ADVERTISEMENT

ಪೊಲೀಸ್ ಓಟಕ್ಕೆ ಹತ್ತು ಸಾವಿರ ಮಂದಿ ನೋಂದಣಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2025, 15:59 IST
Last Updated 27 ಫೆಬ್ರುವರಿ 2025, 15:59 IST
ಪೊಲೀಸ್ ಓಟದಲ್ಲಿ ಪಾಲ್ಗೊಳ್ಳುವವರಿಗೆ ನೀಡುವ ಟೀ ಶರ್ಟ್‌ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (ಮಧ್ಯದಲ್ಲಿ ಇರುವವರು) ಅನಾವರಣ ಮಾಡಿದರು. ಬಿ.ದಯಾನಂದ, ಜೂಹಿ ಸ್ಮಿತಾ ಸಿನ್ಹಾ ಉಪಸ್ಥಿತರಿದ್ದರು
ಪ‍್ರಜಾವಾಣಿ ಚಿತ್ರ
ಪೊಲೀಸ್ ಓಟದಲ್ಲಿ ಪಾಲ್ಗೊಳ್ಳುವವರಿಗೆ ನೀಡುವ ಟೀ ಶರ್ಟ್‌ ಅನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ (ಮಧ್ಯದಲ್ಲಿ ಇರುವವರು) ಅನಾವರಣ ಮಾಡಿದರು. ಬಿ.ದಯಾನಂದ, ಜೂಹಿ ಸ್ಮಿತಾ ಸಿನ್ಹಾ ಉಪಸ್ಥಿತರಿದ್ದರು ಪ‍್ರಜಾವಾಣಿ ಚಿತ್ರ   

ಬೆಂಗಳೂರು: ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ (ಎಸ್‌ಬಿಐ) ಸಹಯೋಗದಲ್ಲಿ ಮಾರ್ಚ್ 9ರಂದು ಹಮ್ಮಿಕೊಂಡಿರುವ ಪೊಲೀಸ್ ಓಟ(ಕೆಎಸ್‌ಪಿ ರನ್)ದಲ್ಲಿ ಪಾಲ್ಗೊಳ್ಳಲು ಹತ್ತು ಸಾವಿರಕ್ಕೂ ಅಧಿಕ ಮಂದಿ ನೋಂದಣಿ ಮಾಡಿಸಿಕೊಂಡಿದ್ದಾರೆ.

ಪೊಲೀಸ್ ಪ್ರಧಾನ ಕಚೇರಿಯಲ್ಲಿ ಗುರುವಾರ ಓಟದ ಸ್ಪರ್ಧಿಗಳಿಗೆ ನೀಡುವ ಟೀ ಶರ್ಟ್‌, ಕಿರುಹೊತ್ತಿಗೆ ಹಾಗೂ ವಿಜೇತರಿಗೆ ನೀಡುವ ಪದಕಗಳನ್ನು ಅನಾವರಣಗೊಳಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮಹಾ ನಿರ್ದೇಶಕ (ಡಿಜಿ–ಐಜಿಪಿ) ಅಲೋಕ್ ಮೋಹನ್, ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಎಂಬ ಘೋಷವಾಕ್ಯದಡಿ ರಾಜ್ಯದ ಜನರ ಸುರಕ್ಷತೆಗಾಗಿ ಶ್ರಮಿಸುತ್ತಿರುವ ಪೊಲೀಸರಿಗೆ ಗೌರವ ಸೂಚಿಸಲು ಈ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ’ ಎಂದರು.

‘ಹಸಿರು ಬೆಂಗಳೂರು, ಡ್ರಗ್ಸ್ ಮುಕ್ತ ಕರ್ನಾಟಕ, ಸೈಬರ್ ಅಪರಾಧಗಳ ಬಗ್ಗೆ ಮತ್ತು ವೃದ್ಧರು ಕ್ರಿಯಾಶೀಲ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಕುರಿತು ಅರಿವು ಮೂಡಿಸಲಾಗುತ್ತದೆ. ಪ್ರತಿಯೊಬ್ಬ ಸ್ಪರ್ಧಿಗೂ ಟೀ ಶರ್ಟ್, ಪದಕ ನೀಡಲಾಗುವುದು’ ಎಂದು ತಿಳಿಸಿದರು.

