ಬೆಂಗಳೂರು: ನಗರದ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ವ್ಯಕ್ತಿಯೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದು, ಪೊಲೀಸರು ಆರೋಪಿ ಪತ್ತೆಗೆ ಮುಂದಾಗಿದ್ದಾರೆ.
ಯುವತಿ ಜತೆಗೆ ವ್ಯಕ್ತಿ ಅಸಭ್ಯವಾಗಿ ವರ್ತನೆ ಮಾಡಿದ್ದ ದೃಶ್ಯವನ್ನು ಮಾಲ್‌ಗೆ ಬಂದಿದ್ದ ಯುವಕ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದ. ಬಳಿಕ ಘಟನೆಯ ಮಾಹಿತಿಯನ್ನು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದರು. ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದರು. ಮಾಹಿತಿ ಆಧರಿಸಿ ಮಾಗಡಿ ರಸ್ತೆಯ ಪೊಲೀಸರು ವಿಡಿಯೊವನ್ನು ಪರಿಶೀಲನೆ ನಡೆಸಿದ್ದಾರೆ.
‘ಘಟನೆ ಕುರಿತು ಇದುವರೆಗೂ ಯಾರೂ ದೂರು ನೀಡಿಲ್ಲ’ ಎಂದು ಪೊಲೀಸರು ತಿಳಿಸಿದರು.
‘ಅ.29ರಂದು ಸಂಜೆ 6.30ರ ಸುಮಾರಿಗೆ ಕುಟುಂಬಸ್ಥರ ಜತೆಗೆ ಮಾಲ್‌ಗೆ ತೆರಳಿದ್ದೆ. ಅದೇ ವೇಳೆಗೆ ವ್ಯಕ್ತಿಯೂ ಬಂದಿದ್ದ. ಇಡೀ ಮಾಲ್‌ನಲ್ಲಿ ಅನುಮಾನಾಸ್ಪದವಾಗಿ ಓಡಾಟ ನಡೆಸುತ್ತಿದ್ದ. ಆತನನ್ನೇ ಹಿಂಬಾಲಿಸಿದೆ. ಆಗ ಯುವತಿಯರೊಂದಿಗೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ. ಬಳಿಕ ಮಾಲ್‌ನ ಆಡಳಿತ ಮಂಡಳಿ ಹಾಗೂ ಭದ್ರತಾ ಸಿಬ್ಬಂದಿಗೂ ಮಾಹಿತಿ ನೀಡಿದೆ. ಭದ್ರತಾ ಸಿಬ್ಬಂದಿ ಆ ವ್ಯಕ್ತಿಯನ್ನು ಹುಡುಕುವಷ್ಟರಲ್ಲಿ ಅಲ್ಲಿಂದ ನಾಪತ್ತೆಯಾಗಿದ್ದ’ ಎಂದು ವಿಡಿಯೊ ಮಾಡಿದ ಯುವಕ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.