ್ದದ ಪ್ರಮುಖ ಮುಖ್ಯರಸ್ತೆ ಕಾಮಗಾರಿ ನಡೆಯುತ್ತಿದೆ.    

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ವತಿಯಿಂದ ನಿರ್ಮಿಸುತ್ತಿರುವ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ 10.7 ಕಿಲೋ ಮೀಟರ್ ಉದ್ದದ ಪ್ರಮುಖ ಮುಖ್ಯರಸ್ತೆ (ಮೇಜರ್‌ ಆರ್ಟೀರಿಯರ್‌ ರೋಡ್‌–ಎಂಎಆರ್‌) ಕಾಮಗಾರಿ ಚುರುಕು ಪಡೆದಿದೆ. 

ಎಂಎಆರ್‌ನಿಂದ ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಗೆ ಸಂಪರ್ಕ ಸಿಗುವ ಜತೆಗೆ, ಸೂಲಿಕೆರೆ–ರಾಮಸಂದ್ರ, ಕೆಂಚಾಪುರ, ಕನ್ನಹಳ್ಳಿ ಗ್ರಾಮಗಳಿಗೂ ಸಂಪರ್ಕ ಸುಲಭವಾಗಲಿದೆ. ಇದಲ್ಲದೆ, ನಾಡಪ್ರಭು ಕೆಂಪೇಗೌಡ ಬಡಾವಣೆಯ 56 ರಸ್ತೆಗಳಿಗೆ ಸಂಪರ್ಕ ಒದಗಿಸಲಿದೆ. ನೈಸ್‌ ರಸ್ತೆಗೆ ಸಮಾನಾಂತರವಾಗಿ ಈ ರಸ್ತೆಯನ್ನು ನಿರ್ಮಿಸಲಾಗುತ್ತಿದೆ.

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಯ ಹಲವು ಅನುಮತಿ ಪ್ರಕ್ರಿಯೆಗಳು, ಟೆಂಡರ್‌ ಸಮ್ಮತಿ ಕಾರ್ಯಗಳು ಮುಗಿದಿರುವುದರಿಂದ ಎಂಎಆರ್‌ ಕಾಮಗಾರಿ ವೇಗ ಪಡೆದುಕೊಂಡಿದ್ದು, ಶೇಕಡ 90ರಷ್ಟು ಪೂರ್ಣಗೊಂಡಿದೆ. ಆದರೆ, ರೈಲ್ವೆ ಇಲಾಖೆ ಅನುಮತಿ ನೀಡುವುದು ತಡವಾಗಿರುವ ಕಾರಣ ನವೆಂಬರ್‌ ವೇಳೆಗೆ ಪೂರ್ಣಗೊಳ್ಳಬೇಕಿದ್ದ ಕಾಮಗಾರಿ ಒಂದೆರೆಡು ತಿಂಗಳು ವಿಳಂಬವಾಗಲಿದೆ. 

ADVERTISEMENT

ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ ಬಿಡಿಎ 2018ರಲ್ಲಿ ₹575 ಕೋಟಿ ವೆಚ್ಚದಲ್ಲಿ ಈ ಯೋಜನೆ ಆರಂಭಿಸಿದ್ದು, ಇದು 330 ಅಡಿ ಅಗಲದ ರಸ್ತೆಯಾಗಿದೆ. ಆರು ಪಥ, ಎರಡೂ ಬದಿಗಳಲ್ಲಿ ಸರ್ವಿಸ್ ರಸ್ತೆ ಹಾಗೂ ತಡೆಗೋಡೆಗಳ ಸಹಿತ ನಿರ್ಮಿಸಲಾಗುತ್ತಿದೆ. ಎಂಎಆರ್‌ನಲ್ಲಿ 2.90 ಕಿ.ಮೀ, 5.10 ಕಿ.ಮೀ. ಹಾಗೂ 9.70 ಕಿ.ಮೀನಲ್ಲಿ ಅಂಡರ್‌ಪಾಸ್‌ ನಿರ್ಮಾಣವಾಗಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಎಂಎಆರ್‌ನಲ್ಲಿ 64 ಕಿರು ಸೇತುವೆ, ಚಲ್ಲಘಟ್ಟದ ಬಳಿ 250 ಮೀಟರ್‌ ಉದ್ದದ ಸುರಂಗ ರಸ್ತೆ ನಿರ್ಮಾಣದ ಜೊತೆಗೆ ರೈಲು ಕೆಳಸೇತುವೆ ಸಹ ಒಳಗೊಂಡಿದೆ. ಇದು ಬೆಂಗಳೂರು ಪಶ್ಚಿಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಾಗಲಿದೆ.

