ADVERTISEMENT

ಮಾವು–ಹಲಸು ಮಾರಾಟ ಮೇಳಕ್ಕೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

​ಪ್ರಜಾವಾಣಿ ವಾರ್ತೆ
Published 21 ಮೇ 2025, 15:05 IST
Last Updated 21 ಮೇ 2025, 15:05 IST
ಹಾಪ್‌ಕಾಮ್ಸ್‌ ಆಯೋಜಿಸಿದ್ದ ‘ಮಾವು ಹಲಸು ಹಾಗೂ ಹುಣಸೆ ಹಣ್ಣಿನ ಮಾರಾಟ ಮೇಳ’ದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾವಿನ ಹಣ್ಣುಗಳನ್ನು ಪ್ರದರ್ಶಿಸಿದರು
ಪ್ರಜಾವಾಣಿ ಚಿತ್ರ
ಹಾಪ್‌ಕಾಮ್ಸ್‌ ಆಯೋಜಿಸಿದ್ದ ‘ಮಾವು ಹಲಸು ಹಾಗೂ ಹುಣಸೆ ಹಣ್ಣಿನ ಮಾರಾಟ ಮೇಳ’ದಲ್ಲಿ ಸಚಿವ ರಾಮಲಿಂಗಾರೆಡ್ಡಿ ಅವರು ಮಾವಿನ ಹಣ್ಣುಗಳನ್ನು ಪ್ರದರ್ಶಿಸಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ತೋಟದ ಬೆಳೆಗಾರರ ಸಹಕಾರಿ ಮಾರಾಟ ಮತ್ತು ಸಂಸ್ಕರಣ ಸಂಘದ (ಹಾಪ್‌ಕಾಪ್ಸ್‌) ವತಿಯಿಂದ ‘ಮಾವು, ಹಲಸು, ಹುಣಸೆ ಹಣ್ಣು ಮಾರಾಟ ಮೇಳ’ಕ್ಕೆ ಬುಧವಾರ ಚಾಲನೆ ನೀಡಲಾಯಿತು.

ಹಾಪ್‌ಕಾಮ್ಸ್‌ನಲ್ಲಿ ಮಾರಾಟವಾಗುವ ಮಾವಿನ ಹಣ್ಣನ್ನು ನೈಸರ್ಗಿಕವಾಗಿ ಮಾಗಿಸಲಾಗುತ್ತದೆ. ರಾಸಾಯನಿಕ ಮುಕ್ತ ಮಾವಿನ ಹಣ್ಣನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ಮೇಳವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ. ಹಾಪ್‌ಕಾಮ್ಸ್‌ನ ಎಲ್ಲಾ ಮಾರಾಟ ಮಳಿಗೆಗಳಲ್ಲಿ ಮೇಳ ಆರಂಭವಾಗಿದೆ.

ಮೇಳಕ್ಕೆ ಚಾಲನೆ ನೀಡಿದ ನಂತರ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ‘ರೈತರ ತೋಟಗಳಿಂದ ನೇರ ಖರೀದಿ ವ್ಯವಸ್ಥೆ, ರೈತರ ಫಸಲಿಗೆ ಉತ್ತಮ ಧಾರಣೆ ಒದಗಿಸಿಕೊಡುವುದು ಈ ಮೇಳದ ಉದ್ದೇಶವಾಗಿದೆ. ಆರೋಗ್ಯಕರ ಮಾವು, ಹಲಸು ಮತ್ತು ಹುಣಸೆ ಹಣ್ಣುಗಳನ್ನು ರಿಯಾಯಿತಿ ದರಗಳಲ್ಲಿ ಮಾರಾಟಕ್ಕೆ ವ್ಯವಸ್ಥೆ ಮಾಡಿದ್ದು, ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಬೇಕು’ ಎಂದು ಕರೆ ನೀಡಿದರು.

