ADVERTISEMENT

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮೊಬೈಲ್–ಸಿಮ್ ಕಾರ್ಡ್‌ ಪತ್ತೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 15:48 IST
Last Updated 24 ಡಿಸೆಂಬರ್ 2025, 15:48 IST
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ 
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ    

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ವಿವಿಧ ಬ್ಯಾರಕ್‌ಗಳಲ್ಲಿ ಮಂಗಳವಾರ ನಡೆದ ತಪಾಸಣೆ ವೇಳೆ ನಾಲ್ಕು ಮೊಬೈಲ್‌ ಫೋನ್‌ಗಳು, ಸಿಮ್ ಕಾರ್ಡ್‌, ಚಾರ್ಜರ್‌, ಇಯರ್ ಬಡ್ಸ್‌ ಮತ್ತು ಇಯರ್ ಫೋನ್ ಪತ್ತೆಯಾಗಿವೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ತಿಳಿಸಿದ್ದಾರೆ.

‘ಕಾರಾಗೃಹ ಸುಧಾರಣಾ ಸಂಕಲ್ಪ ಅಭಿಯಾನ’ ಅಡಿ ಸಹಾಯಕ ಜೈಲರ್‌ ಎಸ್.ಜೆ.ಜಕಾತಿ, ಅಧೀಕ್ಷಕ ಎಚ್‌.ಎ.ಪರಮೇಶ್ ಹಾಗೂ ಸಹಾಯಕ ಅಧೀಕ್ಷಕ ಕರ್ಣ ಬಿ. ಕ್ಷತ್ರಿ ನೇತೃತ್ವದ ತಂಡಗಳು ತಪಾಸಣೆ ಕೈಗೊಂಡಾಗ ಕೀ ಪ್ಯಾಡ್ ಮೊಬೈಲ್, ಆ್ಯಂಡ್ರಾಯ್ಡ್‌ ಮೊಬೈಲ್ ಸೇರಿ ಕೆಲ ನಿಷೇಧಿತ ವಸ್ತುಗಳು ಪತ್ತೆಯಾಗಿವೆ.

ನಿಷೇಧಿತ ವಸ್ತುಗಳನ್ನು ಸಾಗಿಸಿದವರು, ಇದಕ್ಕೆ ಸಹಕರಿಸಿದವರು ಮತ್ತು ವಸ್ತುಗಳನ್ನು ಬಳಕೆ ಮಾಡಿದವರ ವಿರುದ್ಧ ಕಾರಾಗೃಹ (ತಿದ್ದುಪಡಿ) ಕಾಯ್ದೆ 2022ರ ಕಲಂ 42ರ ಅನ್ವಯ ಪ್ರಕರಣ ದಾಖಲಿಸುವಂತೆ ದೂರು ನೀಡಿದ್ದು, ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ADVERTISEMENT

ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಕುಮಾರ್ ಅವರು ಉತ್ತಮ ತಪಾಸಣೆ ಕೈಗೊಂಡ ಸಿಬ್ಬಂದಿಗೆ ₹ 5 ಸಾವಿರ ನಗದು ಬಹುಮಾನ ಹಾಗೂ ಎಚ್‌.ಎ.ಪರಮೇಶ್ ಮತ್ತು ಕರ್ಣ ಬಿ. ಕ್ಷತ್ರಿ ಅವರಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದ್ದಾರೆ.

ನವೆಂಬರ್ 11ರಿಂದ ಈವರೆಗೆ ಒಟ್ಟು 16 ಪ್ರಕರಣಗಳು ದಾಖಲಾಗಿವೆ. ನವೆಂಬರ್ 11ರಿಂದ ಡಿಸೆಂಬರ್ 23ರ ಅವಧಿಯಲ್ಲಿ ಒಟ್ಟು 109 ಮೊಬೈಲ್, 24 ಚಾರ್ಜರ್, 88 ಸಿಮ್, 18 ಇಯರ್ ಫೋನ್, ₹64,880 ನಗದು ಪತ್ತೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.