ನಾಡಪ್ರಭು ಕೆಂಪೇಗೌಡ ಬಡಾವಣೆಯ ಎಲ್ಲ ಒಂಬತ್ತು ಬ್ಲಾಕ್‌ಗಳನ್ನು ಸಂಪರ್ಕಿಸುವ ಈ ರಸ್ತೆಯು ಬಳಕೆಗೆ ಲಭ್ಯವಾದರೆ ಬಡಾವಣೆಯಲ್ಲಿ ನಿವೇಶನ ಹೊಂದಿರುವವರು ಮನೆಗಳ ನಿರ್ಮಾಣ ಮಾಡಲು ಉತ್ತೇಜನ ದೊರೆಯಲಿದೆ.

ಬಡಾವಣೆಯಲ್ಲಿ ಒಂದು ಕಿಲೋ ಮೀಟರ್‌ ಹೊರತುಪಡಿಸಿ ಉಳಿದ ಭಾಗಗಳಲ್ಲಿ ಶೇಕಡ 80ರಷ್ಟು ಕಾಮಗಾರಿ ನಡೆದಿತ್ತು. ಪ್ರಮುಖ ಪ್ರದೇಶಗಳಾದ ಮಾಚೋಹಳ್ಳಿ, ಸೂಲಿಕೆರೆ, ಕನ್ನಹಳ್ಳಿ ಮತ್ತು ಚಲ್ಲಘಟ್ಟದಲ್ಲಿ ಭೂಸ್ವಾಧೀನ ಸಮಸ್ಯೆಯಿಂದಾಗಿ ಯೋಜನೆಯು ಹಿನ್ನಡೆಯನ್ನು ಅನುಭವಿಸಿತ್ತು.

ಕೆಂಪೇಗೌಡ ಬಡಾವಣೆಯೊಳಗೆ ಹಾದು ಹೋಗುವ ಎಂಎಆರ್‌ ಮತ್ತು ಹೆದ್ದಾರಿ ಸಂಪರ್ಕಿಸಲು ರ್‍ಯಾಂಪ್ ನಿರ್ಮಿಸಬೇಕು ಎಂದು ನಾಡಪ್ರಭು ಕೆಂಪೇಗೌಡ ಬಡಾವಣೆ ಮುಕ್ತ ವೇದಿಕೆ ಪ್ರತಿನಿಧಿಗಳು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಬಂದ ಬಳಿಕ ಸಚಿವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಜತೆಗೆ ರಸ್ತೆ ಸಂಪರ್ಕ ಕಲ್ಪಿಸುವ ಕುರಿತು ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರಿಗೆ ಬರೆದ ಪತ್ರದ ಕುರಿತು ಚರ್ಚಿಸಲಾಗಿದೆ.

 ಪ್ರಮುಖ ಮುಖ್ಯರಸ್ತೆ ಕಾಮಗಾರಿ.

