ಬೆಂಗಳೂರು: ‘ನಮ್ಮ ಮೆಟ್ರೊ’ದ ಸರ್ಜಾಪುರ–ಹೆಬ್ಬಾಳ ಮಾರ್ಗಕ್ಕೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿ ಆರು ತಿಂಗಳು ಕಳೆದರೂ ಕೇಂದ್ರ ಸರ್ಕಾರ ಇನ್ನೂ ಅನುಮತಿ ನೀಡಿಲ್ಲ. ಈ ಮಧ್ಯೆ ಯೋಜನೆಯ ಅಂದಾಜು ವೆಚ್ಚ ಏಕೆ ಅಧಿಕವಾಗಿದೆ ಎಂಬ ಬಗ್ಗೆ ವಿವರ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಸೂಚನೆ ನೀಡಿದೆ.
ಸರ್ಜಾಪುರ– ಹೆಬ್ಬಾಳದವರೆಗೆ 36.59 ಕಿ.ಮೀ ಉದ್ದದ ‘ಕೆಂಪು’ ಮಾರ್ಗವು 22.14 ಕಿ.ಮೀ. ಎತ್ತರಿಸಿದ ಮಾರ್ಗ, 14.45 ಕಿ.ಮೀ. ಸುರಂಗ ಮಾರ್ಗ ಒಳಗೊಂಡಿದೆ. ಎತ್ತರಿಸಿದ ಮಾರ್ಗದಲ್ಲಿ 17 ನಿಲ್ದಾಣ, ಸುರಂಗ ಮಾರ್ಗದಲ್ಲಿ 11 ನಿಲ್ದಾಣಗಳು ಇರಲಿವೆ. ₹ 28,405 ಕೋಟಿ ಅಂದಾಜು ವೆಚ್ಚ ಅಂದರೆ ಪ್ರತಿ ಕಿಲೋ ಮೀಟರ್‌ಗೆ ₹776.3 ಕೋಟಿ ಎಂದು ವಿಸ್ತೃತ ಯೋಜನಾ ವರದಿಯಲ್ಲಿ ತಿಳಿಸಲಾಗಿತ್ತು.
ಕೇಂದ್ರ ಸರ್ಕಾರದ ಸಾಲ, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯಲು ಕೇಂದ್ರ ಸರ್ಕಾರದಿಂದ ಅನುಮೋದನೆ ಪಡೆದ ನಂತರ ಸಿವಿಲ್ ಕಾಮಗಾರಿ ಆರಂಭಿಸಲು ರಾಜ್ಯ ಸರ್ಕಾರವು 2024ರ ಡಿಸೆಂಬರ್ 6ರಂದು ಒಪ್ಪಿಗೆ ನೀಡಿತ್ತು. ಆ ನಂತರ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಕೇಂದ್ರ ಸರ್ಕಾರದಿಂದ ಆರು ತಿಂಗಳ ಒಳಗೆ ಒಪ್ಪಿಗೆ ಸಿಗುವ ನಿರೀಕ್ಷೆಯಲ್ಲಿ ಬಿಎಂಆರ್‌ಸಿಎಲ್ ಇತ್ತು. ಆದರೆ, ‘ನಿಗದಿತ ಮಾನದಂಡಕ್ಕಿಂತ ಇದು ಅಧಿಕವಾಗಿದೆ. ಈ ಬಗ್ಗೆ ಪರಿಶೀಲಿಸಿ ವರದಿ ನೀಡಿ’ ಎಂದು ಕೇಂದ್ರ ಸರ್ಕಾರ ಸೂಚಿಸಿರುವುದರಿಂದ ಒಪ್ಪಿಗೆ ಸಿಗುವುದು ಇನ್ನಷ್ಟು ತಡವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
‘ನಿರ್ಮಾಣ ಹಂತದಲ್ಲಿರುವ ಕಾಳೇನ ಅಗ್ರಹಾರ–ನಾಗವಾರ ನಡುವಿನ ಗುಲಾಬಿ ಮಾರ್ಗವನ್ನು ಮಾನದಂಡವಾಗಿ ಇಟ್ಟುಕೊಂಡು ಕೆಂಪು ಮಾರ್ಗಕ್ಕೆ ಅಂದಾಜು ವೆಚ್ಚ ತಯಾರಿಸಲಾಗಿತ್ತು. ಇನ್ನು ಸ್ವತಂತ್ರ ಸಮಿತಿ ನೇಮಕ ಮಾಡಿ ಅವರು ನೀಡುವ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು. ಈ ಪ್ರಕ್ರಿಯೆಗಳು ಮೂರು ತಿಂಗಳಲ್ಲಿ ನಡೆಯಲಿವೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ನಗರದ ಹೊರಗೆ ಮೆಟ್ರೊ ಕಾಮಗಾರಿ ನಡೆಸುವುದಕ್ಕೂ ನಗರದ ಒಳಗೆ ಕಾಮಗಾರಿ ನಡೆಸುವುದಕ್ಕೂ ಬಹಳ ವ್ಯತ್ಯಾಸವಿದೆ. ಅದರಲ್ಲೂ ನಗರದೊಳಗೆ 11 ಕಿ.ಮೀ. ಸುರಂಗ ಮಾರ್ಗ ನಿರ್ಮಿಸಲು ಭಾರಿ ವೆಚ್ಚವಾಗುತ್ತದೆ. ಭೂಸ್ವಾಧೀನ, ಮಾರ್ಗ ರಚನೆ, ಹಳಿ ಜೋಡಣೆ, ನಿಲ್ದಾಣದ ಕಟ್ಟಡಗಳ ನಿರ್ಮಾಣ, ವಿದ್ಯುತ್ ಸರಬರಾಜು ವ್ಯವಸ್ಥೆ, ಸಿಗ್ನಲಿಂಗ್, ದೂರಸಂಪರ್ಕ, ಡಿಪೊಗಳು, ರೈಲು ಕೋಚ್ ಪೂರೈಕೆ ಹೀಗೆ ಒಟ್ಟು 13 ಅಂಶಗಳನ್ನು ಪರಿಗಣಿಸಿ ಅಂದಾಜು ವೆಚ್ಚವನ್ನು ತಯಾರಿಸಲಾಗಿದೆ.
