ADVERTISEMENT

ಬೆಂಗಳೂರು: ‘ನಮ್ಮ ಮೆಟ್ರೊ’ಗೆ ಮರಳದ ಪ್ರಯಾಣಿಕರು

ಅಧಿಕಗೊಂಡ ವಾಯುಮಾಲಿನ್ಯ, ಶಬ್ದಮಾಲಿನ್ಯ, ವಾಹನ ದಟ್ಟಣೆ * ಹೆಚ್ಚಿದ ತಾಪಮಾನ

ಬಾಲಕೃಷ್ಣ ಪಿ.ಎಚ್‌
Published 11 ಮಾರ್ಚ್ 2025, 0:30 IST
Last Updated 11 ಮಾರ್ಚ್ 2025, 0:30 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣದರವನ್ನು ಬಿಎಂಆರ್‌ಸಿಎಲ್‌ ಏರಿಸಿ ಮಾರ್ಚ್‌ 8ಕ್ಕೆ ಒಂದು ತಿಂಗಳು ತುಂಬಿದೆ. ದರ ಏರಿಕೆಯ ಬಿಸಿಯಿಂದ ಮೆಟ್ರೊ ತೊರೆದವರು ವಾಪಸ್ಸಾಗಿಲ್ಲ. ಹಾಗಾಗಿ ಮೆಟ್ರೊ ಪ್ರಯಾಣಿಕರ ಸಂಖ್ಯೆ ಒಂದು ತಿಂಗಳಲ್ಲಿ ಒಟ್ಟು 50 ಲಕ್ಷದಷ್ಟು ಕಡಿಮೆಯಾಗಿದೆ. ಈ ಭಾನುವಾರ ಅತಿ ಕಡಿಮೆ ಪ್ರಯಾಣಿಕರ ಸಂಖ್ಯೆ ದಾಖಲಾಗಿದೆ.

ಶನಿವಾರ ಮತ್ತು ಭಾನುವಾರ ಪ್ರಯಾಣಿಕರ ಸಂಖ್ಯೆ ಕಡಿಮೆ. ಜನವರಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಸರಾಸರಿ 8.5 ಲಕ್ಷ ಜನರು ಸಂಚರಿಸುತ್ತಿದ್ದರು. ಇದು 7.30 ಲಕ್ಷಕ್ಕೆ ಇಳಿದಿದೆ. ವಾರಾಂತ್ಯದ ದಿನಗಳಲ್ಲಿ ಸರಾಸರಿ 7 ಲಕ್ಷ ಇರುತ್ತಿದ್ದ ಪ್ರಯಾಣಿಕರ ಸಂಖ್ಯೆ 5.8 ಲಕ್ಷಕ್ಕೆ ಇಳಿಕೆಯಾಗಿದೆ. ಮಾರ್ಚ್‌ 9ರಂದು ಕೇವಲ 4.70 ಲಕ್ಷ ಜನರು ಪ್ರಯಾಣಿಸಿದ್ದಾರೆ.

ಜನವರಿ 27ರಂದು 9.09 ಲಕ್ಷ ಜನರು ಸಂಚರಿಸಿದ್ದು, ಆ ತಿಂಗಳ ಗರಿಷ್ಠ ಸಂಖ್ಯೆಯಾಗಿತ್ತು. ಫೆಬ್ರುವರಿ 9ರಂದು ಪರಿಷ್ಕೃತ ದರ ಜಾರಿಯಾಗಿದ್ದು, ಅಲ್ಲಿಂದ ಮಾರ್ಚ್‌ 8ರವರೆಗಿನ ಒಂದು ತಿಂಗಳಲ್ಲಿ ಮೂರು ಬಾರಿ ಹೊರತುಪಡಿಸಿ 8 ಲಕ್ಷದ ಗಡಿಯನ್ನು ದಾಟಿಲ್ಲ. ದರ ಏರಿಕೆಯಾದ ಮರುದಿನ 8.28 ಲಕ್ಷ ಪ್ರಯಾಣಿಸಿದ್ದೇ ಅತಿ ಹೆಚ್ಚು. ಆನಂತರ ಫೆ. 24 (8.02 ಲಕ್ಷ) ಮತ್ತು ಮಾರ್ಚ್‌ 5ರಂದು (8.04) ಮಾತ್ರ 8 ಲಕ್ಷ ದಾಟಿತ್ತು.

