ADVERTISEMENT

ಮೊಬೈಲ್‌ಗಾಗಿ ಜಗಳ; ಕಾರ್ಮಿಕನ ಕೊಲೆ

ಕೆ.ಆರ್‌. ಮಾರುಕಟ್ಟೆಯಲ್ಲಿ ಘಟನೆ lತಲೆಮರೆಸಿಕೊಂಡಿದ್ದ ಇಬ್ಬರು ಸ್ನೇಹಿತರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2019, 20:01 IST
Last Updated 13 ಸೆಪ್ಟೆಂಬರ್ 2019, 20:01 IST
   

ಬೆಂಗಳೂರು: ನಗರದ ಕೆ.ಆರ್‌.ಮಾರುಕಟ್ಟೆಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಮೆಹಬೂಬ್ ಎಂಬುವರನ್ನು ಕೊಲೆ ಮಾಡಲಾಗಿದ್ದು, ಆ ಸಂಬಂಧ ಸ್ನೇಹಿತರಾದ ಸದ್ದಾಂ, ರಿಜ್ವಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ತುಮಕೂರು ಜಿಲ್ಲೆಯ ಮೆಹಬೂಬ್, ಕಳೆದ ವರ್ಷವಷ್ಟೇ ನಗರಕ್ಕೆ ಬಂದಿದ್ದು, ಮಾರುಕಟ್ಟೆಯಲ್ಲಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ತಿಂಗಳ ಹಿಂದಷ್ಟೇ ಅವರಿಗೆ, ಆಟೊ ಚಾಲಕ ಕೆ.ಜಿ.ಹಳ್ಳಿಯ ಸದ್ದಾಂ ಹಾಗೂ ಕಾರ್ಮಿಕ ರಿಜ್ವಾನ್‌ನ ಪರಿಚಯವಾಗಿತ್ತು.

‘ಆರೋಪಿ ಸದ್ದಾಂ, ತನ್ನ ಮೊಬೈಲ್‌ ಅನ್ನು ಮೆಹಬೂಬ್‌ಗೆ ಕೊಟ್ಟಿದ್ದ. ವಾಪಸ್ ಪಡೆಯಲು ಸ್ನೇಹಿತ ರಿಜ್ವಾನ್ ಜೊತೆ ಗುರುವಾರ ಮಧ್ಯಾಹ್ನ ಮಾರುಕಟ್ಟೆಗೆ ಬಂದಿದ್ದ’ ಎಂದು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಹೇಳಿದರು.

ADVERTISEMENT

‘ಮೊಬೈಲ್ ವಾಪಸ್ ಕೊಡಲು ಮೆಹಬೂಬ್ ನಿರಾಕರಿಸಿದ್ದರು. ಅದನ್ನು ಪ್ರಶ್ನಿಸಿದ್ದ ಸದ್ದಾಂ, ಜಗಳ ತೆಗೆದಿದ್ದ. ಜಗಳ ವಿಕೋಪಕ್ಕೆ ಹೋಗಿ ಸದ್ದಾಂ, ಚಾಕುವಿನಿಂದ ಮೆಹಬೂಬ್ ಅವರ ಎದೆಗೆ ಇರಿದಿದ್ದ. ನಂತರ, ಆರೋಪಿಗಳು ಪರಾರಿಯಾಗಿದ್ದರು.’

‘ಕುಸಿದು ಬಿದ್ದಿದ್ದ ಮೆಹಬೂಬ್‌ನನ್ನು ಸ್ಥಳೀಯರ ನೆರವಿನಲ್ಲಿ ಪೊಲೀಸರು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಮೆಹಬೂಬ್ ಅಸುನೀಗಿದರು’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಮೆಹಬೂಬ್ ಹೇಳಿಕೆ ಆಧರಿಸಿ ಎಫ್‌ಐಆರ್‌ ದಾಖಲಿಸಿಕೊಳ್ಳಲಾಯಿತು. ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಲಾಯಿತು ’ ಎಂದು ಹೇಳಿದರು.

