ADVERTISEMENT

ಮ್ಯಾಚ್ ಫಿಕ್ಸಿಂಗ್: ಆಟಗಾರನಿಗೆ ₹ 40 ಲಕ್ಷ ಆಮಿಷ

ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 16 ಜನವರಿ 2022, 19:47 IST
Last Updated 16 ಜನವರಿ 2022, 19:47 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕ್ರಿಕೆಟ್ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಆಟಗಾರರೊಬ್ಬರಿಗೆ ₹ 40 ಲಕ್ಷ ಆಮಿಷ
ವೊಡ್ಡಲಾಗಿದ್ದು, ಈ ಬಗ್ಗೆ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಮಿಳುನಾಡು ರಣಜಿ ತಂಡದ ಆಟಗಾರ ಸತೀಶ್ ರಾಜಗೋಪಾಲ್‌ ಅವರಿಗೆ ಹಣದ ಆಮಿಷವೊಡ್ಡಲಾಗಿದ್ದು, ಈ ಬಗ್ಗೆ ಲೋಕೇಶ್‌ ಎಂಬುವರು ದೂರು ನೀಡಿದ್ದಾರೆ. ಆರೋಪಿ ಎನ್ನಲಾದ ಬನ್ನಿ ಆನಂದ್ ಎಂಬಾತನ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಐಪಿಎಲ್‌ ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್, ಮುಂಬೈ ಇಂಡಿಯನ್ಸ್ ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್‌ ತಂಡಗಳಲ್ಲಿ ಸತೀಶ್ ಆಟವಾಡಿದ್ದರು. ಮುಂಬರುವ ‘ತಮಿಳುನಾಡು ಪ್ರೀಮಿಯರ್ ಲೀಗ್ (ಟಿಎನ್‌ಪಿಎಲ್)’ ಪಂದ್ಯಾವಳಿಯ 'ಚೆಪಾಕ್ ಸೂಪರ್ ಗಿಲ್ಲೀಸ್’ ತಂಡದ ಪರ ಆಡಲು ತಯಾರಿ ನಡೆಸುತ್ತಿದ್ದಾರೆ’

ADVERTISEMENT

‘ಆಲ್‌ರೌಂಡರ್‌ಗಳಾದ ಸತೀಶ್, ಇನ್‌ಸ್ಟಾಗ್ರಾಂ ಆ್ಯಪ್‌ನಲ್ಲಿ ಖಾತೆ ಹೊಂದಿದ್ದಾರೆ. ಅವರಿಗೆ ಜ.3ರಂದು ಸಂದೇಶ ಕಳುಹಿಸಿದ್ದ ಆರೋಪಿ, ‘ಟಿಎನ್‌ಪಿಎಲ್‌ ಪಂದ್ಯಾವಳಿ ಸಂದರ್ಭದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡುತ್ತೇನೆ. ನೀವೂ ಭಾಗಿಯಾಗಬೇಕು. ಅದಕ್ಕಾಗಿ ₹ 40 ಲಕ್ಷ ನೀಡುತ್ತೇನೆ’ ಎಂದಿದ್ದ. ಅದಕ್ಕೆ ಒಪ್ಪದ ಸತೀಶ್, ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ಇತ್ತೀಚೆಗಷ್ಟೇ ದೂರು ನೀಡಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

‘ಬಿಸಿಸಿಐ ಸೂಚನೆ ಮೇರೆಗೆ ಲೋಕೇಶ್ ಎಂಬುವರು ಜಯನಗರ ಠಾಣೆಗೆ ದೂರು ನೀಡಿದ್ದಾರೆ. ಆಟಗಾರ ಸತೀಶ್ ಅವರಿಗೆ ಸಂದೇಶ ರವಾನೆಯಾಗಿದ್ದ ಇನ್‌ಸ್ಟಾಗ್ರಾಂ ಖಾತೆಯನ್ನು ಆರೋಪಿ ಬನ್ನಿ ಆನಂದ್ ನಿರ್ವಹಣೆ ಮಾಡುತ್ತಿರುವುದು ಗೊತ್ತಾಗಿದೆ. ಆತ ಬೆಂಗಳೂರಿನಲ್ಲಿ ವಾಸವಿರುವ ಸಂಗತಿಯೂ ಪತ್ತೆಯಾಗಿದೆ. ಆತನ ಬಂಧನಕ್ಕೆ ವಿಶೇಷ ತಂಡ ತನಿಖೆ ಮುಂದುವರಿಸಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.