ADVERTISEMENT

ಬೆಂಗಳೂರು: ‘ಮೊಬೈಲ್‌ ಶೌಚಾಲಯ' ನಿರ್ಮಿಸಿದ ಪಿಎಸ್ಐ

ಗೊರಗುಂಟೆಪಾಳ್ಯದಲ್ಲಿ ಪ್ರಯಾಣಿಕರ ಯಾತನೆ - 100 ದಿನದ ಅಭಿಯಾನಕ್ಕೆ ಸ್ಪಂದಿಸದ ಬಿಬಿಎಂಪಿ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 20:33 IST
Last Updated 15 ಜೂನ್ 2022, 20:33 IST
ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಇರಿಸಲಾಗಿರುವ ಮೊಬೈಲ್ ಶೌಚಾಲಯದ ಎದುರು ಪಿಎಸ್ಐ ಶಾಂತಪ್ಪ ಜಡೆಮ್ಮನವರ್ – ಪ್ರಜಾವಾಣಿ ಚಿತ್ರ
ಗೊರಗುಂಟೆಪಾಳ್ಯ ಬಸ್ ತಂಗುದಾಣ ಬಳಿ ಇರಿಸಲಾಗಿರುವ ಮೊಬೈಲ್ ಶೌಚಾಲಯದ ಎದುರು ಪಿಎಸ್ಐ ಶಾಂತಪ್ಪ ಜಡೆಮ್ಮನವರ್ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಗೊರಗುಂಟೆಪಾಳ್ಯದಲ್ಲಿ ಜನರು ಅನುಭವಿಸುತ್ತಿರುವ ಶೌಚಾಲಯ ಸಮಸ್ಯೆ‌ ಬಗೆಹರಿಸುವಂತೆ 100 ದಿನ ನಿರಂತರವಾಗಿ ಅಭಿಯಾನ ನಡೆಸಿದರೂ ಬಿಬಿಎಂಪಿ ಅಧಿಕಾರಿಗಳು ಸ್ಪಂದಿಸದಿದ್ದರಿಂದ, ಪಿಎಸ್ಐ ಶಾಂತಪ್ಪ ಜಡೆಮ್ಮನವರ್ ಹಾಗೂ ತಂಡದವರು ತಮ್ಮ ಖರ್ಚಿನಲ್ಲೇ 'ಮೊಬೈಲ್‌ ಶೌಚಾಲಯ' ನಿರ್ಮಿಸಿ ಬಳಕೆಗೆ ಮುಕ್ತಗೊಳಿಸಿದ್ದಾರೆ.

ಗೊರಗುಂಟೆಪಾಳ್ಯದ ಬಸ್ ತಂಗುದಾಣಕ್ಕೆ‌ ಹೊಂದಿಕೊಂಡ ಜಾಗದಲ್ಲಿ ಮೊಬೈಲ್‌ ಶೌಚಾಲಯದ ವಾಹನ ನಿಲ್ಲಿಸಲಾಗಿದ್ದು, ಇದಕ್ಕೆ ಬೇಕಾದ ನೀರಿನ ವ್ಯವಸ್ಥೆಯೂ ವಾಹನದಲ್ಲಿದೆ.

ಬುಧವಾರ ಬೆಳಿಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ತೃತೀಯ ಲಿಂಗಿಯೊಬ್ಬರು ಶೌಚಾಲಯವನ್ನು ಉದ್ಘಾಟಿಸಿದರು. ತಮ್ಮನ್ನು ದೂರವಿಡಲು ಇಚ್ಛಿಸುವವರ‌ ನಡುವೆ ಇಂಥ ಕೆಲಸಕ್ಕೆ ಆಹ್ವಾನಿಸಿದ್ದಕ್ಕೆ ತೃತೀಯ ಲಿಂಗಿ ಭಾವುಕರಾದರು.

