ಬೆಂಗಳೂರು: ವ್ಯಕ್ತಿಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೃತ್ಯ ನಡೆದ 14 ವರ್ಷಗಳ ಬಳಿಕ ಬಂಧಿಸಲು ಆರ್.ಟಿ. ನಗರ ಠಾಣೆಯ ಪೊಲೀಸರು ಯಶಸ್ವಿ ಆಗಿದ್ದಾರೆ.
ಆರ್.ಜಾನ್(34) ಬಂಧಿತ ಆರೋಪಿ.
ಚೇತನ್ ಕುಮಾರ್ ಎಂಬಾತನನ್ನು ಕೊಲೆ ಮಾಡಿದ್ದ ಆರೋಪಿ, ಪೊಲೀಸರ ಕೈಗೆ ಸಿಗದೇ ತಲೆಮರೆಸಿಕೊಂಡಿದ್ದ. ವಿಶೇಷ ತಂಡ ರಚಿಸಿ ಹುಡುಕಾಟ ನಡೆಸಿದ್ದರೂ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ.
2011ರ ಆಗಸ್ಟ್ 22ರಂದು ಆರ್.ಟಿ. ನಗರದಲ್ಲಿ ಚೇತನ್ ಕುಮಾರ್ ಎಂಬಾತನನ್ನು ಜಾನ್ ಸೇರಿದಂತೆ ನಾಲ್ವರು ಆರೋಪಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಪ್ರಕರಣದ ಸಂಬಂಧ ಇಬ್ಬರನ್ನು ಬಂಧಿಸಲಾಗಿತ್ತು. ಪ್ರಮುಖ ಆರೋಪಿಗಳಾದ ಜಾನ್ ಹಾಗೂ ರಾಜ ತಲೆಮರೆಸಿಕೊಂಡಿದ್ದರು. ಜಾನ್ ಮೊಬೈಲ್ ಬಳಸುತ್ತಿರಲಿಲ್ಲ. ಇದರಿಂದ ಆರೋಪಿಯ ಪತ್ತೆ ಸಾಧ್ಯವಾಗಿರಲಿಲ್ಲ. ಈ ಮಧ್ಯೆ ಇಬ್ಬರ ವಿರುದ್ಧ ತನಿಖೆ ನಡೆಸಿದ್ದ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಚೇತನ್ ಮತ್ತು ಜಾನ್ ನಡುವೆ ಬಾರ್‌ನಲ್ಲಿ ಗಲಾಟೆ ನಡೆದಿತ್ತು. ಜಾನ್, ಮಣಿಕಂಠ, ಅರುಣ್ ಕುಮಾರ್ ಮತ್ತು ರಾಜ ಅಲಿಯಾಸ್ ಚಾಟಿ ರಾಜ ಸೇರಿಕೊಂಡು ಚೇತನ್‌ನನ್ನು ಕೊಲೆ ಮಾಡಿದ್ದರು. ಮಣಿಕಂಠ ಹಾಗೂ ಅರುಣ್‌ಕುಮಾರ್ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಅರುಣ್ ಕುಮಾರ್ ಅನಾರೋಗ್ಯದಿಂದ ಮೃತಪಟ್ಟಿದ್ದರೆ, ಮಣಿಕಂಠ ವಿಚಾರಣೆ ಎದುರಿಸುತ್ತಿದ್ದಾನೆ.
ಜಾನ್, ಯಲಹಂಕದ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ. ಆರೋಪಿಯ ತಂದೆ– ತಾಯಿ ವೈಯಾಲಿಕಾವಲ್‌ನಲ್ಲಿ ನೆಲಸಿದ್ದರು. ಜಾನ್ ಆಗಾಗ ಪೋಷಕರನ್ನು ಭೇಟಿ ಮಾಡುತ್ತಿದ್ದ. ಆರೋಪಿ ತನ್ನ ತಂದೆಯ ಆಧಾರ್ ಕಾರ್ಡ್‌ನ ಪ್ರತಿಯನ್ನು ಕೆಲಸಕ್ಕೆ ಸೇರುವಾಗ ಹೋಟೆಲ್ ಮಾಲೀಕರಿಗೆ ನೀಡಿದ್ದ. ಆ ಆಧಾರ್ ಕಾರ್ಡ್ ಆರೋಪಿಯನ್ನು ಗುರುತಿಸಲು ಸಹಾಯ ಮಾಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಕಳೆದ ವರ್ಷ ಹೊಸಕೋಟೆ ಬಳಿ ರಾಜನನ್ನು ಪತ್ತೆ ಹಚ್ಚಿ ಪೊಲೀಸರು ಬಂಧಿಸಿದ್ದರು. ವಿಚಾರಣೆಯ ವೇಳೆ ಆತ, ‘ನಾನು ಹಾಗೂ ಜಾನ್ ತಿರುಪತಿಯ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದೆವು. ಜಾನ್ ಅವರ ಪೋಷಕರು ವೈಯಾಲಿಕಾವಲ್‌ನಲ್ಲಿ ವಾಸಿಸುತ್ತಿದ್ದಾರೆ’ ಎಂದು ಸುಳಿವು ನೀಡಿದ್ದ. ಆ ಸುಳಿವು ಆಧರಿಸಿ ಹುಡುಕಾಟ ನಡೆಸಿದಾಗ ಆರೋಪಿ ಸಿಕ್ಕಿ ಬಿದ್ದ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.