ಬೆಂಗಳೂರು: ಕೋರಮಂಗಲದ ವಿ.ಆರ್.ಬಡಾವಣೆಯ ಭಾರ್ಗವಿ ಮಹಿಳಾ ಪೇಯಿಂಗ್ ಗೆಸ್ಟ್‌ಗೆ (ಪಿ.ಜಿ) ನುಗ್ಗಿದ ವ್ಯಕ್ತಿಯೊಬ್ಬ ಯುವತಿಯೊಬ್ಬರ ಕತ್ತು ಸೀಳಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಹಾರದ ಕೃತಿ ಕುಮಾರಿ(24) ಅವರನ್ನು ಮಂಗಳವಾರ ರಾತ್ರಿ 11.30ರ ಸುಮಾರಿಗೆ ಕೊಲೆ ಮಾಡಲಾಗಿದೆ.
ಚಾಕು ಹಿಡಿದು ಪಿ.ಜಿಯೊಳಗೆ ನುಗ್ಗಿದ್ದ ಆರೋಪಿ, ಮೂರನೇ ಮಹಡಿಯಲ್ಲಿನ ಕೊಠಡಿ ಸಮೀಪದಲ್ಲೇ ಯುವತಿಯ ಕತ್ತು ಸೀಳಿ ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿ ಪತ್ತೆಗೆ ಶೋಧ ಮುಂದುವರೆಸಿದ್ದಾರೆ. ಆರೋಪಿಯ ಸುಳಿವು ಲಭಿಸಿದ್ದು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದರು.
ಸ್ನೇಹಿತೆಯ ಪಿಯಕರನಿಂದ ಕೃತ್ಯ?:
‘ಕೃತಿ ಕುಮಾರಿಯ ಸ್ನೇಹಿತೆಯ ಪ್ರಿಯಕರನೇ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ಕೃತಿ ಕುಮಾರಿ ನಾಲ್ಕು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಿದ್ದರು. ನಗರದ ಕಾಲೇಜೊಂದರಲ್ಲಿ ಎಂಬಿಎ ಪದವಿ ಪೂರೈಸಿದ್ದ ಅವರು ಕೆಲವು ತಿಂಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಧ್ಯಪ್ರದೇಶದ ಯುವತಿಯ ಪರಿಚಯವಾಗಿತ್ತು. ಬಳಿಕ, ಇಬ್ಬರೂ ಕೆಲವು ದಿನಗಳ ಹಿಂದಷ್ಟೇ ವಿ.ಆರ್.ಲೇಔಟ್‌ನ ಪಿ.ಜಿಗೆ ಬಂದು ನೆಲೆಸಿದ್ದರು. ಇದೇ ಪಿ.ಜಿಯಿಂದ ಕೆಲಸಕ್ಕೆ ಹೋಗುತ್ತಿದ್ದರು’ ಎಂದು ಪೊಲೀಸರು ಹೇಳಿದರು.
‘ಸ್ನೇಹಿತೆಯ ಪ್ರಿಯಕರ ಒಮ್ಮೆ ಪಿ.ಜಿ ಬಳಿಗೆ ಬಂದಿದ್ದ. ಆಗ ಸೆಕ್ಯೂರಿಟಿ ಗಾರ್ಡ್, ‘ಇದು ಮಹಿಳಾ ಪಿ.ಜಿ ಪುರುಷರಿಗೆ ಪ್ರವೇಶ ಇಲ್ಲ’ ಎಂದು ತಡೆಯೊಡಿದ್ದರು. ಆಗ ಆತನ ಪ್ರೇಯಸಿಯೇ, ‘ಆತ ಪರಿಚಯಸ್ಥನಾಗಿದ್ದು ಲಗೇಜ್ ಒಳಗಡೆ ಇಟ್ಟು ಹೋಗುತ್ತಾನೆ’ ಎಂದು ಮನವಿ ಮಾಡಿಕೊಂಡಿದ್ದರು. ಈ ದೃಶ್ಯಗಳು ಪಿ.ಜಿಯಲ್ಲಿರುವ ಸಿಸಿ ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ’ ಎಂದು ಪೊಲೀಸರು ಹೇಳಿದರು.
