ಬೆಂಗಳೂರು: ಕೊಲೆ ಮತ್ತು ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಪ್ರಮುಖ ಆರೋಪಿಗಳನ್ನು ಕಾಲಿಗೆ ಗುಂಡು ಹೊಡೆದು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ರಿಜ್ವಾನ್ ಮತ್ತು ಪರ್ವೇಜ್ ಅಹ್ಮದ್ ಕಾಲಿಗೆ ಗುಂಡೇಟು ತಗಲಿದವರು. ಇದೇ ಪ್ರಕರಣದಲ್ಲಿ ಮೊಹ್ಮದ್ ತಂಜೀಲ್ (25), ಮೊಹ್ಮದ್ ಸಫಾನ್ (25), ಸಯ್ಯದ್ ಅಲಿ (25), ಯಾಸೀನ್ ಖಾನ್ (29) ಮತ್ತು ಶಾಹೀದ್ (29) ಎಂಬುವರನ್ನೂ ಬಂಧಿಸಲಾಗಿದೆ.
ಪುಲಕೇಶಿನಗರ ಠಾಣಾ ವ್ಯಾಪ್ತಿಯಲ್ಲಿ ಜ. 16ರಂದು ಅಬು ಸೂಫಿಯಾನ್ (27) ಎಂಬುವರ ಮೇಲೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಮೊಹ್ಮದ್ ತಂಜೀಲ್ ಎಂಬಾತನನ್ನು ಬಂಧಿಸಿ, ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ, ಶಿವಾಜಿನಗರದ ಬಂಡಿಮಠದ ಬಳಿಯಿಂದ ಸ್ಥಳೀಯ ನಿವಾಸಿ ಅಬ್ದುಲ್ ಮತೀನ್ ಎಂಬಾತನನ್ನು ಸ್ಯಾಂಟ್ರೊ ಕಾರಿನಲ್ಲಿ ಅಪಹರಿಸಿ ಬಾಗಲೂರು– ಹೆಣ್ಣೂರು ಮುಖ್ಯರಸ್ತೆಯ ನಿರ್ಜನ ಪ್ರದೇಶದಲ್ಲಿ ಬರ್ಬರವಾಗಿ ಕೊಲೆ ಮಾಡಿದ್ದ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು.
ಆರೋಪಿಗಳ ಬಗ್ಗೆಯೂ ತಂಜೀಲ್ ಬಾಯಿಬಿಟ್ಟಿದ್ದ. ಆರೋಪಿಗಳ ಪತ್ತೆಗೆ ಶಿವಾಜಿನಗರ ಮತ್ತು ಭಾರತೀನಗರ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ಮೊಹ್ಮದ್ ರಿಜ್ವಾನ್ ಮತ್ತು ಪರ್ವೇಜ್ ಅಹ್ಮದ್ ಅವರು ನೋಂದಣಿ ಸಂಖ್ಯೆ ಇಲ್ಲದ ದ್ವಿಚಕ್ರ ವಾಹನದಲ್ಲಿ ಕಲಪಲ್ಲಿ ಸ್ಮಶಾನ ರಸ್ತೆಯಲ್ಲಿ ಹೋಗುತ್ತಿರುವ ಮಾಹಿತಿ ಸಿಕ್ಕಿತ್ತು. ಬಂಧನಕ್ಕೆ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ, ಪೊಲೀಸರ ಮೇಲೆ ಆರೋಪಿಗಳು ಹಲ್ಲೆ ನಡೆಸಲು ಯತ್ನಿಸಿದ್ದರು. ಆತ್ಮರಕ್ಷಣೆಗಾಗಿ ಭಾರತೀನಗರ ಇನ್‌ಸ್ಪೆಕ್ಟರ್ ಅವರು ಇಬ್ಬರ ಕಾಲಿಗೂ ಗುಂಡು ಹೊಡೆದಿದ್ದರು.
ಅತ್ತಿಗೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಕಾರಣಕ್ಕೆ ಅಬ್ದುಲ್ ಮತೀನ್‌ನನ್ನು ಕೊಲೆ ಮಾಡಿರುವುದಾಗಿ ಮೊಹ್ಮದ್ ರಿಜ್ವಾನ್ ತಪ್ಪೊಪ್ಪಿಕೊಂಡಿದ್ದಾನೆ. ಅಬೂ ಸೂಫಿಯಾನ್ ತನ್ನ ತಂಗಿಯನ್ನು (ಮೊಹ್ಮದ್ ರಿಜ್ವಾನ್ ಅತ್ತಿಗೆ) ಅಬುಲ್ ಮತೀನ್ ಜೊತೆ ಮದುವೆ ಮಾಡಿಸಲು ಸಹಕರಿಸಿದ್ದ. ಈ ಹಿನ್ನೆಲೆಯಲ್ಲಿ ದ್ವೇಷ ಸಾಧಿಸುವ ಉದ್ದೇಶದಿಂದ ಇತರ ಆರೋಪಿಗಳ ಜೊತೆ ಸೇರಿ ರಿಜ್ವಾನ್, ಅಬ್ದುಲ್ ಮತೀನ್‌ನನ್ನು ಅಪಹರಿಸಿ ಕೊಲೆ ಮಾಡಿದ್ದಾನೆ. ಅಬೂ ಸೂಫಿಯಾನ್‌ನನ್ನೂ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿರುವುದು ತನಿಖೆಯಿಂದ ಬಯಲಾಗಿದೆ ಎಂದು ಪೊಲೀಸರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.