ADVERTISEMENT

ರಾಸಾಯನಿಕ ಸೋರಿಕೆ, ದಿಕ್ಕಾಪಾಲಾಗಿ ಓಡಿದ ಜನ!

ವಿಮಾನ ನಿಲ್ದಾಣದ ಸಿಬ್ಬಂದಿಗೆ ಆರು ದಿನಗಳ ತರಬೇತಿ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2018, 18:50 IST
Last Updated 17 ನವೆಂಬರ್ 2018, 18:50 IST
ರಾಸಾಯನಿಕ ಸೋರಿಕೆಯಾದ ಸ್ಥಳದಲ್ಲಿ ಆಮ್ಲಜನಕ ಸಿಂಪಡಿಸಿದ ರಕ್ಷಣಾ ಪಡೆಯ ಸಿಬ್ಬಂದಿ
ರಾಸಾಯನಿಕ ಸೋರಿಕೆಯಾದ ಸ್ಥಳದಲ್ಲಿ ಆಮ್ಲಜನಕ ಸಿಂಪಡಿಸಿದ ರಕ್ಷಣಾ ಪಡೆಯ ಸಿಬ್ಬಂದಿ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎಎಲ್) ಆವರಣದಲ್ಲಿ ನೋಡು ನೋಡುತ್ತಿದ್ದಂತೆ ರಾಸಾಯನಿಕ ಸೋರಿಕೆಯಾಗಿ ಗಾಳಿ ವಿಷವಾಯಿತು. ಉಸಿರಾಡಲಾಗದೆ ಐವರು ಭದ್ರತಾ ಸಿಬ್ಬಂದಿ ಕುಸಿದು ಬಿದ್ದರು. ‘ಹೆಲ್ಪ್‌ ಮೀ’ ಎಂದು ಜನರೆಲ್ಲ ದಿಕ್ಕಾಪಾಲಾಗಿ ಓಡಲಾರಂಭಿಸಿದರು. ರಕ್ಷಣೆಗೆ ಬಂದ ಪರಿಣಿತರ ತಂಡ, ಭದ್ರತಾ ಸಿಬ್ಬಂದಿಯನ್ನು ರಕ್ಷಿಸಿ ಸ್ಥಳದಲ್ಲಿದ್ದ ಆತಂಕ ದೂರ ಮಾಡಿದರು...!

ಅಂದಹಾಗೆ, ಇದೆಲ್ಲ ನೈಜ ಘಟನೆಯಲ್ಲ. ಬದಲಿಗೆ, ನಿಲ್ದಾಣದ ಹಜ ಟರ್ಮಿನಲ್‌ನ ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ‘ರಾಸಾಯನಿಕ ದುರಂತ’ ಅಣಕು ಪ್ರದರ್ಶನದಲ್ಲಿ ಕಂಡುಬಂದ ದೃಶ್ಯಗಳಷ್ಟೆ. ನಿತ್ಯವೂ ಸಾವಿರಾರು ಪ್ರಯಾಣಿಕರು ಬಂದು ಹೋಗುವ ನಿಲ್ದಾಣದಲ್ಲಿ ರಾಸಾಯನಿಕ ದುರಂತಗಳು ಸಂಭವಿಸಿದರೆ, ಅದನ್ನು ಯಾವ ರೀತಿ ನಿಯಂತ್ರಿಸಬೇಕೆಂಬುದನ್ನು ರಕ್ಷಣಾ ಸಿಬ್ಬಂದಿಯು ಅಣಕು ಮೂಲಕ ತೋರಿಸಿಕೊಟ್ಟರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ, ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲಾಯ್ಡ್‌ ಸೈನ್ಸ್‌ (ಐಎನ್‌ಎಂಎಎಸ್), ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌) ಹಾಗೂ ಕೆಐಎಎಲ್ ಸಹಯೋಗದಲ್ಲಿ ‘ರಾಸಾಯನಿಕ ಸೋರಿಕೆ– ವಿಶೇಷ ತರಬೇತಿ’ ವಿಷಯದಡಿಆರು ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ತರಬೇತಿ ಪಡೆದ ಸಿಬ್ಬಂದಿಯೇ ಎನ್‌ಡಿಆರ್‌ಎಫ್‌ ಸಿಬ್ಬಂದಿ ಜೊತೆ ಶನಿವಾರ ಅಣಕು ಪ್ರದರ್ಶನ ನಡೆಸಿಕೊಟ್ಟರು.