ADVERTISEMENT

ಬೆಳಿಗ್ಗೆ 6.30ಕ್ಕೆ 5 ಕಿ.ಮೀ. ಹಾಗೂ 7.30ಕ್ಕೆ 10 ಕಿ.ಮೀ. ಓಟ ಆರಂಭವಾಗಲಿದೆ. ಎರಡೂ ಓಟಗಳು ವಿಧಾನಸೌಧದಿಂದ ಆರಂಭವಾಗಿ, ಕಬ್ಬನ್‌ ಪಾರ್ಕ್‌ನಲ್ಲಿ ಸಂಚರಿಸಲಿವೆ. 10 ಕಿ.ಮೀ. ಓಟದ ವಿಜೇತರಿಗೆ ಮೊದಲ ಬಹುಮಾನ ₹ 1 ಲಕ್ಷ ನಗದು, ಎರಡನೇ ಬಹುಮಾನ ₹ 50 ಸಾವಿರ ನಗದು ಹಾಗೂ ತೃತೀಯ ಬಹುಮಾನ ₹ 30 ಸಾವಿರ ನಗದು ಇದೆ. 5 ಕಿ.ಮೀ. ಓಟದ ವಿಜೇತರಿಗೆ ಪ್ರಥಮ ಬಹುಮಾನ ₹ 40 ಸಾವಿರ ನಗದು, ದ್ವಿತೀಯ ₹ 20 ಸಾವಿರ ನಗದು, ತೃತೀಯ ₹ 10 ಸಾವಿರ ನಗದು ಹಾಗೂ ನಾಲ್ಕನೇ ಬಹುಮಾನ ₹ 5 ಸಾವಿರ ನಗದು ಇದೆ. ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೂ ಪ್ರತ್ಯೇಕ ಬಹುಮಾನಗಳಿವೆ ಎಂದು ವಿವರ ನೀಡಿದರು.

ಮಣಿಪಾಲ್ ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿ ಸ್ಪರ್ಧಿಗಳ ಆರೋಗ್ಯ ತಪಾಸಣೆ ಮಾಡುವರು. ಸ್ಪರ್ಧೆಗೆ ಬಿಎಂಆರ್‌ಸಿಎಲ್ ಹಾಗೂ ಯವಜನಸೇವೆ ಇಲಾಖೆ ಸಹ ಕೈ ಜೋಡಿಸಿವೆ.

ಎಸ್‌ಬಿಐ ಬೆಂಗಳೂರು ವಲಯದ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ, ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಕೆಎಸ್‌ಆರ್‌ಪಿ ಎಡಿಜಿಪಿ ಉಮೇಶ್ ಕುಮಾರ್, ಸಂಚಾರ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಎಂ.ಎನ್.ಅನುಚೇತ್, ಎನ್‌ಇಬಿಯ ನಾಗರಾಜ ಅಡಿಗ, ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ್ ಹಾಜರಿದ್ದರು.

‘ಮಾರ್ಚ್‌ 4ರವರೆಗೂ ನೋಂದಣಿ’

‘ಪೊಲೀಸರು ಎಸ್‌ಬಿಐ ಸಿಬ್ಬಂದಿ ಹಾಗೂ ಸಾರ್ವಜನಿಕರ ವಿಭಾಗಗಳಲ್ಲಿ ಓಟ ಇರಲಿದೆ. 5 ಕಿ.ಮೀ ಹಾಗೂ 10 ಕಿ.ಮೀ. ಪ್ರತ್ಯೇಕ ಓಟವಿದ್ದು ಮೊದಲ ಎರಡನೇ ಹಾಗೂ ಮೂರನೇ ಸ್ಥಾನ ಪಡೆದವರಿಗೆ ನಗದು ಬಹುಮಾನ ಇದೆ. ಆಸಕ್ತರು ನೋಂದಣಿ (https://www.mysamay.in/public/event/info/d3d94823-4396-40d7-bd76-d553a5f50a60) ಮಾಡಿಕೊಳ್ಳಲು ಮಾರ್ಚ್‌ 4ರವರೆಗೆ ಅವಕಾಶವಿದೆ’ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.