ಸುರಂಗ ಮಾರ್ಗದಲ್ಲಿ ನಿರ್ಮಿಸುವ ಮೆಟ್ರೊ ನಿಲ್ದಾಣಗಳು ಎತ್ತರಿಸಿದ ಮಾರ್ಗದ ಮೇಲೆ ನಿರ್ಮಿಸುವ ನಿಲ್ದಾಣಗಳಿಗಿಂತ 10 ಪಟ್ಟು ಅಧಿಕ ಶಕ್ತಿಯುತವಾಗಿರಬೇಕಾಗುತ್ತದೆ. ಆರು ಕೋಚ್‌ಗಳ ರೈಲು ನಿಲುಗಡೆಗೆ ಸುರಂಗ ಮಾರ್ಗದಲ್ಲಿ 240–265 ಮೀಟರ್ ಉದ್ದದ ನಿಲ್ದಾಣ ನಿರ್ಮಿಸಲಾಗುತ್ತದೆ. ಅದೇ ಅಂದಾಜನ್ನು ಕೆಂಪು ಮಾರ್ಗದಲ್ಲಿಯೂ ನೀಡಲಾಗಿದೆ ಎಂದು ‘ನಮ್ಮ ಮೆಟ್ರೊ’ ಅಧಿಕಾರಿಗಳು ತಿಳಿಸಿದರು.
ಕೆಂಪು ಮಾರ್ಗದ ನಿರ್ಮಾಣಕ್ಕಾಗಿ ತಯಾರಿಸಿದ ಅಂದಾಜು ವೆಚ್ಚ ಯಾಕೆ ಹೆಚ್ಚಿದೆ ಎಂದು ಕೇಂದ್ರ ಸರ್ಕಾರ ಕೇಳಿದೆ. ಅದಕ್ಕೆ ಕಾರಣ ಏನು ಎಂಬ ಸಮರ್ಥನೆಯನ್ನು ನೀಡಲಿದ್ದೇವೆ.ಎಂ. ಮಹೇಶ್ವರ ರಾವ್ ವ್ಯವಸ್ಥಾಪಕ ನಿರ್ದೇಶಕ ಬಿಎಂಆರ್‌ಸಿಎಲ್
ಒಂದು ವರ್ಷ ವಿಳಂಬ?
ನಗರದ ಪ್ರಮುಖ ವಹಿವಾಟು ಪ್ರದೇಶಗಳಲ್ಲಿ ಒಂದಾಗಿರುವ ಕೋರಮಂಗಲವನ್ನು ಹಾದು ಹೋಗುವ ಕೆಂಪು ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಿ 2030ರ ಹೊತ್ತಿಗೆ ರೈಲು ಸಂಚರಿಸುವಂತೆ ಮಾಡಬೇಕು ಎಂಬ ಗುರಿಯನ್ನು ಬಿಎಂಆರ್‌ಸಿಎಲ್ ಇಟ್ಟುಕೊಂಡಿತ್ತು. ಕೇಂದ್ರ ಸರ್ಕಾರದ ಒಪ್ಪಿಗೆ ಸಿಗುವುದು ತಡವಾಗುತ್ತಿರುವುದರಿಂದ ಒಂದು ವರ್ಷ ವಿಳಂಬವಾಗಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಹೆಬ್ಬಾಳದಲ್ಲಿ ಕೇಸರಿ ಮತ್ತು ನೀಲಿ ಮಾರ್ಗವನ್ನು ಕೆ.ಆರ್. ಸರ್ಕಲ್‌ನಲ್ಲಿ ನೇರಳೆ ಮಾರ್ಗವನ್ನು ಡೇರಿ ಸರ್ಕಲ್‌ನಲ್ಲಿ ಗುಲಾಬಿ ಮಾರ್ಗವನ್ನು ಮತ್ತು ಅಗರದಲ್ಲಿ ಮತ್ತೆ ನೀಲಿ ಮಾರ್ಗವನ್ನು ಸಂಪರ್ಕಿಸಲಿದ್ದು ಅಲ್ಲೆಲ್ಲ ಇಂಟರ್‌ಚೇಂಜ್‌ಗಳಿರಲಿವೆ. ಇದರಿಂದ ಪ್ರಯಾಣಿಕರಿಗೆ ಮಾರ್ಗ ಬದಲಾವಣೆಗೆ ಹೆಚ್ಚಿನ ಅವಕಾಶ ಸಿಗಲಿದೆ. ನೀಲಿ ಮಾರ್ಗದ ಸಂಪರ್ಕದಿಂದಾಗಿ ‘ಟೆಕ್ ಹಬ್’ನಿಂದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವವರಿಗೆ ಅನುಕೂಲವಾಗಲಿದೆ. ಈ ವರ್ಷ ಡಿಸೆಂಬರ್ ಅಂತ್ಯದ ಒಳಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿದರೆ 2031ಕ್ಕೆ ಯೋಜನೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅಧಿಕಾರಿಯೊಬ್ಬರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.