ADVERTISEMENT

ನಾಪತ್ತೆಯಾಗಿದ್ದ ಪ್ರಯಾಣಿಕ ಮಠದಲ್ಲಿ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2018, 19:03 IST
Last Updated 17 ಜುಲೈ 2018, 19:03 IST

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಪತ್ತೆಯಾಗಿದ್ದರಿಚ್ಪಾಲ್ ಎಂಬುವರು ದೇವನಹಳ್ಳಿ ಬಳಿಯ ಕನ್ನಮಂಗಲದ ರಾಘವೇಂದ್ರ ಸ್ವಾಮಿ ಮಠದಲ್ಲಿ ಮಂಗಳವಾರ ಪತ್ತೆ ಆಗಿದ್ದಾರೆ.

ನಿಲ್ದಾಣದಿಂದ ಜುಲೈ 12ರಂದು ನಾಪತ್ತೆಯಾಗಿದ್ದ ಅವರ ಬಗ್ಗೆ ಸಂಬಂಧಿ ಮುಖೇಶ್, ಪೊಲೀಸರಿಗೆ ದೂರು ನೀಡಿದ್ದರು. ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಟ ನಡೆಸಿದ್ದ ಪೊಲೀಸರು, ಐದು ದಿನಗಳ ಬಳಿಕ ಅವರನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

‘ರಾಜಸ್ಥಾನದ ರಿಚ್ಪಾಲ್, ಚಿತ್ತೂರಿನ ಟೈಲ್ಸ್ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕಾರ್ಖಾನೆಯ ಮಹಡಿಯಿಂದ ಬಿದ್ದು ಕಾಲಿಗೆ ಪೆಟ್ಟಾಗಿತ್ತು. ವಿಶ್ರಾಂತಿ ಪಡೆಯುವುದಕ್ಕಾಗಿ ತಮ್ಮೂರಿಗೆ ತೆರಳಲು ನಿಲ್ದಾಣಕ್ಕೆ ಬಂದಾಗಲೇ ನಾಪತ್ತೆ ಆಗಿದ್ದರು’ ಎಂದು ಪೊಲೀಸರು ಹೇಳಿದರು.

ADVERTISEMENT

ಟಿಕೆಟ್ ರದ್ದುಪಡಿಸಿದ್ದ ಸಿಬ್ಬಂದಿ: ರಿಚ್ಪಾಲ್ ಅವರನ್ನು ಊರಿಗೆ ಕಳುಹಿಸಲೆಂದು ಸಂಬಂಧಿ ಮುಖೇಶ್, ನಿಲ್ದಾಣಕ್ಕೆ ಹೋಗಿದ್ದರು. ಕಾಲು ಊನವಾಗಿದ್ದರಿಂದ ಅವರನ್ನು ಕೆಐಎಎಲ್‌ ನಿರ್ಗಮನ ದ್ವಾರದ (ಸಂಖ್ಯೆ 1) ಬಳಿ ಗಾಲಿಕುರ್ಚಿಯಲ್ಲಿ ಕೂರಿಸಿದ್ದರು. ಟಿಕೆಟ್ ಪರಿಶೀಲಿಸಿದ್ದ ಸಿಬ್ಬಂದಿಯೇ ಅವರನ್ನು ನಿಲ್ದಾಣದೊಳಗೆ ಕರೆದುಕೊಂಡು ಹೋಗಿದ್ದರು.

ವಿಮಾನ ಹತ್ತುವುದಕ್ಕೂ ಮುನ್ನ ವೈದ್ಯಕೀಯ ಪ್ರಮಾಣ ಪತ್ರ ನೀಡುವಂತೆ ಕೇಳಿದ್ದರು. ಅದನ್ನು ನೀಡದಿದ್ದಾಗ ಟಿಕೆಟ್‌ ರದ್ದುಪಡಿಸಿ, ನಿಲ್ದಾಣದ ಹೊರಗೆ ತಂದು ಬಿಟ್ಟಿದ್ದರು. ಆನಂತರ ಟ್ಯಾಕ್ಸಿ ಹತ್ತಿದ್ದ ರಿಚ್ಪಾಲ್‌ ‘ನನಗೆ ಯಾರು ಇಲ್ಲ. ಎಲ್ಲಿಯಾದರೂ ಇರಲು ವ್ಯವಸ್ಥೆ ಮಾಡು’ ಎಂದು ಚಾಲಕನಿಗೆ ಹೇಳಿದ್ದರು. ಚಾಲಕ, ರಾಘವೇಂದ್ರ ಸ್ವಾಮಿ ಮಠಕ್ಕೆ ಕರೆದೊಯ್ದು ಬಿಟ್ಟಿದ್ದರು ಎಂದು ಪೊಲೀಸರು ಹೇಳಿದರು.

ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾರಾದರೂ ಅಪರಿಚಿತ ವ್ಯಕ್ತಿಗಳಿದ್ದರೆ ಮಾಹಿತಿ ನೀಡಿ ಎಂದು ಗಸ್ತು ಸಿಬ್ಬಂದಿಗೆ ಸೂಚಿಸಲಾಗಿತ್ತು. ದೇವಸ್ಥಾನದ ಬಳಿ ಮಂಗಳವಾರ ನಸುಕಿನಲ್ಲಿ ಗಸ್ತಿನಲ್ಲಿದ್ದ ಸಿಬ್ಬಂದಿ, ರಿಚ್ಪಾಲ್‌ ಅವರನ್ನು ಗುರುತಿಸಿದ್ದರು. ರಾಜಸ್ಥಾನದಲ್ಲಿರುವ ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.

‘ಹಿಂದಿಯಲ್ಲಿ ಮಾತನಾಡುವ ಅವರು, ನಾಪತ್ತೆ ಬಗ್ಗೆ ಹೆಚ್ಚು ಮಾಹಿತಿ ನೀಡುತ್ತಿಲ್ಲ. ಏನೇ ಕೇಳಿದರೂ ಅಳುತ್ತಿದ್ದಾರೆ. ಹೀಗಾಗಿ, ಹೆಚ್ಚು ವಿಚಾರಿಸುತ್ತಿಲ್ಲ. ಸಂಬಂಧಿಕರು ಬಂದ ಬಳಿಕ ಅವರ ಮೂಲಕವೇ ಮಾಹಿತಿ ಪಡೆಯಲಾಗುವುದು’ ಎಂದು ಪೊಲೀಸರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.