ADVERTISEMENT

ಮೊಬೈಲ್‌ಗಾಗಿ ಇರೀತಾರೆ, ಜೀವಾನೂ ತೆಗೀತಾರೆ!

ರಾಜಧಾನಿಯಲ್ಲಿ ಮಿತಿಮೀರಿದ ಸುಲಿಗೆಕೋರರ ಅಟ್ಟಹಾಸ l ಕಂಗಾಲಾದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 24 ಮೇ 2019, 19:52 IST
Last Updated 24 ಮೇ 2019, 19:52 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜಧಾನಿಯಲ್ಲಿ ಸುಲಿಗೆಕೋರರ ಹಾವಳಿ ಮಿತಿ ಮೀರಿದ್ದು, ಹಗಲು–ರಾತ್ರಿ ಎನ್ನದೇ ರಾಜಾರೋಷವಾಗಿ ಓಡಾಡಿಕೊಂಡು ಜನರ ಮೊಬೈಲ್‌ಗಳನ್ನು ದೋಚುತ್ತಿದ್ದಾರೆ. ಕೇವಲ ಒಂದು ಮೊಬೈಲ್‌ಗಾಗಿ ಡಿಜಿಪಿ ಕಚೇರಿ ಸಮೀಪವೇ ಇತ್ತೀಚೆಗೆ ನಡೆದ ಟ್ರ್ಯಾಕ್ಟರ್ ಚಾಲಕನ ಹತ್ಯೆಯು ನಾಗರಿಕ ವಲಯದಲ್ಲಿ ಆತಂಕ ಸೃಷ್ಟಿಸಿದೆ.

ಹಗಲು ವೇಳೆ ಕಾಲೇಜು ವಿದ್ಯಾರ್ಥಿನಿಯರು, ಮಹಿಳೆಯರು, ವೃದ್ಧರು ಹಾಗೂ ಬಸ್ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಕಳ್ಳತನ ಮಾಡುತ್ತಿರುವ ಕಿಡಿಗೇಡಿಗಳು, ರಾತ್ರಿ ಸಮಯದಲ್ಲಿ ಒಂಟಿಯಾಗಿ ಓಡಾಡುವವರನ್ನು ಅಡ್ಡಗಟ್ಟಿ ಮೊಬೈಲ್ ಕೇಳುತ್ತಿದ್ದಾರೆ. ಕೊಡಲು ನಿರಾಕರಿಸಿದರೆ, ಚಾಕುವಿನಿಂದ ಚುಚ್ಚಿ ಕಿತ್ತುಕೊಂಡು ಹೋಗುತ್ತಿದ್ದಾರೆ. ನಿತ್ಯ ಇಂತಹ ಹತ್ತಾರು ಪ್ರಕರಣಗಳು ದಾಖಲಾಗುತ್ತಿದ್ದರೂ, ಸುಲಿಗೆಕೋರರ ಸದ್ದು ಮಾತ್ರ ಅಡಗಿಲ್ಲ.

ನೃಪತುಂಗ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆಯ ಮುಖ್ಯ ಎಂಜಿನಿಯರ್ ಕಚೇರಿ ಎದುರೇ ಮೇ 12ರಂದು ರಾತ್ರಿ ದುಷ್ಕರ್ಮಿಗಳು, ಟ್ರ್ಯಾಕ್ಟರ್ ಚಾಲಕ ಶಿವನಾಯಕ್ (40) ಎಂಬುವರಿಗೆ ಚಾಕುವಿನಿಂದ ಇರಿದು ಮೊಬೈಲ್ ದೋಚಿಕೊಂಡು ಹೋಗಿದ್ದರು. ತೀವ್ರ ಗಾಯಗೊಂಡಿದ್ದ ಚಾಲಕ, ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

