ಯುವತಿ
ಬೆಂಗಳೂರು: ಹೊರರಾಜ್ಯಗಳ ಅನೇಕ ಕಿಡಿಗೇಡಿಗಳು ಬೆಂಗಳೂರಿನಲ್ಲಿ ಕರ್ನಾಟಕಕ್ಕೆ ಕನ್ನಡಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡು ವಾಪಸ್ ಬಿಸಿ ಮುಟ್ಟಿಸಿಕೊಳ್ಳುವುದನ್ನು ಆಗಾಗ ನೋಡುತ್ತಿರುತ್ತೇವೆ.
ಇದೀಗ ಇಂತಹದ್ದೇ ಮತ್ತೊಂದು ಘಟನೆ ಬೆಂಗಳೂರಿನಲ್ಲಿ ನಡೆದಿರುವುದಾಗಿ ಸಾಮಾಜಿಕ ತಾಣಗಳಲ್ಲಿ ಚರ್ಚೆಯಾಗುತ್ತಿದೆ.
ಆಂಧ್ರದ ಯುವತಿಯೊಬ್ಬರದ್ದು ಎನ್ನಲಾದ ವಿಡಿಯೊ ಫೇಸ್‌ಬುಕ್ ಹಾಗೂ ಎಕ್ಸ್‌ನಲ್ಲಿ ಬಹಳ ಹರಿದಾಡುತ್ತಿದ್ದು, ಆಕೆ ಕನ್ನಡಿಗರನ್ನು ಕೆಣಕಿರುವುದು ವಿಡಿಯೊದಲ್ಲಿ ಗೊತ್ತಾಗುತ್ತದೆ.
ಬೆಂಗಳೂರಿನ ಮಾರತಹಳ್ಳಿಯಲ್ಲಿ ನಡೆದುಕೊಂಡು ಹೋಗುತ್ತಾ ವಿಡಿಯೊ ಮಾಡಿರುವ ಆಕೆ, ಸ್ನೇಹಿತರೇ ಮಾರತಹಳ್ಳಿಯನ್ನು ಯಾಕೆ ಮಿನಿ ಆಂಧ್ರ ಎಂದು ಕರೆಯುತ್ತಾರೆ ಗೊತ್ತೆ?, ಇಲ್ಲಿ ಶೇ 99.99 ರಷ್ಟು ಆಂಧ್ರದವರೇ ಇದ್ದೇವೆ. ಅದರಲ್ಲೂ ರಾಯಲ ಸೀಮಾದವರೇ ಹೆಚ್ಚು. ಅದರಲ್ಲೂ ಅನಂತಪುರ ಜಿಲ್ಲೆಯವರೇ ಹೆಚ್ಚು ಎಂದು ಹೇಳುವ 11 ಸೆಕೆಂಡುಗಳ ವಿಡಿಯೊ ಇದಾಗಿದೆ.
ಯುವತಿ ಯಾರು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ, ಯುವತಿಯ ಹೇಳಿಕೆಯಿಂದ ಬೆಂಗಳೂರಿನ ಕನ್ನಡಿಗರು, ಕನ್ನಡಪರ ಸಂಘಟನೆಗಳು ಯುವತಿ ವಿರುದ್ಧ ತೀವ್ರ ಕಿಡಿಕಾರಿದ್ದಾರೆ.
ಯುವತಿ ವಿರುದ್ಧ ಸಾಮಾಜಿಕ ತಾಣಗಳಲ್ಲಿ ಕನ್ನಡಿಗರು ತೀವ್ರ ಆಕ್ರೋಶ ಹೊರಹಾಕಿದ್ದು, ರಾಜ್ಯ ಸರ್ಕಾರ ವಲಸೆ ನೀತಿ ಜಾರಿಗೆ ತರುವುದು ಉತ್ತಮ ಎಂದು ಆಗ್ರಹಿಸಿದ್ದಾರೆ. ಈ ಕುರಿತು ಇನ್ನೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.