ADVERTISEMENT

ಅಧಿಕ ಪಿಂಚಣಿ ಸಮಸ್ಯೆ ಪರಿಹಾರಕ್ಕೆ ಸಚಿವೆ ಶೋಭಾ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 16:27 IST
Last Updated 28 ಜೂನ್ 2025, 16:27 IST
ಶೋಭಾ ಕರಂದ್ಲಾಜೆ ಅವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು
ಶೋಭಾ ಕರಂದ್ಲಾಜೆ ಅವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು   

ಬೆಂಗಳೂರು: ನೌಕರರ ಭವಿಷ್ಯ ನಿಧಿ ಯೋಜನೆಯಡಿ ‘ಅಧಿಕ ಪಿಂಚಣಿ ಯೋಜನೆ’ಯಲ್ಲಿ ಉಂಟಾಗಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸುವುದಾಗಿ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಭರವಸೆ ನೀಡಿದರು.

‘ಸುಪ್ರೀಂ ಕೋರ್ಟ್ ಆದೇಶದಂತೆ ಅಧಿಕ ಪಿಂಚಣಿ ಪಡೆಯಲು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಗೆ ಹಲವು ಪತ್ರಕರ್ತರು ಅರ್ಜಿ ಸಲ್ಲಿಸಿದ್ದಾರೆ. ಅನೇಕ ತಿಂಗಳಿನಿಂದ ಅರ್ಜಿಗಳು ಇತ್ಯರ್ಥವಾಗದೇ ಸಮಸ್ಯೆಯಾಗಿದೆ. ನಿವೃತ್ತರಾಗಿರುವವರಿಗೆ ಆರ್ಥಿಕ ಸಮಸ್ಯೆ ಎದುರಾಗಿದೆ’ ಎಂದು ಸಚಿವರಿಗೆ ಪತ್ರಕರ್ತರ ನಿಯೋಗ ಸಮಸ್ಯೆಯನ್ನು ಹೇಳಿಕೊಂಡಿತು.

‘ಅನೇಕ ಪತ್ರಕರ್ತರು ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿಯಿಂದ ಬಂದ ‘ಡಿಮ್ಯಾಂಡ್ ನೋಟ್’ ಅನುಸಾರ ಹೆಚ್ಚುವರಿ ಮೊತ್ತವನ್ನು ಜನವರಿಯಲ್ಲೇ ಪಾವತಿಸಿದ್ದಾರೆ. ಕಟ್ಟಿದ ದುಡ್ಡಿಗೆ ಬಡ್ಡಿಯೂ ಇಲ್ಲ, ಹೆಚ್ಚಿನ ಪಿಂಚಣಿಯೂ ಇಲ್ಲದಂತಾಗಿದೆ’ ಎಂದು ಪತ್ರಕರ್ತರು ಹೇಳಿದರು.

ADVERTISEMENT

‘ಈಗಾಗಲೇ ಡಿಮಾಂಡ್ ನೋಟ್ ವಿತರಿಸಿ ಹಣ ಕಟ್ಟಿಸಿಕೊಂಡ ಉದ್ಯೋಗಿಗಳ ಅರ್ಜಿಯನ್ನು ಕೂಡಲೇ ಇತ್ಯರ್ಥಪಡಿಸಬೇಕು’ ಎಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪತ್ರಕರ್ತರಾದ ಶ್ರೀವತ್ಸ ನಾಡಿಗ್, ನೆತ್ರಕೆರೆ ಉದಯಶಂಕರ, ಎಂ.ನಾಗರಾಜ, ಬಿ.ಎನ್.ರಾಘವೇಂದ್ರ, ವಾದಿರಾಜ ದೇಸಾಯಿ, ಚಂದ್ರಶೇಖರ ಮತ್ತು ಹನುಮೇಶ್ ಕೆ. ಯಾವಗಲ್ ನಿಯೋಗದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.