ADVERTISEMENT

ನಾಯಂಡಹಳ್ಳಿಯ ‘ಮೆಟ್ರೊ ಬೈಕ್‌’ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ಅಜಯ್‌ಕುಮಾರ್‌ ಎಂಬುವರು ಮೇ 21ರಂದು ತಡರಾತ್ರಿ ಕೆಲಸ ಮುಗಿಸಿ ಮನೆಗೆ ಹೊರಟಿದ್ದರು. ರಾಜರಾಜೇಶ್ವರಿನಗರ ಬಳಿ ಅವರನ್ನು ಅಡ್ಡಗಟ್ಟಿದ್ದ ಆರು ದುಷ್ಕರ್ಮಿಗಳು, ಚಾಕುವಿನಿಂದ ಬೆನ್ನಿಗೆ ಮೂರ್ನಾಲ್ಕು ಬಾರಿ ಇರಿದು ಮೊಬೈಲ್ ದೋಚಿದ್ದಾರೆ. ಅದೇ ರಾತ್ರಿ ಕೆಂಗೇರಿ ಬಳಿಯ ಕಾನ್‌ಕಾರ್ಡ್‌ ರಸ್ತೆಯಲ್ಲೂ ಬಿ.ನರೇಶ್ ಎಂಬುವರಿಗೆ ಇರಿದು ಮೊಬೈಲ್ ಕಿತ್ತುಕೊಂಡು ಹೋಗಿದ್ದಾರೆ.

ಇಂಥ ಘಟನೆಗಳ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಡಿಸಿಪಿ ಡಿ.ದೇವರಾಜ್, ‘ಮೊಬೈಲ್‌ಗಾಗಿ ಹಲ್ಲೆ ಮಾಡುತ್ತಿದ್ದ ಶಿವಾಜಿನಗರದ ಗ್ಯಾಂಗ್‌ ಸದಸ್ಯರನ್ನು ಎರಡು ತಿಂಗಳ ಹಿಂದೆ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಈಗ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿಯ ಕೆಲ ಯುವಕರು ಮಾದಕ ವಸ್ತುವಿನ ದುಶ್ಚಟಕ್ಕೆ ಬಿದ್ದು ಗ್ಯಾಂಗ್ ಕಟ್ಟಿಕೊಂಡು ಕೃತ್ಯ ಮುಂದುವರಿಸಿದ್ದಾರೆ. ಮೊಬೈಲ್‌ಗಾಗಿ ಚಾಲಕ ಶಿವನಾಯಕ್ ಅವರನ್ನು ಕೊಂದಿದ್ದ ಇಬ್ಬರನ್ನು ಈಗಾಗಲೇ ಬಂಧಿಸಲಾಗಿದ್ದು, ಉಳಿದವರ ಪತ್ತೆಗೂ ಕ್ರಮ ಕೈಗೊಳ್ಳಲಾಗಿದೆ’ ಎಂದರು.

‘ನಿತ್ಯ ರಾತ್ರಿ 10ರಿಂದ 12ರ ಅವಧಿಯಲ್ಲೇ ಇಂಥ ಪ್ರಕರಣಗಳು ವರದಿಯಾಗುತ್ತಿದ್ದು, ಆ ಅವಧಿಯಲ್ಲಿ ಪೊಲೀಸರ ಗಸ್ತು ಹೆಚ್ಚಿಸಲಾಗಿದೆ. ಸಾರ್ವಜನಿಕರು ಸಹ ಎಚ್ಚರಿಕೆಯಿಂದ ಇರಬೇಕು’ ಎಂದೂ ಸಲಹೆ ನೀಡಿದರು.

743 ಮೊಬೈಲ್‌ ಜಪ್ತಿ ಮಾಡಿದ್ದ ಪೊಲೀಸರು

ಸಾರ್ವಜನಿಕರಿಂದ ಕಿತ್ತ ಹಾಗೂ ಕಳವು ಮಾಡಿದ ಮೊಬೈಲ್‌ಗಳನ್ನು ದುಷ್ಕರ್ಮಿಗಳು ಗಾಂಧಿನಗರದ ಬರ್ಮಾ ಬಜಾರ್‌ನಲ್ಲಿರುವ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಇದೆ. ಅದೇ ಕಾರಣಕ್ಕೆ ಉಪ್ಪಾರಪೇಟೆ ಪೊಲೀಸರು, ಇತ್ತೀಚೆಗೆ ಬರ್ಮಾ ಬಜಾರ್ ಮೇಲೆ ದಾಳಿ ಮಾಡಿ ₹7 ಲಕ್ಷ ಮೌಲ್ಯದ 743 ಮೊಬೈಲ್‌ಗಳನ್ನು ಜಪ್ತಿ ಮಾಡಿದ್ದರು.

