
ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್
ಬೆಂಗಳೂರು: ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ನಾಪತ್ತೆ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಅನು ಶಿವರಾಮನ್ ಕಳವಳ ವ್ಯಕ್ತಪಡಿಸಿದರು.
ಕರ್ನಾಟಕ ನ್ಯಾಯಾಂಗ ಅಕಾಡೆಮಿಯಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯಾಂಗ ಅಕಾಡೆಮಿ, ಹೈಕೋರ್ಟ್‌ನ ಬಾಲ ನ್ಯಾಯ ಸಮಿತಿ ಮತ್ತು ಪೋಕ್ಸೊ ಸಮಿತಿ ಹಾಗೂ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ರಕ್ಷಣೆ (ನವದೆಹಲಿ) ಭಾನುವಾರ ಆಯೋಜಿಸಿದ್ದ ಮಕ್ಕಳ ರಕ್ಷಣೆಗಾಗಿ ರಾಜ್ಯಮಟ್ಟದ ನ್ಯಾಯಾಂಗ ಸಭೆಯಲ್ಲಿ ಅವರು ಮಾತನಾಡಿದರು.
ನಾಪತ್ತೆಯಾದ ಮಕ್ಕಳನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಾಕೆ ವಿಫಲರಾಗುತ್ತಿದ್ದಾರೆ ಎಂಬುದು ಚಿಂತನೆ ಮಾಡಬೇಕಾದ ವಿಚಾರ. ಇದಲ್ಲದೇ ಮಕ್ಕಳ ಮೇಲೆ ದೌರ್ಜನ್ಯ, ಹಿಂಸೆ, ಲೈಂಗಿಕ ಕಿರುಕುಳಗಳು ಕೂಡ ಜಾಸ್ತಿಯಾಗುತ್ತಿವೆ. ಇದನ್ನು ನಿಯಂತ್ರಿಸಲು ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಬೇಕು. ಜೊತೆಗೆ ಜನರೂ ಕೈಜೋಡಿಸಬೇಕು ಎಂದು ಹೇಳಿದರು.
ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿರುವುದು ಒಂದು ಕಡೆಯಾದರೆ, ಮಕ್ಕಳೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಕೊಳ್ಳುವಂಥ ಪರಿಸ್ಥಿತಿ ಇನ್ನೊಂದು ಕಡೆ ನಿರ್ಮಾಣವಾಗುತ್ತಿದೆ. ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ನಿಗಾ ಇಡಬೇಕು ಎಂದು ಸಲಹೆ ನೀಡಿದರು.
ಮಕ್ಕಳ ರಕ್ಷಣೆ ಎನ್ನುವುದು ಸೂಕ್ಷ್ಮವಾದ ವಿಚಾರ. ರಕ್ಷಣೆಗಾಗಿ ಕಾನೂನುಗಳಿವೆ. ಅವುಗಳು ಪರಿಣಾಮಕಾರಿಯಾಗಿ ಜಾರಿಯಾಗಬೇಕು ಎಂದರು.
ಬಾಲನ್ಯಾಯ ಮತ್ತು ಪೋಕ್ಸೊ ಸಮಿತಿಯ ಅಧ್ಯಕ್ಷರಾದ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನಿಲ್ ಯಾದವ್, ನವದೆಹಲಿಯ ಮಕ್ಕಳ ಹಕ್ಕುಗಳ ರಾಷ್ಟ್ರೀಯ ಸಂಚಾಲಕರಾದ ರವಿಕಾಂತ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.