ADVERTISEMENT

‘ಮೇಳವು ಮೇ 21ರಿಂದ 31ರವರೆಗೆ ನಡೆಯಲಿದ್ದು, ಹಲವು ತಳಿಯ ಮಾವಿನ ಮತ್ತು ಹಲಸಿನ ಹಣ್ಣುಗಳನ್ನು ಶೇಕಡ 5 ರಿಂದ 10ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ಹಾಪ್‌ಕಾಮ್ಸ್ ಅಧ್ಯಕ್ಷ ಎನ್. ಗೋಪಾಲಕೃಷ್ಣ ಮಾಹಿತಿ ನೀಡಿದರು.

‘ಕೋಲಾರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತದೆ. ರಾಜ್ಯದಲ್ಲಿ ಪ್ರಮುಖವಾಗಿ ಬಾದಾಮಿ, ಸಿಂಧೂರ, ನೀಲಂ, ತೋತಾಪುರಿ, ಮಲ್ಲಿಕಾ, ರಸಪೂರಿ ತಳಿಗಳನ್ನು ಬೆಳೆಯಲಾಗುತ್ತದೆ. ಹಲಸು ಕೂಡ ಒಂದು ಪ್ರಮುಖ ತೋಟಗಾರಿಕೆ ಬೆಳೆಯಾಗಿದ್ದು, ತುಮಕೂರು, ದಕ್ಷಿಣ ಕನ್ನಡ, ಹಾಸನ ಜಿಲ್ಲೆಗಳಲ್ಲಿ ಹಲಸಿನ ಹಣ್ಣಿನ ಬೆಳೆಯಿದೆ’ ಎಂದು ಮಾಹಿತಿ ನೀಡಿದರು.

ಶಾಸಕ ಉದಯ್ ಬಿ. ಗರುಡಾಚಾರ್ ಉಪಸ್ಥಿತರಿದ್ದರು.

‘ಆನ್‌ಲೈನ್‌ ಮಾರಾಟಕ್ಕೆ ಉತ್ತೇಜನ’

‘ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿದೆ. ಗ್ರಾಹಕರ ಅವಶ್ಯಕತೆಗಳಿಗೆ ತಕ್ಕಂತೆ ಹಾಪ್‌ಕಾಮ್ಸ್‌ ಆನ್‌ಲೈನ್‌ ಮಾರಾಟಕ್ಕೆ ಉತ್ತೇಜನ ನೀಡಬೇಕು. ವಸತಿ ಸಮುಚ್ಛಯಗಳಿಗೆ ಸಂಚಾರಿ ಮಾರಾಟ ವಾಹನಗಳ ಮೂಲಕ ತರಕಾರಿ–ಹಣ್ಣುಗಳನ್ನು ಪೂರೈಕೆ ಮಾಡಬೇಕು. ಇದಕ್ಕಾಗಿ ಕಾರ್ಪೊರೇಟ್‌ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ​ನಿಧಿಯ ಮೂಲಕ ವಿದ್ಯುತ್‌ ಚಾಲಿತ ವಾಹನಗಳನ್ನು ಖರೀದಿಸಿ ಹಾಪ್‌ಕಾಮ್ಸ್‌ಗೆ ನೀಡಲಾಗುವುದು’ ಎಂದು ರಾಮಲಿಂಗಾರೆಡ್ಡಿ ಹೇಳಿದರು.

ಮಾವಿನ ತಳಿ;ರಿಯಾಯಿತಿ ದರ (ಒಂದು ಕೆ.ಜಿ.ಗೆ ₹ ಗಳಲ್ಲಿ)

ತೋತಾಪುರಿ;36

ಸೆಂಧೂರ;75

ಬೈಗಾನ್‌ಪಲ್ಲಿ;82

ಬಾದಾಮಿ;120

ರಸಪೂರಿ;135

ಮಲ್ಲಿಕಾ;150

ಕೇಸರ್;155

ದಶೇರಿ;165

ಕಾಲಾಪಾಡು;1800

ಇಮಾಮ್‌ ಪಸಂದ್;225

ಮಲಗೋವಾ;245

ಸಕ್ಕರಗುತ್ತಿ;435

ಹಲಸಿನ ಹಣ್ಣು; 28 (ಪ್ರತಿ ಕೆ.ಜಿ.ಗೆ)

ಹುಣಸೆ ಹಣ್ಣು;100

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.