ADVERTISEMENT

ಕಾರಿನಿಂದ ಡಬ್ಬ ಇಳಿಸುವಾಗ ಸೋರಿಕೆ: ರಾಸಾಯನಿಕ ಡಬ್ಬದ ಮಾದರಿಯ ಡಬ್ಬವನ್ನು ಕಾರೊಂದರಲ್ಲಿ ಮೈದಾನಕ್ಕೆ ತರಲಾಯಿತು. ಕೆಲಸಗಾರೊಬ್ಬ, ಆ ಡಬ್ಬವನ್ನು ಕಾರಿನಿಂದ ಕೆಳಗೆ ಇಳಿಸುತ್ತಿದ್ದಾಗಲೇ ರಾಸಾಯನಿಕ ಸೋರಿಕೆಯಾಯಿತು. ಕೆಲಸಗಾರ, ಪ್ರಜ್ಞೆ ತಪ್ಪಿ ಬಿದ್ದ. ಏನಾಯಿತೆಂದು ನೋಡಲು ಸ್ಥಳಕ್ಕೆ ಹೋದ ಐವರು ಭದ್ರತಾ ಸಿಬ್ಬಂದಿ ಸಹ ಸ್ಥಳದಲ್ಲೇ ಕುಸಿದು ಬಿದ್ದರು.

ಅದನ್ನು ಗಮನಿಸಿದ ನಿಲ್ದಾಣದ ಇತರೆ ಸಿಬ್ಬಂದಿ ಹಾಗೂ ಪ್ರಯಾಣಿಕರು, ‘ಹೆಲ್ಪ್‌ ಮೀ’ ಎಂದು ಕೂಗುತ್ತ ದಿಕ್ಕಾಪಾಲಾಗಿ ಓಡಲಾರಂಭಿಸಿ
ದರು. ಭದ್ರತಾ ಸಿಬ್ಬಂದಿ, ವೈರ್‌ಲೇಸ್‌ ಮೂಲಕ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದರು. ಐದೇ ನಿಮಿಷದಲ್ಲಿ ಆಂಬುಲೆನ್ಸ್‌ ಸಮೇತ ಸ್ಥಳಕ್ಕೆ ಬಂದ ರಕ್ಷಣಾ ತಂಡದ ಸಿಬ್ಬಂದಿ, ಕಾರ್ಯಾಚರಣೆ ಶುರು ಮಾಡಿದರು.

ಮೊದಲಿಗೆ ಗಾಳಿ ಬೀಸುವ ದಿಕ್ಕು ಗುರುತಿಸಿದ ಸಿಬ್ಬಂದಿ, ಆ ಜಾಗದಲ್ಲಿ ಜನರು ಓಡಾಡದಂತೆ ಬ್ಯಾರಿಕೇಡ್‌ ನಿಲ್ಲಿಸಿದರು. ಅಲ್ಲಿದ್ದ ಜನರನ್ನು ಬೇರೆಡೆ ಕಳುಹಿಸಿದರು. ಮುಖಕ್ಕೆ ಮಾಸ್ಕ್‌ ಹಾಗೂ ಸುರಕ್ಷಾ ಕವಚ ತೊಟ್ಟಿದ್ದ ರಕ್ಷಣಾ ಸಿಬ್ಬಂದಿ, ಘಟನಾ ಸ್ಥಳಕ್ಕೆ ಹೋಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಕೆಲಸಗಾರ ಹಾಗೂ ಭದ್ರತಾ ಸಿಬ್ಬಂದಿ ಎತ್ತಿಕೊಂಡು ಬಂದು ಆಂಬುಲೆನ್ಸ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದರು. ಕಾರ್ಯಾಚರಣೆ ನೋಡುತ್ತಿದ್ದ ವೇಳೆಯಲ್ಲೇ ಇಬ್ಬರು ಪ್ರಯಾಣಿಕರು, ಪ್ರಜ್ಞೆ ತಪ್ಪಿ ಬಿದ್ದರು. ಅವರಿಗೂ ಚಿಕಿತ್ಸೆ ನೀಡಲಾಯಿತು. ರಕ್ಷಣಾ ತಂಡದ ಕೆಲ ಸದಸ್ಯರು, ರಾಸಾಯನಿಕ ತುಂಬಿದ್ದ ಡಬ್ಬವನ್ನು ಪ್ಯಾಕ್‌ ಮಾಡಿ ಪೆಟ್ಟಿಗೆಯೊಂದರಲ್ಲಿ ಹಾಕಿ ಲಾಕ್‌ ಮಾಡಿದರು. ನಂತರ, ಸ್ಥಳದಲ್ಲೆಲ್ಲ ಆಮ್ಲಜನಕ ಸಿಂಪಡಿಸಿ ವಾತಾವರಣದಲ್ಲಿದ್ದ ರಾಸಾಯನಿಕ ಅಂಶವನ್ನು ಕಡಿಮೆಗೊಳಿಸಿದರು. ಬಳಿಕ ಘಟನಾ ಸ್ಥಳವನ್ನು ‘ಸುರಕ್ಷಿತ ಸ್ಥಳ’ ಎಂದು ಘೋಷಿಸಿ ಕಾರ್ಯಾಚರಣೆ ಪೂರ್ಣಗೊಳಿಸಿದರು.