ಗಣೇಶ ಹಬ್ಬದ ಗಲಾಟೆ; ಉದ್ಯಮಿ ಕೊಲೆ

ಬೆಂಗಳೂರು: ಗಣೇಶನ ಮೂರ್ತಿ ಪ್ರತಿಷ್ಠಾಪನೆ ವಿಚಾರವಾಗಿ ಎರಡು ಗುಂಪಿನ ನಡುವೆ ಗಲಾಟೆ ನಡೆದಿದ್ದು, ಅದೇ ದ್ವೇಷದಲ್ಲಿ ಉದ್ಯಮಿ ಲಕ್ಷ್ಮಿಪತಿ (40) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಮಹದೇವಪುರ ಬಳಿಯ ಅಂಬೇಡ್ಕರ್ ನಗರದ ನಿವಾಸಿ ಲಕ್ಷ್ಮಿಪತಿ, ಸಣ್ಣ ಪ್ರಮಾಣದ ಉದ್ಯಮ ನಡೆಸುತ್ತಿದ್ದರು. ಕಾರ್ಖಾನೆ ಇದ್ದ ಸ್ಥಳದಲ್ಲೇ ಶುಕ್ರವಾರ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿ ಕೃತ್ಯ ಎಸಗಿದ್ದಾರೆ.

‘ಅಂಬೇಡ್ಕರ್ ನಗರದಲ್ಲಿ ಪ್ರತಿ ವರ್ಷ ಒಂದೇ ಕಡೆ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಅದರ ಉಸ್ತುವಾರಿ ತಂಡದಲ್ಲಿ ಲಕ್ಷ್ಮಿಪತಿ ಇದ್ದರು. ಈ ವರ್ಷ ಸ್ಥಳೀಯ ನಿವಾಸಿ ಮುರಳಿ ಹಾಗೂ ಆತನ ಕಡೆಯವರು, ಪ್ರತ್ಯೇಕವಾಗಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.

‘ಗುರುವಾರ ರಾತ್ರಿ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಲಕ್ಷ್ಮಿಪತಿ ಜೊತೆ ಆರೋಪಿ ಮುರಳಿ ಹಾಗೂ ಆತನ ಸಹೋದರ ಮಂಜುನಾಥ್ ಜಗಳ ತೆಗೆದಿದ್ದರು. ಜೀವ ಬೆದರಿಕೆ ಸಹ ಹಾಕಿದ್ದರು. ಮಧ್ಯಪ್ರವೇಶಿಸಿದ್ದ ಸ್ಥಳೀಯರು, ಜಗಳ ಬಿಡಿಸಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ರಾತ್ರಿ ನಡೆದಿದ್ದ ಜಗಳದಿಂದ ದ್ವೇಷ ಸಾಧಿಸುತ್ತಿದ್ದ ಮುರಳಿ ಹಾಗೂ ಆತನ ಸಹಚರರು, ಶುಕ್ರವಾರ ಕಾರ್ಖಾನೆಗೆ ನುಗ್ಗಿ ಲಕ್ಷ್ಮಿಪತಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಸ್ಥಳೀಯರು ರಕ್ಷಣೆಗೆ ಬರುವಷ್ಟರಲ್ಲೇ ಆರೋಪಿಗಳು ಓಡಿಹೋದರು. ಸ್ಥಳೀಯರೇ ಲಕ್ಷ್ಮಿಪತಿ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಅವರು ಅಸುನೀಗಿದರು. ಈ ಬಗ್ಗೆ ಪ್ರತ್ಯಕ್ಷದರ್ಶಿಯ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ವಿವರಿಸಿದರು