‘ನಾಡಪ್ರಭು ಕೆಂಪೇಗೌಡ ಬಡಾವಣೆಯನ್ನು ಬಿಡಿಎ ವಿಸ್ತರಿಸುತ್ತಿದ್ದು, 9 ಸಾವಿರ ಎಕರೆ ಜಮೀನು ಸ್ವಾಧೀನ ಪಡಿಸಿಕೊಳ್ಳಲು ನಿರ್ಧರಿಸಿದೆ. ಬಡಾವಣೆಯ ವಿಸ್ತರಣೆಗಾಗಿ ಗುರುತಿಸಿರುವ ಜಮೀನುಗಳು ಮೈಸೂರು ರಸ್ತೆ ಮತ್ತು ಮಾಗಡಿ ರಸ್ತೆಯ ನಡುವೆ ಹಾಗೂ ನೈಸ್ ರಸ್ತೆಯ ಹೊರಗಿನ 17 ಗ್ರಾಮಗಳ ವ್ಯಾಪ್ತಿಯಲ್ಲಿವೆ. ಸಾವಿರಾರು ಕುಟುಂಬಗಳು ವಾಸವಾಗಿವೆ. ನೈಸ್ ರಸ್ತೆಗೆ ಸಮಾನಾಂತರವಾಗಿರುವ ಪ್ರಮುಖ ಸಂಪರ್ಕ ರಸ್ತೆಯೇ ಬಡಾವಣೆಗೆ ಪ್ರಾಥಮಿಕ ಸಂಪರ್ಕ ರಸ್ತೆಯಾಗಿದೆ. ಆದ್ದರಿಂದ ಹೆದ್ದಾರಿಯೊಂದಿಗಿನ ಸುಗಮ ಸಂಪರ್ಕ ಅನಿವಾರ್ಯವಾಗಿದೆ. ಇಲ್ಲದಿದ್ದರೆ ಪ್ರಯಾಣ ಸಮಯ ಹೆಚ್ಚಳ, ಚಲ್ಲಘಟ್ಟ ಮತ್ತು ಕುಂಬಳಗೋಡಿನಲ್ಲಿ ದಟ್ಟಣೆ ಹೆಚ್ಚಾಗಬಹುದು’ ಎಂದು ಮುಕ್ತ ವೇದಿಕೆ ಹೇಳಿದೆ.

ರೈಲ್ವೆ ಕಾಮಗಾರಿ: ನವೆಂಬರ್‌ ಅನುಮತಿ ಸಾಧ್ಯತೆ
‘ಎಂಎಆರ್ ರಸ್ತೆ ಕಾಮಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದೆ. ಸೂಲಿಕೆರೆ ಬಳಿಯ ಅರಣ್ಯದಲ್ಲಿ 180 ಮೀಟರ್‌ ರಸ್ತೆ ಕೆಲಸ ಬಾಕಿ ಇದೆ. ಅರಣ್ಯ ಇಲಾಖೆ ಅನುಮತಿ ದೊರೆತಿದ್ದು ಕೆಲಸ ಪ್ರಗತಿಯಲ್ಲಿದೆ. ಕೆಂಗೇರಿ ಮತ್ತು ಹೆಜ್ಜಾಲ ರೈಲು ನಿಲ್ದಾಣಗಳ ನಡುವೆ ಚಲಘಟ್ಟ ಬಳಿ ರೈಲ್ವೆ ಕೆಳಸೇತುವೆ ಕಾಮಗಾರಿ ನಡೆಯುತ್ತಿದ್ದು 6–7 ಹಳಿಗಳನ್ನು ಬದಲಿಸಲು ರೈಲ್ವೆ ಇಲಾಖೆ ಅನುಮತಿ ನೀಡಬೇಕು. ಗರ್ಡರ್‌ಗಳು  (ತೊಲೆ) ಸಿದ್ದಗೊಂಡಿದ್ದು 6–7 ತಾಸು ಕೆಲಸ ಹಿಡಿಯಲಿದೆ. ಈ ವೇಳೆ ರೈಲು ಸಂಚಾರ ಸ್ಥಗಿತಗೊಳಿಸಬೇಕಿದೆ. ಇಲಾಖೆಯ ಅಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಅನುಮತಿ ನೀಡುವುದು ವಿಳಂಬವಾದ ಕಾರಣ ಕಾಮಗಾರಿ ಪೂರ್ಣಗೊಳ್ಳುವುದು ಎರಡು ತಿಂಗಳು ತಡವಾಗಬಹುದು. ನವೆಂಬರ್‌ಗೆ ಅನುಮತಿ ನೀಡುವುದಾಗಿ ರೈಲ್ವೆ ಇಲಾಖೆ ಹೇಳಿದೆ’ ಎಂದು ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.