ಕೃತಿ ಕುಮಾರಿ
ಸ್ನೇಹಿತೆಗೆ ಸಲಹೆ ನೀಡಿದ್ದ ಕೃತಿ
‘ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ ಹಾಗೂ ಆತನ ಪ್ರೇಯಸಿ ಮದುವೆ ಆಗಲು ನಿರ್ಧರಿಸಿದ್ದರು. ಆರೋಪಿ ನಿರುದ್ಯೋಗಿಯಾಗಿದ್ದು, ಪ್ರೇಯಸಿಯಿಂದಲೇ ಹಣ ಪಡೆಯುತ್ತಿದ್ದ. ಇಬ್ಬರ ಮಧ್ಯೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಇದನ್ನು ಕೃತಿ ಕುಮಾರಿ ಅವರು ಗಮನಿಸಿದ್ದರು. ಅಸಭ್ಯ ವರ್ತನೆ ತೋರುವ ಯುವಕನನ್ನು ಮದುವೆ ಆಗದಂತೆ ಕೃತಿ ಅವರು ಸಲಹೆ ನೀಡಿದ್ದರು. ತಮ್ಮ ಮದುವೆಗೆ ಕೃತಿ ಅಡ್ಡ ಬರುತ್ತಿದ್ದಾರೆ ಎಂದು ಭಾವಿಸಿದ್ದ ಆರೋಪಿ ಕೊಲೆ ಮಾಡಲು ನಿರ್ಧರಿಸಿದ್ದ ಎಂಬುದು ಗೊತ್ತಾಗಿದೆ’ ಎಂದು ಪೊಲೀಸರು ತಿಳಿಸಿದರು.
ಮಂಗಳವಾರ ರಾತ್ರಿ ಪಾಳಿಯಲ್ಲಿದ್ದ ಮಹಿಳಾ ಸೆಕ್ಯೂರಿಟಿ ಗಾರ್ಡ್, ತಡರಾತ್ರಿ 11ರ ಸುಮಾರಿಗೆ ಊಟಕ್ಕೆಂದು ಪಿ.ಜಿಯ ಎರಡನೇ ಮಹಡಿಯಲ್ಲಿರುವ ಅಡುಗೆ ಕೋಣೆಗೆ ಹೋಗಿದ್ದರು. ಅದೇ ಸಮಯಕ್ಕೆ ಕಾಯುತ್ತಿದ್ದ ಆರೋಪಿ, ಪಿ.ಜಿಗೆ ನುಗ್ಗಿದ್ದಾನೆ. ನಂತರ ಕೃತಿ ಕೊಠಡಿಗೂ ಹೋಗಿ ಏಕಾಏಕಿ ಆಕೆಯ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ಕೃತ್ಯ ನಡೆದ ವೇಳೆ ಆರೋಪಿಯ ಪ್ರೇಯಸಿ ಪಿ.ಜಿಯಲ್ಲಿ ಇರಲಿಲ್ಲ. ಮಧ್ಯಪ್ರದೇಶದ ಯುವತಿಯ ಮೊಬೈಲ್ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಘಟನಾ ಸ್ಥಳಕ್ಕೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲಿಸಿದರು.
‘ಪಿ.ಜಿಯಲ್ಲಿ ಭದ್ರತಾ ನಿರ್ಲಕ್ಷ್ಯ’
ಸೂಕ್ತ ಭದ್ರತಾ ವ್ಯವಸ್ಥೆಯಿಲ್ಲದ ಕಾರಣ ಆರೋಪಿ ಸುಲಭವಾಗಿ ಕೃತ್ಯ ಎಸಗಿ ಪರಾರಿಯಾಗಿದ್ದಾನೆ. ಪಿಜಿ ಮಾಲೀಕರಿಂದಲೂ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಎರಡು ವಿಶೇಷ ತಂಡ ರಚನೆ: ಮಂಗಳವಾರ ರಾತ್ರಿ ಕೃತ್ಯ ನಡೆದ ಮಾಹಿತಿ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕೊಲೆಯಾದ ಯುವತಿ ಬಿಹಾರ ರಾಜ್ಯದವರು ಎಂದು ಗೊತ್ತಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು ಪತ್ತೆಗೆ ಪೊಲೀಸರ ಎರಡು ತಂಡ ರಚಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ಕಮಿಷನರ್ ರಮಣ್ ಗುಪ್ತಾ ತಿಳಿಸಿದರು. ‘ಎಲ್ಲಾ ಆಯಾಮದಲ್ಲೂ ತನಿಖೆ ನಡೆಸಲಾಗುವುದು. ಆರೋಪಿ ಬಂಧನ ಬಳಿಕವಷ್ಟೇ ನಿಖರ ಕಾರಣ ತಿಳಿಯಲಿದೆ’ ಎಂದು ಅವರು ಹೇಳಿದರು.
ಪಿ.ಜಿಗಳಲ್ಲಿ ಎಲ್ಲ ರೀತಿಯ ಭದ್ರತಾ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಸೂಚನೆ ನೀಡಲಾಗಿತ್ತು. ಅದರ ಪಾಲನೆ ಆಗಿದೆಯೇ ಎಲ್ಲವೇ ಎಂಬುದನ್ನೂ ಪರಿಶೀಲಿಸಲು ಸಿಬ್ಬಂದಿಗೆ ಸೂಚಿಸಲಾಗಿದೆ–ರಮಣ್‌ಗುಪ್ತಾ ಹೆಚ್ಚುವರಿ ಪೊಲೀಸ್ ಕಮಿಷನರ್ ಪೂರ್ವ ವಿಭಾಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.