ADVERTISEMENT

ವಾಹನದಲ್ಲಿ 10 ಶೌಚಗೃಹಗಳಿದ್ದು, ಗೊರಗುಂಟೆಪಾಳ್ಯ ತಂಗುದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ಇದರಿಂದ ಅನುಕೂಲ ಆಗಲಿದೆ. ಶೌಚಾಲಯ ತುಂಬಿದ‌ ನಂತರ, ಅದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ವ್ಯವಸ್ಥೆಯಿದೆ. ಶೌಚಾಲಯ ನಿರ್ವಹಣೆ ಜವಾಬ್ದಾರಿಯನ್ನು ಕೆಲ ಸ್ವಯಂಸೇವಕರು ವಹಿಸಿಕೊಂಡಿದ್ದಾರೆ. ಪಿಎಸ್‌ಐ ಕೆಲಸಕ್ಕೆ ಪೊಲೀಸ್ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ತುಮಕೂರು, ಚಿತ್ರದುರ್ಗ, ದಾವಣಗೆರೆ, ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕದ ಜಿಲ್ಲೆಗಳು ಹಾಗೂ ಉತ್ತರ ಭಾರತದ ರಾಜ್ಯಗಳಿಂದ ಬೆಂಗಳೂರಿಗೆ ಬರುವ ವಾಹನಗಳು ಗೊರಗುಂಟೆಪಾಳ್ಯ ಮಾರ್ಗವಾಗಿ ಹಾದು ಹೋಗುತ್ತವೆ. ಪ್ರಯಾಣಿಕರು ಇಳಿಯುವ ಹಾಗೂ ಹತ್ತುವ ಪ್ರಮುಖ ಸ್ಥಳ ಇದಾಗಿದೆ. ಇಂಥ ಸ್ಥಳದಲ್ಲಿ ವ್ಯವಸ್ಥಿತ ಶೌಚಾಲಯ ಇಲ್ಲದಿದ್ದರಿಂದ, ಮಲ–ಮೂತ್ರ ವಿಸರ್ಜನೆಗಾಗಿ ಜನರು ಯಾತನೆ ಅನುಭವಿಸುತ್ತಿದ್ದರು’ ಎಂದು ಪಿಎಸ್‌ಐ ಶಾಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಹಿಳೆಯರು ಹಾಗೂ ವೃದ್ಧರು, ಮಲ ಹಾಗೂ ಮೂತ್ರ ವಿಸರ್ಜನೆಗಾಗಿ ಕಿ.ಮೀ.ಗಟ್ಟಲೇ ಹೋಗಬೇಕಾಗಿತ್ತು. ಕೆಲ ಪುರುಷರು, ರಸ್ತೆ ಬದಿಗಳಲ್ಲೇ ಮೂತ್ರ ವಿಸರ್ಜನೆ ಮಾಡಿ ಪರಿಸರವನ್ನು ಕಲುಷಿತಗೊಳಿಸುತ್ತಿದ್ದರು. ಇದರಿಂದಾಗಿ ತಂಗುದಾಣದಲ್ಲಿ ದುರ್ನಾತ ಬರುತ್ತಿತ್ತು. ಸಾರ್ವಜನಿಕರು ಮೂಗು ಮುಚ್ಚಿಕೊಂಡು ನಿಲ್ಲುವ ಸ್ಥಿತಿಯೂ ಬಂದಿತ್ತು’ ಎಂದೂ ಹೇಳಿದರು.

‘ಗೊರಗುಂಟೆಪಾಳ್ಯ ತಂಗುದಾಣ ಬಳಿ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿ ಸಾಮಾಜಿಕ ಮಾಧ್ಯಮಗಳ ಮೂಲಕ ಅಭಿಯಾನ ಆರಂಭಿಸಲಾಗಿತ್ತು. 'ಸ್ವಚ್ಛತೆಯೇ ಸ್ವರಾಜ್' ಎನ್ನುವ ಗಾಂಧೀಜಿ ತತ್ವ ಹಾಗೂ ‘ಸ್ವಚ್ಛ ಭಾರತ’ ಧ್ಯೇಯದಡಿ 100 ದಿನ ಅಭಿಯಾನ ನಡೆಸಿ ಜಾಗ ಸೂಚಿಸಿದರೂ ಬಿಬಿಎಂಪಿ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಸ್ಪಂದಿಸಲಿಲ್ಲ. ಹೀಗಾಗಿ, ಮೊಬೈಲ್ ಶೌಚಾಲಯ ನಿರ್ಮಿಸಿ ತಂದಿಟ್ಟಿದ್ದೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.