ಎಎಸ್‌ಐ ಕಪಾಳಕ್ಕೆ ಹೊಡೆದ ಉದ್ಯಮಿ

ಬೆಂಗಳೂರು: ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಕಾರನ್ನು ರಸ್ತೆ ಬದಿ ನಿಲ್ಲಿಸುವಂತೆ ಹೇಳಲು ಹೋಗಿದ್ದ ಜೀವನ್‌ಬಿಮಾ ನಗರ ಸಂಚಾರ ಠಾಣೆಯ ಎಎಸ್‌ಐ ಸಿ.ಶಿವಪ್ಪ ಎಂಬುವರ ಮೇಲೆ ಹಲ್ಲೆ ಮಾಡಲಾಗಿದೆ. ಆ ಸಂಬಂಧ ಉದ್ಯಮಿ ಕೇಶವ್ ಗುಪ್ತ ಹಾಗೂ ಆತನ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

‘ಜೀವನ್‌ಬಿಮಾ ನಗರ ಸಂಚಾರ ಠಾಣೆ ಎದುರಿನ ರಸ್ತೆಯಲ್ಲಿ ಇದೇ 10ರಂದು ನಡೆದಿರುವ ಘಟನೆ ಬಗ್ಗೆ ಎಎಸ್‌ಐ ದೂರು ನೀಡಿದ್ದಾರೆ.ಅಪರಾಧ ಸಂಚು (ಐಪಿಸಿ 34), ಉದ್ದೇಶಪೂರ್ವಕವಾಗಿ ಶಾಂತಿ ಕದಡುವುದು (ಐಪಿಸಿ 504), ಕರ್ತವ್ಯಕ್ಕೆ ಅಡ್ಡಿ (ಐಪಿಸಿ 353) ಆರೋಪದಡಿ ಮಗ–ತಾಯಿ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಕಾರಿನಲ್ಲಿ ಹೊರಟಿದ್ದ ಆರೋಪಿ
ಗಳು, ಎದುರಿಗೆ ಹೊರಟಿದ್ದ ಇನ್ನೊಂದು ಕಾರಿಗೆ ಗುದ್ದಿಸಿದ್ದರು. ಆ ಕಾರಿನ ಚಾಲಕ, ಕೆಳಗೆ ಇಳಿದು ಆರೋಪಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ರಸ್ತೆಯಲ್ಲಿ ಜಗಳ ಶುರುವಾಗಿತ್ತು. ಎರಡೂ ಕಾರುಗಳು ರಸ್ತೆಯಲ್ಲೇ ನಿಂತಿದ್ದರಿಂದ ದಟ್ಟಣೆ ಉಂಟಾಗಿ ಇತರೆ ವಾಹನಗಳ ಸಂಚಾರಕ್ಕೆ ತೊಂದರೆಯಾಗಿತ್ತು’

‘ಸ್ಥಳಕ್ಕೆ ಹೋಗಿದ್ದ ಎಎಸ್‌ಐ ಶಿವಪ್ಪ ಅವರು ಎರಡೂ ಕಾರುಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸುವಂತೆ ಚಾಲಕರಿಗೆ ಹೇಳಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಕೇಶವ್, ಶಿವಪ್ಪ ಅವರ ಸಮವಸ್ತ್ರ ಹಾಗೂ ಕುತ್ತಿಗೆ ಹಿಡಿದು ಎಳೆದಾಡಿ ಕಪಾಳಕ್ಕೆ ಹೊಡೆದಿದ್ದ. ಆತನ ತಾಯಿ ಸಹ ಹಲ್ಲೆ ನಡೆಸಲು ಮುಂದಾಗಿದ್ದರು. ಶಿವಪ್ಪ ಅವರನ್ನು ರಕ್ಷಿಸಿದ್ದ ಸ್ಥಳೀಯರು ಹಾಗೂ ಮಹಿಳಾ ಕಾನ್‌ಸ್ಟೆಬಲ್‌ಗಳು, ಮಗ– ತಾಯಿಯನ್ನು ಹಿಡಿದು ಠಾಣೆಗೆ ಒಪ್ಪಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

‘ರಾಜಸ್ಥಾನದ ಕೇಶವ್‌, ನಗರದಲ್ಲಿ ಉದ್ಯಮ ನಡೆಸುತ್ತಿದ್ದಾರೆ ಎಂದು ಗೊತ್ತಾಗಿದೆ. ಠಾಣೆಗೆ ಕರೆತಂದಾಗ ಮಹಿಳಾ ಸಿಬ್ಬಂದಿ ಜೊತೆಯೂ ಆತ ಅಸಭ್ಯವಾಗಿ ನಡೆದುಕೊಂಡಿದ್ದಾರೆ’ ಎಂದು ಹೇಳಿದರು.