ಅದಾದ ಬಳಿಕವೂ ರಕ್ಷಣಾ ಸಿಬ್ಬಂದಿ, ತಮ್ಮ ಮಾಸ್ಕ್‌ ಹಾಗೂ ಸುರಕ್ಷಾ ಕವಚಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿದರು. ಪ್ರದರ್ಶನ ನೋಡುತ್ತಿದ್ದಂತೆ ಜನರೆಲ್ಲ, ಚಪ್ಪಾಳೆ ತಟ್ಟಿ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸಿದರು.

52 ಮಂದಿಗೆ ತರಬೇತಿ: ‘ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಿಲ್ದಾಣದ 52 ಸಿಬ್ಬಂದಿಗೆ ತರಬೇತಿ ನೀಡಲಾಗಿದೆ’ ಎಂದು ಎನ್‌ಡಿಆರ್‌ಎಫ್‌ ಸಹಾಯಕ ಕಮಾಂಡೆಂಟ್ ಕೆ.ಎಸ್‌.ಸುಬೀಶ್ ಹೇಳಿದರು. ಬೆಂಗಳೂರು ಕೇಂದ್ರದ ಕಮಾಂಡೆಂಟ್ ಚೇತನ್‌ ಹಾಜರಿದ್ದರು.

ನಿಷೇಧವಿದ್ದರೂ ಅಕ್ರಮ ಸಾಗಣೆ

‘ವಿಮಾನಗಳಲ್ಲಿ ರಾಸಾಯನಿಕ ಸಾಗಿಸುವುದನ್ನು ನಿಷೇಧಿಸಲಾಗಿದೆ. ಅಷ್ಟಾದರೂ ಕೆಲವರು, ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ರಾಸಾಯನಿಕ ಸಾಗಿಸುತ್ತಿರುವ ಘಟನೆಗಳು ನಡೆಯುತ್ತಿವೆ. ಅಕಸ್ಮಾತ್, ರಾಸಾಯನಿಕ ಸೋರಿಕೆಯಾದರೆ ಏನು ಮಾಡಬೇಕು ಎಂಬುದನ್ನು ಸಿಬ್ಬಂದಿಗೆ ತರಬೇತಿಯಲ್ಲಿ ಹೇಳಿಕೊಡಲಾಗಿದೆ’ ಎಂದು ಎನ್‌ಡಿಆರ್‌ಎಫ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಎಲ್ಲಾದರೂ ರಾಸಾಯನಿಕ ಸೋರಿಕೆಯಾದರೆ, ಆ ಸ್ಥಳದಲ್ಲಿ ಗಾಳಿ ಬೀಸುವ ದಿಕ್ಕಿನಲ್ಲಿ ನಿಲ್ಲಬಾರದು. ಸ್ಥಳದಿಂದ ದೂರವಿರಬೇಕು. ನಿಯಂತ್ರಣ ಕೊಠಡಿಗೆ ವಿಷಯ ತಿಳಿಸಬೇಕು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.