ADVERTISEMENT

ವಚನಗಳನ್ನು ಜಗತ್ತಿಗೆ ಪಸರಿಸಬೇಕಿದೆ: ಸಚಿವ ಎಂ.ಬಿ.ಪಾಟೀಲ ಅಭಿಮತ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 17:40 IST
Last Updated 28 ಫೆಬ್ರುವರಿ 2026, 17:40 IST
ಕಾರ್ಯಕ್ರಮದಲ್ಲಿ ಡಿ.ಆರ್. ಪಾಟೀಲ, ಎಂ.ಬಿ. ಪಾಟೀಲ, ಕೃಷ್ಣ ದೀಕ್ಷಿತ್, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಅವರು ಕೃತಿಯನ್ನು ಜನಾರ್ಪಣೆ ಮಾಡಿದರು
ಕಾರ್ಯಕ್ರಮದಲ್ಲಿ ಡಿ.ಆರ್. ಪಾಟೀಲ, ಎಂ.ಬಿ. ಪಾಟೀಲ, ಕೃಷ್ಣ ದೀಕ್ಷಿತ್, ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ ಅವರು ಕೃತಿಯನ್ನು ಜನಾರ್ಪಣೆ ಮಾಡಿದರು   

ಬೆಂಗಳೂರು: ‘ನಾಡಿನ ಶರಣರ ವಚನಗಳನ್ನು ಜಗತ್ತಿಗೆ ಪಸರಿಸುವ ಕೆಲಸ ನಡೆಯುತ್ತಿದ್ದು, ಇದನ್ನು ನಿರಂತರ ಮುಂದುವರಿಸಿಕೊಂಡು ಹೋಗಬೇಕಿದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಹೇಳಿದರು.

ಮೈಸೂರಿನ ಜೆಎಸ್ಎಸ್ ಮಹಾವಿದ್ಯಾಲಯ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ವಚನಾಸ್ ಆಫ್ ಅಲ್ಲಮಪ್ರಭು-ಕಾಮೆಂಟರಿ’ ಸಂಪುಟ ಜನಾರ್ಪಣೆಯಾಯಿತು. ಇದು ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ಅವರ ‘ಅಲ್ಲಮ ಪ್ರಭುದೇವರ ವಚನ-ನಿರ್ವಚನ’ ಕೃತಿಯ ಭಾಷಾಂತರ ಕೃತಿಯಾಗಿದೆ. 

ಎಂ.ಬಿ. ಪಾಟೀಲ ಮಾತನಾಡಿ, ‘ವಚನ ಸಾಹಿತ್ಯದಲ್ಲಿ ಶ್ರೀಮಂತಿಕೆಯಿದೆ. ಅಲ್ಲಮ ಪ್ರಭು ಅವರ ವಚನಗಳು ಅರ್ಥೈಯಿಸಿಕೊಳ್ಳಲು ಕಷ್ಟವಾದರೂ, ಓದಿ ಅರ್ಥೈಯಿಸಿಕೊಂಡರೆ ಅದರಲ್ಲಿ ಹಿತಾನುಭವವಿದೆ. ವಚನ ಸಾಹಿತ್ಯ ಜಾಗತಿಕ ಮಟ್ಟದಲ್ಲಿ ತಲುಪಬೇಕಿದೆ. ಹಲವು ಭಾಷೆಗಳಲ್ಲಿ ವಚನ ಸಾಹಿತ್ಯ ಅನುವಾದವಾಗಬೇಕಿದೆ. ಈ ನಿಟ್ಟಿನಲ್ಲಿ ಅಲ್ಲಮ ಪ್ರಭು ಅವರ ವಚನವನ್ನು ಆಂಗ್ಲ ಭಾಷೆಗೆ ಭಾಷಾಂತರ ಮಾಡಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

‘ಶತಮಾನದ ಸಂತರೆನಿಸಿಕೊಂಡಿರುವ ಸಿದ್ದೇಶ್ವರ ಸ್ವಾಮೀಜಿ, ಅಲ್ಲಮ ಪ್ರಭು ಅವರ ವಚನಗಳ ಬಗ್ಗೆ ಅಪಾರ ಅರಿವು ಹೊಂದಿದ್ದರು. ಶೂನ್ಯ ಪೀಠದ ಬಗ್ಗೆ ವಿಶೇಷವಾದ ಜ್ಞಾನ ಅವರಲ್ಲಿತ್ತು. ಅಲ್ಲಮ ಪ್ರಭು ಅವರು ಶ್ರೇಷ್ಠ ವಚನಕಾರರಾಗಿದ್ದರು. ಎಲ್ಲಿಯೂ ನಿಲ್ಲದೇ, ಯಾವುದೇ ಪ್ರಭಾವಕ್ಕೂ ಒಳಗಾಗದೆ ದೇಶ ಸಂಚಾರ ಮಾಡಿದರು. ಇಂತಹ ವಿಶೇಷಣಗಳನ್ನು ಸಿದ್ದೇಶ್ವರ ಸ್ವಾಮೀಜಿ ಅವರಲ್ಲಿ ಕಾಣಬಹುದು’ ಎಂದರು. 

ಬಹುಭಾಷಾ ವಿದ್ವಾಂಸ ಮಲ್ಲೇಂಪುರ ಜಿ. ವೆಂಕಟೇಶ್, ‘ಸಿದ್ದೇಶ್ವರ ಸ್ವಾಮೀಜಿ ಅವರಿಗೆ ಶೂನ್ಯ ಪೀಠದ ಬಗ್ಗೆ ಹೆಚ್ಚಿನ ತಿಳುವಳಿಕೆಯಿತ್ತು. ಅಧ್ಯಾತ್ಮಿಕ ಲೋಕಕ್ಕೆ ಪ್ರವೇಶಿಸಬೇಕಾದವರಿಗೆ ಈ ಸಂಪುಟ ದಾರಿ ತೋರಲಿದೆ’ ಎಂದು ಶ್ಲಾಘಿಸಿದರು.

ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ, ವಿಜಯಪುರದ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ಒಡಿಶಾ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಗೌರವ ಸಲಹೆಗಾರ ಗೊ.ರು. ಚನ್ನಬಸಪ್ಪ, ಅಧ್ಯಕ್ಷ ಸಿ. ಸೋಮಶೇಖರ್‌, ಕರ್ನಾಟಕ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್. ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.