ADVERTISEMENT

ಕನಿಷ್ಠ ವೇತನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಬಿಸಿಯೂಟ ತಯಾರಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 22:03 IST
Last Updated 2 ಮಾರ್ಚ್ 2026, 22:03 IST
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಡುಗೆ ತಯಾರಕರು, ಸಹಾಯಕಿಯರು ಭಾಗವಹಿಸಿದ್ದರು
 -ಪ್ರಜಾವಾಣಿ ಚಿತ್ರ
ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಅಡುಗೆ ತಯಾರಕರು, ಸಹಾಯಕಿಯರು ಭಾಗವಹಿಸಿದ್ದರು  -ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನಿಷ್ಠ ವೇತನ ಜಾರಿಗೊಳಿಸಿ, ಕೆಲಸ ಕಾಯಂಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ (ಎಐಟಿಯುಸಿ) ಸೋಮವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿತು.

ರಾಜ್ಯದಾದ್ಯಂತ ಶಾಲೆಗಳಲ್ಲಿ ಒಟ್ಟು 1 ಲಕ್ಷ 16 ಸಾವಿರ ಬಿಸಿಯೂಟ ತಯಾರಕರಿದ್ದಾರೆ. ಮುಖ್ಯ ಅಡುಗೆಯವರಿಗೆ ತಿಂಗಳಿಗೆ ₹4,700, ಸಹಾಯಕ ಅಡುಗೆಯವರಿಗೆ ₹4,600 ವೇತನ ನೀಡುತ್ತಿದೆ. ಈ ವೇತನದಲ್ಲಿ ಜೀವನ ನಡೆಸುವುದು ಕಷ್ಟವಾಗಿದೆ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು. 

ಬಿಸಿಯೂಟ ತಯಾರಕರನ್ನು ಸ್ಕೀಮ್ ವರ್ಕರ್ಸ್‌ ಎನ್ನುವುದನ್ನು ಬದಲಾಯಿಸಿ ಕಾರ್ಮಿಕರೆಂದು ಪರಿಗಣಿಸಬೇಕು, ₹10 ಲಕ್ಷ ಮರಣ ಪರಿಹಾರ ನೀಡಬೇಕು ಹಾಗೂ ಆಸ್ಪತ್ರೆಯ ಚಿಕಿತ್ಸಾ ವೆಚ್ಚವನ್ನು ₹50 ಸಾವಿರದಿಂದ ₹1 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.

ADVERTISEMENT

100 ವಿದ್ಯಾರ್ಥಿಗಳು ಇರುವ ಶಾಲೆಗಳಲ್ಲಿ ಇಬ್ಬರು ಅಡುಗೆಯವರಿಗೆ ಕೆಲಸದ ಹೊರೆ ಆಗುತ್ತಿದೆ. ಅಂತಹ ಕಡೆ ಮೂವರನ್ನು ನೇಮಿಸಬೇಕು. ಮೊಟ್ಟೆ ಸುಲಿಯುವ ಭತ್ಯೆಯನ್ನು 30 ಪೈಸೆಯಿಂದ ₹1ಕ್ಕೆ ಏರಿಸಬೇಕು. ಈ ಹಣವನ್ನು ಶಾಲೆಯ ಮುಖ್ಯ ಅಡುಗೆಯವರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು.

ಇಡುಗಂಟು ಹಣವನ್ನು ₹2 ಲಕ್ಷಕ್ಕೆ ಹೆಚ್ಚಿಸಬೇಕು. ಪ್ರತಿ ತಿಂಗಳ 5ನೇ ತಾರೀಖು ಬ್ಯಾಂಕ್ ಖಾತೆಗೆ ವೇತನ ಜಮಾ ಮಾಡಬೇಕು. ಕೆಪಿಎಸ್‌ ಶಾಲೆಗಳನ್ನು ತೆರೆದರೆ ಹಾಲಿ ಬಿಸಿಯೂಟ ಯೋಜನೆಯಡಿ ಅಡುಗೆ ಮಾಡುತ್ತಿರುವವರನ್ನು, ಅಡುಗೆ ಕೆಲಸಕ್ಕೆ ನೇಮಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಫೆಡರೇಷನ್ ಅಧ್ಯಕ್ಷ ಆವರಗೆರೆ ಚಂದ್ರು, ಪ್ರಧಾನ ಕಾರ್ಯದರ್ಶಿ ಜಿ.ಜಿ.ಅಕ್ಕಮ್ಮ, ಉಪ ಪ್ರಧಾನ ಕಾರ್ಯದರ್ಶಿ ಪುಷ್ಪಾ, ಬೆಳಲಗೆರೆ ರುದ್ರಮ್ಮ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.