ADVERTISEMENT

ಮಾನಸಿಕ ಆರೋಗ್ಯ ಸಂಶೋಧನೆಗೆ ಬೇಕು ಹಣಕಾಸಿನ ನೆರವು: ರೋಹಿಣಿ ನಿಲೇಕಣಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 14:07 IST
Last Updated 8 ನವೆಂಬರ್ 2025, 14:07 IST
<div class="paragraphs"><p>‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ- ಮನೋತ್ಸವ’ದಲ್ಲಿ ‘ಸೃಷ್ಟಿ ಸ್ಪೆಶಲ್ ಅಕಾಡೆಮಿ’ಯ ಮಕ್ಕಳೊಂದಿಗೆ ರೋಹಿಣಿ ನಿಲೇಕಣಿ, ಡಾ. ಪ್ರತಿಮಾ ಮೂರ್ತಿ, ಎಲ್‌.ಎಸ್‌. ಶಶಿಧರ ಚರ್ಚೆ ನಡೆಸಿದರು</p></div>

‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ- ಮನೋತ್ಸವ’ದಲ್ಲಿ ‘ಸೃಷ್ಟಿ ಸ್ಪೆಶಲ್ ಅಕಾಡೆಮಿ’ಯ ಮಕ್ಕಳೊಂದಿಗೆ ರೋಹಿಣಿ ನಿಲೇಕಣಿ, ಡಾ. ಪ್ರತಿಮಾ ಮೂರ್ತಿ, ಎಲ್‌.ಎಸ್‌. ಶಶಿಧರ ಚರ್ಚೆ ನಡೆಸಿದರು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮಾನಸಿಕ ಆರೋಗ್ಯಕ್ಕೆ ದೇಶವು ಒತ್ತು ನೀಡಬೇಕು. ಸಂಶೋಧನೆಗೆ ಹಣಕಾಸಿನ ವ್ಯವಸ್ಥೆಯನ್ನು ಮಾಡಬೇಕು’ ಎಂದು ರೋಹಿಣಿ ನಿಲೇಕಣಿ ಫಿಲಾಂಥ್ರೋಪಿಸ್ಟ್‌ ಅಧ್ಯಕ್ಷೆ ರೋಹಿಣಿ ನಿಲೇಕಣಿ ಹೇಳಿದರು.

ADVERTISEMENT

ನಗರದಲ್ಲಿ ಶನಿವಾರ ಆರಂಭವಾದ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ– ಮನೋತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನವು ಮಾನವನ ಅಗತ್ಯಗಳನ್ನು ನಿಜವಾಗಿಯೂ ಪೂರೈಸಬೇಕಿದ್ದರೆ ಇಂಥ ಸಂಶೋಧನೆಗಳು ನಡೆಯಬೇಕು. ಮನೋತ್ಸವದ ಮೂಲಕ ಆರೋಗ್ಯದ ಬಗ್ಗೆ ಮುಕ್ತ ಚರ್ಚೆಗಳನ್ನು ನಡೆಸುವುದು, ಅರಿವು ಮೂಡಿಸುವುದು ಮತ್ತು ಎಲ್ಲರನ್ನು ಒಳಗೊಳ್ಳುವುದು ಸಾಧ್ಯವಾಗುತ್ತಿದೆ’ ಎಂದು ತಿಳಿಸಿದರು.

ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮೆಂಟಲ್‌ ಹೆಲ್ತ್‌ ಆ್ಯಂಡ್‌ ನ್ಯೂರೋ ಸೈನ್ಸಸ್‌ (ನಿಮ್ಹಾನ್ಸ್‌) ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮಾತನಾಡಿ, ‘ಉತ್ಸವದ ಮೂಲಕ ಮಾನಸಿಕ ಆರೋಗ್ಯ ಕುರಿತ ಸಂಶೋಧನೆ, ಚಿಕಿತ್ಸೆ ಮತ್ತು ಔಷಧೀಯ ಮಾಹಿತಿಗಳನ್ನು ಪ್ರಯೋಗಾಲಯದಿಂದ ಹೊರಗೆ ತಂದು ಸಮಾಜದ ಮುಂದೆ ಇಡುತ್ತಿದ್ದೇವೆ. ಎಲ್ಲ ವಯಸ್ಸಿನ ಜನರೊಂದಿಗೆ ಬೆರೆಯುತ್ತ, ತಜ್ಞರ ಅನುಭವವನ್ನು ಸಾರುತ್ತಾ ಮಾನಸಿಕ ಯೋಗಕ್ಷೇಮದ ಅರಿವನ್ನು ಗಟ್ಟಿಗೊಳಿಸಲಾಗುತ್ತಿದೆ’ ಎಂದು ಶ್ಲಾಘಿಸಿದರು.

