ADVERTISEMENT

ಬಿಬಿಎಂಪಿಗೂ ವ್ಯಾಪಿಸಿದ #MeToo: ಪಾಲಿಕೆ ಪೌರಕಾರ್ಮಿಕರಿಗೂ ಲೈಂಗಿಕ ಕಿರುಕುಳ

ಅತ್ತೆಗೆ ಅಧಿಕಾರಿಗಳಿಂದ ಕಿರುಕುಳ: ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಯುವಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 2:09 IST
Last Updated 26 ಅಕ್ಟೋಬರ್ 2018, 2:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಬಿಬಿಎಂಪಿಯ ಪೌರಕಾರ್ಮಿಕರ ಮೇಲೂ ಲೌಂಗಿಕ ದೌರ್ಜನ್ಯ ನಡೆಯುತ್ತಿದೆಯೇ?

ಹೌದು ಎನ್ನುತ್ತದೆ ಯುವಕನೊಬ್ಬ ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಬರಹ.

ಮೀ ಟೂ ಅಭಿಯಾನದಲ್ಲಿ ಶ್ರೀಮಂತ ಮಹಿಳೆಯರ ಬಗ್ಗೆ ಮಾತ್ರ ಚರ್ಚೆ ಯಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿರುವ ಯುವಕ, ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ತಮ್ಮ ಅತ್ತೆಗೆ ಬಿಬಿಎಂಪಿ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಫೇಸ್‌ಬುಕ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.

ADVERTISEMENT

‘ಒಂದೊತ್ತಿನ ಊಟಕ್ಕೂ ಪರದಾಡುವ ಜನರು ಪೌರಕಾರ್ಮಿಕ ಕೆಲಸಕ್ಕೆ ಬರುತ್ತಾರೆ. ಅಂತಹವರ ಮೇಲೆ ನೀಚ ಅಧಿಕಾರಿಗಳು ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ. ನಮ್ಮ ಅತ್ತೆ ಕೂಡಾ ಪೌರಕಾರ್ಮಿಕೆ. ಅವರನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿದ್ದಾರೆ. ಒಂದು ಗಂಟೆಗಳ ಕಾಲ ನಮ್ಮತ್ತೆ ಕಣ್ಣೀರು ಹಾಕಿದ್ದಾರೆ. ಇವರ ಕಾಮಚೇಷ್ಟೆಗೆ ಬಿಬಿಎಂಪಿ ಯಾವಾಗ ಬ್ರೇಕ್‌ ಹಾಕುತ್ತದೆಯೋ ನೋಡಬೇಕು’ ಎಂದು ಅವರು ಬರೆದು ಕೊಂಡಿದ್ದಾರೆ.

’ಹೆಸರು ಬಹಿರಂಗಪಡಿಸಲು ಇಚ್ಛಿಸುವುದಿಲ್ಲ. ಇದರಿಂದ ಅತ್ತೆಯ ಕೆಲಸಕ್ಕೆ ಕುತ್ತು ಬರಲಿದೆ’ ಎಂದು ಅವರು ತಿಳಿಸಿದ್ದಾರೆ.

ಇನ್ನೊಬ್ಬರು ಫೇಸ್‌ಬುಕ್‌ನಲ್ಲಿ ಪ್ರಕಟಿಸಿರುವ ಬರಹ ಈ ರೀತಿ ಇದೆ.