ADVERTISEMENT

ಮೆಟ್ರೊ ಪ್ರಯಾಣ ದರ ಕಡಿಮೆ ಮಾಡದೇ ಇದ್ದರೆ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗುವುದು ಕಷ್ಟ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ನಮ್ಮ ಮೆಟ್ರೊದಲ್ಲಿ ಸಂಚರಿಸುವವರ ಸಂಖ್ಯೆ ಬಹಳ ಕಡಿಮೆಯಾಗಿದೆ. ಅದೇ ಹೊತ್ತಿಗೆ ನಗರದ ವಾಯುಮಾಲಿನ್ಯ, ಶಬ್ದಮಾಲಿನ್ಯ, ವಾಹನ ದಟ್ಟಣೆ, ಅಧಿಕಗೊಂಡಿದೆ. ತಾಪಮಾನ ಬಿಸಿಯಾಗಿದೆ. ಇದು ಮೆಟ್ರೊ ಪ್ರಯಾಣದರ ಏರಿಕೆಯ ಪರಿಣಾಮವಾಗಿದೆ. ಮೆಟ್ರೊ ದರ ಕಡಿಮೆ ಮಾಡಿದರೆ ಮೆಟ್ರೊದಿಂದ ದೂರ ಸರಿದಿರುವ ಪ್ರಯಾಣಿಕರು ಮತ್ತೆ ಮೆಟ್ರೊಗೆ ಮರಳಲಿದ್ದಾರೆ’ ಎಂದು ಗ್ರೀನ್‌ ಪೀಸ್‌ ಇಂಡಿಯಾ ಸದಸ್ಯೆ ನಿಶ್ಚಿತಾ ವೀರೇಂದ್ರ ಅಭಿಪ್ರಾಯಪಟ್ಟರು.

ಆಸ್ಪತ್ರೆ, ಶಾಲಾ ಕಾಲೇಜು, ಉದ್ಯೋಗ ಇನ್ನಿತರ ಕಾರಣಕ್ಕೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸುವವರಿಗೆ ಅನುಕೂಲವಾಗುಂತಹ ಸಾರಿಗೆ ನಿರ್ಮಿಸುವುದು ಸರ್ಕಾರಗಳ ಜವಾಬ್ದಾರಿ. ಬೆಂಗಳೂರಿನ ವಾಹನದಟ್ಟಣೆಯಿಂದ ಉಂಟಾಗುವ ಸಮಸ್ಯೆಯನ್ನು ‍ಪರಿಹರಿಸಬೇಕು ಎಂಬ ಕಾರಣಕ್ಕಾಗಿಯೇ ಸಾರ್ವಜನಿಕರ ಹಣದಲ್ಲಿ ಮೆಟ್ರೊ ಆರಂಭಿಸಲಾಗಿದೆ. ಅದೇ ದುಡ್ಡಿನಲ್ಲಿ ಇಲ್ಲಿನ ಮರಗಳನ್ನು ಕಡಿದು, ಜನರ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಈಗ ಅದೇ ಮೆಟ್ರೊದಲ್ಲಿ ಜನರು ಪ್ರಯಾಣಿಸದಷ್ಟು ದರ ಇರಿಸಿದರೆ ಮೂಲ ಉದ್ದೇಶವೇ ಹಾಳಾಗುತ್ತದೆ ಎಂದು ತಿಳಿಸಿದರು.

‘ಶಾಲಾ ಕಾಲೇಜುಗಳಲ್ಲಿ ಈಗ ಪರೀಕ್ಷೆ ಆರಂಭವಾಗುತ್ತಿದೆ. ಅನಿವಾರ್ಯವಾಗಿ ಜನರು ಮೆಟ್ರೊದಲ್ಲಿ ಪ್ರಯಾಣಿಸುತ್ತಿದ್ದಾರೆ. ಪರೀಕ್ಷೆಗಳು ಮುಗಿದ ಕೂಡಲೇ ಹಲವರು ಮೆಟ್ರೊ ಬಿಡಲಿದ್ದಾರೆ. ಬಾಡಿಗೆ ಮನೆಯಲ್ಲಿ ಇರುವವರು ಮೆಟ್ರೊ ಹತ್ತಿರದಿಂದ ಬಸ್‌ ಪ್ರಯಾಣಕ್ಕೆ ಹತ್ತಿರ ಇರುವಲ್ಲಿಗೆ ಸ್ಥಳಾಂತರಗೊಳ್ಳಲಿದ್ದಾರೆ. ಇದು ನಾವು ಜನರೊಂದಿಗೆ ಮಾತನಾಡಿದಾಗ ಗೊತ್ತಾಗಿರುವ ಅಂಶ. ಮುಂದೆ ಮೆಟ್ರೊ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ’ ಎಂದು ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಘಟನೆಯ ರಾಜೇಶ್‌ ಭಟ್‌ ಹೇಳಿದರು.

‘ಬಿಎಂಆರ್‌ಸಿಎಲ್‌ಗೆ ವಿದ್ಯುತ್‌ನಲ್ಲಿ ರಿಯಾಯಿತಿ, ಸಾಲದಲ್ಲಿ ರಿಯಾಯಿತಿಗಳನ್ನು ಸರ್ಕಾರವು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರೆ ಪ್ರಯಾಣದರವನ್ನು ಇಳಿಸಿ ಹೊರೆ ಕಡಿಮೆ ಮಾಡಬಹುದಿತ್ತು. ಸರ್ಕಾರಗಳಿಗೂ ಇದು ಬೇಕಾಗಿಲ್ಲ. ಮೆಟ್ರೊ ಹಳದಿ ಮಾರ್ಗ ಸದ್ಯದಲ್ಲಿಯೇ ಆರಂಭಗೊಳ್ಳಲಿದೆ. ಉಳಿದ ಮಾರ್ಗಗಳ ಕಾಮಗಾರಿಗಳು ನಡೆಯುತ್ತಿವೆ. ಹಗಲು ದರೋಡೆ ರೀತಿಯಲ್ಲಿ ದರ ಮುಂದುವರಿದರೆ ಅವರು ನಿರೀಕ್ಷಿಸಿದಷ್ಟು ಪ್ರಯಾಣಿಕರು ಬರುವುದಿಲ್ಲ’ ಎಂದು ಹೇಳಿದರು.