ಆ ಪೈಕಿ ಕೆಲವು ಮೊಬೈಲ್‌ಗಳನ್ನು ಮಾಲೀಕರಿಗೆ ವಾಪಸ್ ನೀಡಲಾಗಿದೆ. ರಸ್ತೆಯಲ್ಲಿ ಮಾತನಾಡುತ್ತಿದ್ದಾಗಲೇ ದುಷ್ಕರ್ಮಿಗಳು ಮೊಬೈಲ್ ಕಸಿದುಕೊಂಡು ಹೋಗಿದ್ದರೆಂದು ಮಾಲೀಕರು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನುಳಿದ ಮೊಬೈಲ್‌ಗಳ ಮಾಲೀಕರ ಪತ್ತೆ ಕೆಲಸ ಪ್ರಗತಿಯಲ್ಲಿದೆ.

‘ಮೊಬೈಲ್‌ ಕದಿಯುವುದು ಹಾಗೂ ಮಾರುವುದು ಈಗ ಸುಲಭವಾಗಿದೆ. ಸರಗಳವು ರೀತಿಯಲ್ಲೇ ಮೊಬೈಲ್‌ಗಳನ್ನು ದುಷ್ಕರ್ಮಿಗಳು ಕಿತ್ತೊಯ್ಯುತ್ತಿದ್ದಾರೆ. ಕಳ್ಳರ ಪತ್ತೆಗೆ ನಿರಂತರವಾಗಿ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಆದರೆ, ಪ್ರತಿ ಬಾರಿಯೂ ಹೊಸಬರೇ ಇಂಥ ಕೃತ್ಯ ಎಸಗುತ್ತಿದ್ದಾರೆ. ಕಳ್ಳರಿಂದ ಮೊಬೈಲ್ ಖರೀದಿಸುವ ವ್ಯಾಪಾರಿಗಳ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ’ ಎಂದು ಉಪ್ಪಾರಪೇಟೆ ಪೊಲೀಸರು ಹೇಳಿದರು.

ಮಾತನಾಡುವಾಗಲೇ ಕಿತ್ತೊಯ್ದರು

ನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರು, ಸಂಬಂಧಿಕರನ್ನು ಊರಿಗೆ ಕಳುಹಿಸಲು ಮೇ 21ರ ರಾತ್ರಿ ಆನಂದರಾವ್ ವೃತ್ತದ ಬಳಿ ತೆರಳಿದ್ದಾಗ ದುಷ್ಕರ್ಮಿಗಳು ಅವರ ಮೊಬೈಲ್‌ ಕಿತ್ತೊಯ್ದಿದ್ದಾರೆ.

ಇತ್ತೀಚೆಗೆ ಎಂ.ಜಿ.ರಸ್ತೆಯಲ್ಲಿ ಛಾಯಾಗ್ರಾಹಕರೊಬ್ಬರ ಮೊಬೈಲನ್ನೂ ದೋಚಿದ್ದಾರೆ. ಶೇಷಾದ್ರಿಪುರ, ಜಯನಗರ, ಯಶವಂತಪುರ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಬಸವನಗುಡಿ, ಬನಶಂಕರಿ ಸೇರಿದಂತೆ ಕಾಲೇಜುಗಳು ಹೆಚ್ಚಿರುವ ಪ್ರದೇಶಗಳಲ್ಲೂ ಮೊಬೈಲ್ ಕಳವು ಪ್ರಕರಣಗಳು ಹೆಚ್ಚುತ್ತಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.