ನ್ಯಾಷನಲ್‌ ಸೆಂಟರ್‌ ಫಾರ್‌ ಬಯೋಲಜಿಕಲ್‌ ಸೈನ್ಸಸ್‌ (ಎನ್‌ಸಿಬಿಎಸ್‌) ಸೆಂಟರ್‌ನ ನಿರ್ದೇಶಕ ಎಲ್‌.ಎಸ್‌. ಶಶಿಧರ ಮಾತನಾಡಿ, ‘ಮಾನಸಿಕ ಆರೋಗ್ಯದ ಜೀವವಿಜ್ಞಾನವನ್ನು ಆಧುನಿಕ ವಿಜ್ಞಾನ ಬಳಸಿ ಅರಿಯುವ ಪ್ರಯತ್ನ ಮಾಡಲಾಗುತ್ತಿದೆ. ಒಳನೋಟ, ಸಂವಾದಗಳ ಮೂಲಕ ಸಮಾಜವನ್ನು ಸಬಲೀಕರಣಗೊಳಿಸಲಾಗುತ್ತಿದೆ’ ಎಂದು ಹೇಳಿದರು.

ಎರಡು ದಿನಗಳ ಈ ಉತ್ಸವದಲ್ಲಿ ಒಟ್ಟು 26 ಗೋಷ್ಠಿಗಳು, 8 ಸಂವಾದಗಳು ನಡೆಯುತ್ತಿದೆ. 130ಕ್ಕೂ ಅಧಿಕ ಪರಿಣಿತರು ವಿಷಯ ಮಂಡನೆ ಮಾಡುತ್ತಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಆಟಗಳು, ಪುಸ್ತಕಗಳು ಸೇರಿದಂತೆ ವಿವಿಧ ಪ್ರದರ್ಶನಗಳ 32 ಮಳಿಗೆಗಳು ಗಮನ ಸೆಳೆಯುತ್ತಿವೆ. ಛಾಯಾಚಿತ್ರ ಪ್ರದರ್ಶನ, ಮಕ್ಕಳ ಆಟದ ವಿಭಾಗಗಳು, ಡಿಜಿಟಲ್‌ ಡಿಟಾಕ್ಟ್‌ ವಲಯ, ಭಾರತೀಯ ಸಂಗೀತ ವಾದ್ಯಗಳ ವಲಯಗಳು ಪ್ರಮುಖ ಆಕರ್ಷಣೆಯಾಗಿವೆ.

‘ಹೆರಿಗೆ ಸಮಯದಲ್ಲಿ ಖಿನ್ನತೆ ಹೆಚ್ಚು’

ಮಹಿಳೆಯರಿಗೆ ಹೆರಿಗೆ ಸಮಯದಲ್ಲಿ ಉಂಟಾಗುವ ಭಯ ಒತ್ತಡ ಕಾತರಗಳು ಮಿದುಳಿನ ಮೇಲೆ ಪರಿಣಾಮವನ್ನುಂಟು ಮಾಡುತ್ತವೆ. ಬಾಣಂತಿಯರು ಖಿನ್ನತೆಗೆ ಜಾರುವ ಸಾಧ್ಯತೆಗಳಿರುತ್ತವೆ. ಪ್ರಸೂತಿ ತಜ್ಞರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು. ನಗರದಲ್ಲಿ ಶನಿವಾರ ಆರಂಭವಾದ ಎರಡು ದಿನಗಳ ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಉತ್ಸವ’ದ ‘ತಾಯ್ತನದ ಆರೋಗ್ಯ: ಒತ್ತಡ ಕಥೆಗಳು ಮತ್ತು ಅಧ್ಯಯನ’ ಗೋಷ್ಠಿಯಲ್ಲಿ ಮೂಡಿದ ತಜ್ಞರ ಅಭಿಪ್ರಾಯವಿದು. ಮನೆಯ ವಾತಾವರಣ ಸಾಮಾಜಿಕ ಸಾಂಸ್ಕೃತಿಕ ಹಿನ್ನೆಲೆಗಳು ಅತಿಯಾದ ಭಾವುಕ ಅಂಶಗಳು ಕೂಡ ಹೆರಿಗೆ ಸಮಯದಲ್ಲಿ ಮತ್ತು ಹೆರಿಗೆಯಾದ ಬಳಿಕವೂ ಪರಿಣಾಮವನ್ನು ಬೀರುತ್ತಿವೆ ಎಂದು ತಜ್ಞರು ತಿಳಿಸಿದರು. ನಿಮ್ಹಾನ್ಸ್‌ನ ಡಾ. ಪ್ರಭಾ ಚಂದ್ರ ಮಮ್ಮಿ ಮಿಕ್ಸ್‌ಡ್‌ ಟೇಪ್ಸ್‌ ಸಂಸ್ಥೆಯ ಬಕುಲ್‌ ದುವಾ ಗ್ರೀನ್‌ ಓಕ್‌ ಸಂಸ್ಥೆಯ ಪೂರ್ಣಿಮಾ ಮಹಿಂದ್ರು ಅಭಿಪ್ರಾಯ ವ್ಯಕ್ತಪಡಿಸಿದರು. ಆಸ್ಟ್ರಿಕ ಫೌಂಡೇಷನ್‌ನ ಜಾಹ್ನವಿ ನಿಲೇಕಣಿ ಸಂವಾದ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.