ADVERTISEMENT

ಬೆಂಗಳೂರು: ನಗರದಲ್ಲೆಡೆ ಸಡಗರದ ಸಂಕ್ರಾಂತಿ

​ಪ್ರಜಾವಾಣಿ ವಾರ್ತೆ
Published 14 ಜನವರಿ 2021, 19:30 IST
Last Updated 14 ಜನವರಿ 2021, 19:30 IST
ನಗರದ ಕನಕನಪಾಳ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ದನಗಳೊಂದಿಗೆ ಕಿಚ್ಚು ಹಾಯುವ ಮೂಲಕ ನಾಗರಿಕರು ಸಂಭ್ರಮದಿಂದ ಆಚರಿಸಿದರು –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್
ನಗರದ ಕನಕನಪಾಳ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ದನಗಳೊಂದಿಗೆ ಕಿಚ್ಚು ಹಾಯುವ ಮೂಲಕ ನಾಗರಿಕರು ಸಂಭ್ರಮದಿಂದ ಆಚರಿಸಿದರು –ಪ್ರಜಾವಾಣಿ ಚಿತ್ರ/ಎಂ.ಎಸ್. ಮಂಜುನಾಥ್   

ಬೆಂಗಳೂರು: ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ನಗರದ ದೇಗಲಗಳಲ್ಲಿ ವಿಶೇಷ ಪೂಜೆ, ಅಲ್ಲಲ್ಲಿ ಗೋಪೂಜೆ, ಕಿಚ್ಚು ಹಾಯಿಸುವ ಕಾರ್ಯಕ್ರಮಗಳ ಗುರುವಾರ ನಡೆದವು. ಚಿಣ್ಣರು, ಮಹಿಳೆಯರು ಹೊಸ ಬಟ್ಟೆ ತೊಟ್ಟು ಎಳ್ಳು–ಬೆಲ್ಲ ಮತ್ತು ಕಬ್ಬು ಹಂಚಿ ಸಂಭ್ರಮಿಸಿದರು.

ಬನಶಂಕರಿ ದೇಗುಲ, ರಾಜರಾಜೇಶ್ವರಿ ದೇವಾಲಯ, ಕಾಡುಮಲ್ಲೇಶ್ವರ ದೇಗುಲ ಹಾಗೂ ವಿವಿಧ ಶಿವನ ದೇಗುಲಗಳಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆದವು. ಚಳಿ ನಡುವೆಯೂ ಬೆಳಿಗ್ಗೆಯಿಂದಲೇ ಸರದಿ ಸಾಲಿನಲ್ಲಿ ಭಕ್ತರು ದೇವಾಲಯದ ಮುಂದೆ ನಿಂತಿದ್ದರು.

ಮನೆ ಮನೆಗಳೂ ತಳಿರು ತೋರಣಗಳಿಂದ ಸಿಂಗಾರಗೊಂಡಿದ್ದವು. ಹಲವು ಬೀದಿಗಳಲ್ಲಿ ಮಹಿಳೆಯರು ಬುಧವಾರ ರಾತ್ರಿಯೇ ರಂಗೋಲಿ ಬಿಡಿಸಿ ಸಂಭ್ರಮಿಸಿದ್ದರು. ಬಣ್ಣದ ರಂಗೋಲಿಯಲ್ಲಿ ರಚಿಸಿದ್ದ ಸಂಕ್ರಾಂತಿ ಶುಭಾಶಯಗಳು ಮನೆಗಳ ಮುಂದೆ ರಾರಾಜಿಸಿದವು.

ADVERTISEMENT

ಮಹಿಳೆಯರು ಮತ್ತು ಮಕ್ಕಳು ಮಧ್ಯಾಹ್ನದ ನಂತರ ಮನೆ ಮನೆಗೆ ಎಳ್ಳು, ಬೆಲ್ಲದ ಪೊಟ್ಟಣ ಮತ್ತು ಕಬ್ಬು ಹಂಚಿ ಖುಷಿಪಟ್ಟರು. ಕೋವಿಡ್ ಕಾರಣದಿಂದ ಕಳೆದ ವರ್ಷ ಹಲವು ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಆಗಿರಲಿಲ್ಲ.

ಜಯನಗರ ಶಾಸಕಿ ಸೌಮ್ಯರೆಡ್ಡಿ ಅವರು ಪೌರ ಕಾರ್ಮಿಕರೊಂದಿಗೆ ವಿಶೇಷವಾಗಿ ಸಂಕ್ರಾಂತಿ ಆಚರಿಸಿದರು. ಕಾರ್ಮಿಕರಿಗೆ ಎಳ್ಳು ಬೆಲ್ಲದ ಜತೆಗೆ ಸೀರೆ ಮತ್ತು ಪಂಚೆ ನೀಡಿ ಸತ್ಕರಿಸಿದರು.

ಮಹಾಲಕ್ಷ್ಮಿ ಎಜುಕೇಷನಲ್ ಟ್ರಸ್ಟ್ ಮತ್ತು ಬಿಜೆಪಿ ಯುವ ಮೋರ್ಚಾದಿಂದ ಗೋಪೂಜೆ ನೆರವೇರಿಸಲಾಯಿತು. ನಂದಿನಿ ಲೇಔಟ್‌ನ ಮಾರುತಿ ನಗರದಲ್ಲಿ ನಂದಿನಿ ಉತ್ಸವ ಮತ್ತು ಸಂಕ್ರಾಂತಿ ಉತ್ಸವ ಸಮಿತಿಯಿಂದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ದನಗಳನ್ನು ಕಿಚ್ಚು ಹಾಯಿಸುವ ಮೂಲಕ ಗ್ರಾಮೀಣ ಸಂಸ್ಕೃತಿಯನ್ನು ನಿವಾಸಿಗಳಿಗೆ ನೆನಪಿಸಲಾಯಿತು.

ತೆಲುಗು ವಿಜ್ಞಾನ ಸಮಿತಿಯಿಂದ ವಯ್ಯಾಲಿಕಾವಲಿನಲ್ಲಿ ಸುಗ್ಗಿ ಹಬ್ಬವನ್ನು ಗ್ರಾಮೀಣ ಸೊಗಡಿನ ಮಾದರಿಯಲ್ಲಿ ಆಚರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.