‘ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಕೇವಲ ಸ್ಯಾಂಡಲ್‌ವುಡ್‌, ಶ್ರೀಮಂತರಿಗೆ ಅಷ್ಟೇ ಅಲ್ಲ. ಬಡಜನರ ಮೇಲೂ ದೌರ್ಜನ್ಯಗಳು ನಡೆಯುತ್ತಿವೆ. ಬೆಂಗಳೂರಿನ ಪೌರಕಾರ್ಮಿಕರ ಮೇಲೆ ನಿತ್ಯ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಅನಕ್ಷರಸ್ಥರು ಎಂಬ ಕಾರಣಕ್ಕೆ ಅಧಿಕಾರಿಗಳು ಅವರ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ನಿತ್ಯ ಕೆಲಸಕ್ಕೆ ಹೋಗಬೇಕೆಂದರೆ, ಹಾಜರಾತಿ ಪಡೆಯಬೇಕೆಂದರೆ ಬಿಬಿಎಂಪಿ ಅಧಿಕಾರಿಗಳು ಹೇಳಿದ ಹಾಗೆ ನಡೆದುಕೊಳ್ಳಬೇಕು. ಇಲ್ಲದಿದ್ದರೆ ಹಾಜರಾತಿ ಕಟ್‌ ಮಾಡುತ್ತಾರೆ’.

‘ಪೌರಕಾರ್ಮಿಕರ ಬಳಿ ಸ್ಮಾರ್ಟ್‌ ಫೋನ್ ಇಲ್ಲ. ಇದ್ದಿದ್ದರೆ ಎಲ್ಲರ ಮುಖವಾಡ ಕಳಚಿ ಬೀಳುತ್ತಿತ್ತು’ ಎಂದೂ ಅವರು ಹೇಳಿದ್ದಾರೆ.

ಧೈರ್ಯದಿಂದ ದೂರು ನೀಡಿ

‘ಲೈಂಗಿಕ ದೌರ್ಜನ್ಯಗಳ ಕುರಿತು ಅಹವಾಲು ಆಲಿಸುವುದಕ್ಕಾಗಿಯೇ ಬಿಬಿಎಂಪಿಯಲ್ಲಿ ಪ್ರತ್ಯೇಕ ಸಮಿತಿ ಇದೆ. ಪೌರಕಾರ್ಮಿಕರಿರಲಿ ಯಾವುದೇ ಮಹಿಳಾ ಸಿಬ್ಬಂದಿಯೇ ಇರಲಿ, ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆದರೆ ದೈರ್ಯವಾಗಿ ದೂರು ನೀಡಿ’ ಎಂದು ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ತಿಳಿಸಿದರು.

‘ಈ ತರಹ ಹಿಂದೆಯೂ ಒಂದು ಪ್ರಕರಣ ಸಮಿತಿ ಮುಂದೆ ಬಂದಿತ್ತು. ಈ ಪ್ರಕರಣದಲ್ಲಿ ಅಧಿಕಾರಿ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿದೆ. ನಿರ್ದಿಷ್ಟ ಪ್ರಕರಣಗಳಿದ್ದರೆ ಸಮಿತಿಗೆ ದೂರು ನೀಡಬಹುದು’ ಎಂದರು.

’ನನ್ನ ಅವಧಿಯಲ್ಲಿ ಯಾವುದೇ ಮಹಿಳೆಗೆ ದೌರ್ಜನ್ಯ ನಡೆಸಲು ಅವಕಾಶ ಕೊಡಲ್ಲ. ಇಂತಹ ಪ್ರಕರಣಗಳ ಬಗ್ಗೆ ದೂರು ನೀಡಲು ಹಿಂದೇಟು ಹಾಕಬಾರದು. ಯಾವುದೇ ಮಹಿಳೆ ಕಿರುಕುಳ ನೀಡಿದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ’ ಎಂದು ಮೇಯರ್ ಗಂಗಾಂಬಿಕೆ ಸ್ಪಷ್ಟಪಡಿಸಿದರು.

’ದೂರು ನೀಡಿದವರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ. ಅಂತಹವರ ಹೆಸರು ಎಲ್ಲೂ ಬಹಿರಂಗಪಡಿಸುವುದಿಲ್ಲ. ಒಬ್ಬ ಮಹಿಳೆಯಾಗಿ ಮಹಿಳಾ ಸಿಬ್ಬಂದಿಯ ಹಿತ ಕಾಪಾಡುವ ಹೊಣೆ ನನ್ನದು’ ಎಂದು ಅವರು ಧೈರ್ಯ ತುಂಬಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.