‘ದರ ನಿಗದಿ ಸಮಿತಿಯು ವರದಿ ನೀಡುವ ಮೊದಲು ಸಾರ್ವಜನಿಕರಿಂದ ಅಭಿಪ್ರಾಯ ಕೇಳಿತ್ತು. ನಾವು ಕೂಡ ಅಭಿಪ್ರಾಯ ನೀಡಿದ್ದೆವು. ದರ ಏರಿಕೆ ಮಾಡಿ ಎಂದು ಯಾರೂ ಹೇಳಿಲ್ಲ. ಹೆಸರಿಗಷ್ಟೇ ಅಭಿಪ್ರಾಯ ಕೇಳುವುದು ನಡೆದಿದೆ. ಅದಕ್ಕೆ ಯಾವ ಮಾನ್ಯತೆಯೂ ದೊರೆತಿಲ್ಲ. ದರ ನಿಗದಿ ಸಮಿತಿಯಲ್ಲಿ ಮೆಟ್ರೊ ಪ್ರಯಾಣಿಕರನ್ನು ಪ್ರತಿನಿಧಿಸುವ ಸಂಘಟನೆಗಳು ಇದ್ದಿದ್ದರೆ ಇಷ್ಟು ದರ ಹೆಚ್ಚಳವಾಗುತ್ತಿರಲಿಲ್ಲ’ ಎಂದು ವಿವರಿಸಿದರು.

ಸಂಸದರಿಗೇ ಸಿಗದ ವರದಿ!

ಮೆಟ್ರೊ ದರ ನಿಗದಿ ಸಮಿತಿ ನೀಡಿದ ವರದಿಯಲ್ಲಿ ಏನಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಸ್ವತಃ ಸಂಸದರೇ ವರದಿ ಕೇಳಿದ್ದರೂ ಬಿಎಂಆರ್‌ಸಿಎಲ್‌ ನೀಡಿಲ್ಲ. ಈ ಬಗ್ಗೆ ಸಂಸದ ಪಿ.ಸಿ. ಮೋಹನ್‌ ಅವರು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದು ‘ನಾನು ಪದೇ ಪದೇ ವಿನಂತಿಸಿದರೂ ವರದಿಯನ್ನು ನೀಡಿಲ್ಲ. ಜನರ ಕೈಗೆ ಎಟುಕದಷ್ಟು ದರ ಏರಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವನ್ನು (ಸಿ‍ಪಿಐ) ಶೇ 43.9ಕ್ಕೆ ನಿಲ್ಲಿಸದೇ ಇದ್ದರೆ ಕಾನೂನು ಹೋರಾಟ ಬಿಟ್ಟು ನನಗೆ ಬೇರೆ ದಾರಿ ಕಾಣುತ್ತಿಲ್ಲ’ ಎಂದು ತಿಳಿಸಿದ್ದಾರೆ.

ಸಾರ್ವಜನಿಕ ಸಾರಿಗೆ ಸೇವೆ ಲಭ್ಯವಾಗಬೇಕು. ಆದರೆ ಮೆಟ್ರೊ ಪ್ರಯಾಣ ದರವು ಬೈಕ್‌ನಲ್ಲಿ ಹೋಗುವುದಕ್ಕಿಂತ ದುಬಾರಿಯಾಗಿದೆ. ದರ ಇಳಿಸದಿದ್ದರೆ ಜನರ ಮೇಲಿನ ಹೊರೆ ಕಡಿಮೆಯಾಗದು.
-ನಿಶ್ಚಿತಾ ವೀರೇಂದ್ರ ಗ್ರೀನ್‌ ಪೀಸ್‌ ಇಂಡಿಯಾ ಸದಸ್ಯೆ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದರ ಕಡಿಮೆ ಇರುವಂತೆ ಕ್ರಮ ಕೈಗೊಳ್ಳುವ ಅವಕಾಶಗಳಿದ್ದರೂ ಎರಡೂ ಪಕ್ಷದವರು ಒಬ್ಬರನ್ನೊಬ್ಬರು ದೂರುತ್ತಾ ನಾಟಕವಾಡುತ್ತಿದ್ದಾರೆ.
-ರಾಜೇಶ್‌ ಭಟ್‌ ಮೆಟ್ರೊ ಪ್ರಯಾಣಿಕರ ಸಂಘಟನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.