ಬೆಂಗಳೂರು: ‘ವಿಪರೀತ ಏರಿಕೆ ಮಾಡಿರುವ ಮೆಟ್ರೊ ಪ್ರಯಾಣ ದರವನ್ನು ಬೆಂಗಳೂರು ಮೆಟ್ರೊ ರೈಲ್ ಕಾರ್ಪೋರೇಷನ್ ಲಿಮಿಟೆಡ್( ಬಿಎಂಆರ್‌ಸಿಎಲ್) ಕೂಡಲೇ ಕಡಿಮೆ ಮಾಡಬೇಕು’ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಫೆಬ್ರವರಿಯಲ್ಲಿ ಮೆಟ್ರೊ ಪ್ರಯಾಣ ದರ ಹೆಚ್ಚಿಸಿದ ನಂತರ, ಇಳಿಕೆ ಸಂಬಂಧ ಪ್ರಯತ್ನ ಮಾಡುತ್ತಿರುವ ತೇಜಸ್ವಿ ಸೂರ್ಯ ಮಂಗಳವಾರ ನಿಗಮದ ಕಚೇರಿಗೆ ಬಿಜೆಪಿ ಶಾಸಕರೊಂದಿಗೆ ಭೇಟಿ ನೀಡಿ ದರ ನಿಗದಿ ಮಾಡಿರುವ ಕುರಿತು ಅಧಿಕಾರಿಗಳೊಂದಿಗೆ ಪರಾಮರ್ಶೆ ನಡೆಸಿದರು.
‘ಏಳು ವರ್ಷದ ನಂತರ ಮೆಟ್ರೊ ಪ್ರಯಾಣ ದರವನ್ನು ನಿಗಮವು ಹೆಚ್ಚಳ ಮಾಡಿತು. ಆದರೆ ಇದು ಸಮರ್ಪಕವಾಗಿ ಇಲ್ಲ. ದೆಹಲಿ, ಮುಂಬೈ, ಚೆನ್ನೈ, ನಾಗ್ಪುರ ಸೇರಿದಂತೆ ಪ್ರಮುಖ ನಗರಗಳಲ್ಲಿನ ಮೆಟ್ರೊ ಪ್ರಯಾಣ ದರಕ್ಕಿಂತ ಹೆಚ್ಚು ದುಬಾರಿಯಾಗಿದೆ. ಇದನ್ನು ಇಳಿಕೆ ಮಾಡಲು ಕ್ರಮ ವಹಿಸಬೇಕು’ ಎಂದರು.
‘ಹಿಂದಿನ ದರ ಪರಿಷ್ಕರಣೆ ಸಮಿತಿ ನೀಡಿದ ವರದಿ ಆಧರಿಸಿಯೇ ದರ ನಿಗದಿಯಲ್ಲಿ ಆಗಿರುವ ವ್ಯತ್ಯಾಸಗಳನ್ನು ನಿಗಮದ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರೂ ಈವರೆಗೂ ದರ ಇಳಿಸುವ ಪ್ರಯತ್ನ ಮಾಡಿಲ್ಲ‘ ಎಂದು ಬೇಸರ ಹೊರ ಹಾಕಿದರು.
‘ದರ ಪರಿಷ್ಕರಣೆ ವೇಳೆ ನಿಗಮವು 2017-18ರ ನಿರ್ವಹಣೆ ಮತ್ತು ಆಡಳಿತ ವೆಚ್ಚವನ್ನು ಪರಿಗಣಿಸಬೇಕಿತ್ತು. ಅದರ ಬದಲು ಬದಲು ಬಿಎಂಆರ್‌ಸಿಎಲ್ ಅದಕ್ಕೂ ಹಿಂದಿನ ಸಾಲಿನ ವೆಚ್ಚ ಪರಿಗಣಿಸಿ ಹೆಚ್ಚಳ ಮಾಡಿದ್ದು ದುಬಾರಿಯಾಗಲು ಕಾರಣವಾಗಿದೆ. ಅಲ್ಲದೇ ಪ್ರತಿ ಕಿ.ಮಿ ಆಡಳಿತಾತ್ಮಕ ವೆಚ್ಚದ ಲೆಕ್ಕಾಚಾರದಲ್ಲೂ ವ್ಯತ್ಯಾಸವಾಗಿದೆ’ ಎಂದು ಅಂಕಿ ಸಂಖ್ಯೆ ಸಮೇತ ವಿವರಿಸಿದರು.
‘ದರ ಏರಿಕೆ ಶೇ 105.15ರಷ್ಟು ಆಗಬೇಕು ಎನ್ನುವ ಬೇಡಿಕೆಯನ್ನು ನಿಗಮ ಇಟ್ಟಿತ್ತು. ಹೆಚ್ಚಳ ಮಾಡಿರುವ ದರ ಶೇ 51.5ರಷ್ಟು ಎಂದು ನಿಗಮ ತಿಳಿಸಿದರೂ 8 ರಿಂದ 15 ಕಿ.ಮೀ. ಪ್ರಯಾಣದ ದರ ಶೇ 70ರಷ್ಟು ಹೆಚ್ಚಳವಾಗಿದೆ. ದರ ಹೆಚ್ಚಳದಿಂದ 9 ತಿಂಗಳಲ್ಲಿ ಸುಮಾರು ₹150 ಕೋಟಿ ಹೆಚ್ಚುವರಿ ಸಂಗ್ರಹವಾಗಿದೆ. ದರ ಪರಿಷ್ಕರಣೆಗೆ ನಿಗಮ ಏನು ಕ್ರಮ ಕೈಗೊಂಡಿದೆ’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಈ ಕುರಿತು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಜತೆಗೆ ಚರ್ಚಿಸಿ ನಿರ್ಧಾರ ತಿಳಿಸಲಾಗುವುದು ಎಂದು ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳು ತಿಳಿಸಿದರು.