ದಂಪತಿ ಜಗಳ ಬಿಡಿಸಲು ಹೋಗಿದ್ದ ಮಹಿಳೆ ಕೊಲೆ

ಬೆಂಗಳೂರು: ಗಂಡ– ಹೆಂಡತಿ ನಡುವೆ ನಡೆಯುತ್ತಿದ್ದ ಜಗಳ ಬಿಡಿಸಲು ಹೋಗಿದ್ದ ಲಲಿತಮ್ಮ (50) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆ ಸಂಬಂಧ ಜೆ.ಜೆ. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಹಳೇಗುಡ್ಡದ ಹಳ್ಳಿಯ ಜನತಾ ಕಾಲೊನಿ ನಿವಾಸಿ ಲಲಿತಮ್ಮ, ಮನೆಯಲ್ಲಿ ಒಬ್ಬರೇ ವಾಸವಿದ್ದರು. ಅವರ ಕೊಲೆ ಸಂಬಂಧ ಸ್ಥಳೀಯ ನಿವಾಸಿ ಮಂಜುನಾಥ್‌ ಎಂಬವನನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಆರೋಪಿ ಮಂಜುನಾಥ್ ಹಾಗೂ ಆತನ ಪತ್ನಿ ಸುನಂದಾ, ಗುರುವಾರ ರಾತ್ರಿ 11.30ರ ಸುಮಾರಿಗೆ ಜೋರಾಗಿ ಕೂಗಾಡುತ್ತ ಜಗಳ ಮಾಡುತ್ತಿದ್ದರು. ಲಲಿತಮ್ಮ, ದಂಪತಿ ಮನೆಗೆ ಹೋಗಿ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದರು. ‘ಜಗಳದಿಂದ ಅಕ್ಕ–ಪಕ್ಕದವರಿಗೆ ತೊಂದರೆ ಆಗುತ್ತಿದೆ’ ಎಂದಿದ್ದರು.

‘ಕೋಪಗೊಂಡಿದ್ದ ಪತಿ ಮಂಜುನಾಥ್, ‘ನಿನ್ನಿಂದಲೇ ಅಕ್ಕ–ಪಕ್ಕದ ಮನೆಯವರು ಬೈಯುವಂತಾಯಿತು’ ಎಂದು ಪತ್ನಿಗೆ ಮತ್ತಷ್ಟು ಬೈಯಲಾರಂಭಿಸಿದ್ದ. ಅದೇ ವೇಳೆ ಕಲ್ಲನ್ನು ಪತ್ನಿ ಇರುವ ಕಡೆ ಎಸೆದಿದ್ದ. ಕಲ್ಲು ಗುರಿ ತಪ್ಪಿ ಲಲಿತಮ್ಮ ಅವರ ತಲೆಗೆ ಬಡಿದಿತ್ತು’ ಎಂದು ಪೊಲೀಸರು ಹೇಳಿದರು.

‘ಸ್ಥಳದಲ್ಲೇ ಕುಸಿದು ಬಿದ್ದಿದ್ದ ಲಲಿತಮ್ಮ ತಲೆಯಿಂದ ರಕ್ತ ಸೋರಲು ಆರಂಭಿಸಿತ್ತು. ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಮಾರ್ಗಮಧ್ಯೆಯೇ ಸತ್ತಿದ್ದಾರೆ ಎಂದು ವೈದ್ಯರು ತಿಳಿಸಿದರು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.