‘ಬಿಟಿಪಿ ರೋಡ್ ಮಾಸ್ಟರ್’ ಕುರಿತು ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ವಿವರಣೆ ನೀಡಿದರು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬೆಂಗಳೂರು: ಸಂಚಾರ ಪೊಲೀಸ್ ವ್ಯವಸ್ಥೆ ರೂಪುಗೊಂಡಿದ್ದು ಹೇಗೆ? ಆರಂಭಿಕ ದಿನಗಳಲ್ಲಿ ಸಂಚಾರ ಪೊಲೀಸರು ಹೇಗೆ ಕಾರ್ಯ ನಿರ್ವಹಿಸುತ್ತಿದ್ದರು? ಹಿಂದೆ ಪೊಲೀಸ್ ಸಮವಸ್ತ್ರಗಳು ಹೇಗಿದ್ದವು? ಹಿಂದೆ ಜಂಕ್ಷನ್‌ಗಳು, ಟ್ರಾಫಿಕ್ ಸಿಗ್ನಲ್‌ಗಳು ಹೇಗೆ ಕಾರ್ಯ ನಿರ್ವಹಣೆ ಮಾಡುತ್ತಿದ್ದವು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವೇ...?
– ಹಾಗಿದ್ದರೆ ನೀವು, ನಗರದ ಇನ್‌ಫೆಂಟ್ರಿ ರಸ್ತೆಯ ಸಂಚಾರ ನಿರ್ವಹಣೆ ಕೇಂದ್ರದ ಮೊದಲ ಮಹಡಿಯಲ್ಲಿ ಸ್ಥಾಪಿಸಲಾಗಿರುವ ‘ಸಂಚಾರ ಪೊಲೀಸ್ ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರ’ಕ್ಕೆ ಭೇಟಿ ನೀಡಬೇಕು.
ಕೇಂದ್ರವು ಸಂಚಾರ ಪೊಲೀಸ್ ವ್ಯವಸ್ಥೆಯ ವಿಕಸನ, ತಂತ್ರಜ್ಞಾನ ಬಳಕೆ, ಸಂಚಾರ ಪೊಲೀಸರ ಸಾಹಸಗಾಥೆ ಕುರಿತು ಭರಪೂರ ಮಾಹಿತಿ ಒದಗಿಸುತ್ತಿದೆ. ನೋಡುಗರನ್ನು ಕೇಂದ್ರವು ಶತಮಾನದ ಹಿಂದಕ್ಕೆ ಕೊಂಡೊಯ್ಯುತ್ತದೆ. ನಗರದ ಅಭಿವೃದ್ಧಿ, ತಂತ್ರಜ್ಞಾನದಲ್ಲಿ ಆಗಿರುವ ಬದಲಾವಣೆ, ಪೊಲೀಸರ ಕಾರ್ಯನಿರ್ವಹಣೆ, ಹೆಮ್ಮೆಯ ನಗರಿಯನ್ನಾಗಿ ರಾಜಧಾನಿಯನ್ನು ರೂಪಿಸಲು ಪೊಲೀಸರು ವಹಿಸುತ್ತಿರುವ ಪಾತ್ರದ ಕುರಿತು ಈ ಕೇಂದ್ರವು ಗಮನ ಸೆಳೆಯುತ್ತಿದೆ.
ಸಂಚಾರ ಪೊಲೀಸರ ಇತಿಹಾಸ, ಅವರ ಕೆಲಸಗಳ ಕುರಿತು ಬೆಳಕು ಚೆಲ್ಲುತ್ತಿರುವ ದೇಶದ ಮೊದಲ ವಸ್ತು ಸಂಗ್ರಹಾಲಯ ಇದಾಗಿದೆ ಎಂದು ಪೊಲೀಸರು ಹೆಮ್ಮೆಯಿಂದ ನುಡಿಯುತ್ತಾರೆ.
1908ಕ್ಕೂ ಹಿಂದೆ ಸಂಚಾರ ವ್ಯವಸ್ಥೆ ನಿರ್ವಹಣೆ ಮಾಡುತ್ತಿರಲಿಲ್ಲ. 1908ರಲ್ಲಿ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ‘ಮೈಸೂರು ಪೊಲೀಸ್ ಕಾಯ್ದೆ’ ಜಾರಿಗೆ ತಂದಿದ್ದರು. ಕಾಯ್ದೆಯ ಅನ್ವಯ ಸಂಚಾರ ನಿರ್ವಹಣೆಯ ಕರ್ತವ್ಯವನ್ನು ಮೊದಲ ಬಾರಿಗೆ ಸಿವಿಲ್ ಪೊಲೀಸರಿಗೆ ವಹಿಸಲಾಗಿತ್ತು. ಅವರು ಸಂಚಾರ ದಟ್ಟಣೆ ನಿರ್ವಹಣೆ, ಸಾರ್ವಜನಿಕರು ರಸ್ತೆ ನಿಯಮಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ನೋಡಿಕೊಳ್ಳುತ್ತಿದ್ದರು. ಜತೆಗೆ, ವಾಹನಗಳು ಸೂರ್ಯಾಸ್ತದ ಅರ್ಧ ಗಂಟೆ ಹಾಗೂ ಸೂರ್ಯೋದಯಕ್ಕೂ ಒಂದು ಗಂಟೆ ಮೊದಲು ದೀಪಗಳನ್ನು ಬಳಸುತ್ತಿವೆಯೇ ಎಂಬುದನ್ನೂ ಅವರು ಖಚಿತ ಪಡಿಸಿಕೊಳ್ಳಬೇಕಿತ್ತು. ಹೀಗೆ ಸಂಚಾರ ಪೊಲೀಸರ ಕೆಲಸ ಆರಂಭಗೊಂಡಿತ್ತು.
1963ರಲ್ಲಿ ನಗರ ಪೊಲೀಸ್ ವ್ಯವಸ್ಥೆಯನ್ನು ಮರು ವಿಂಗಡಣೆ ಮಾಡಲಾಯಿತು. ಪೊಲೀಸ್ ಕಮಿಷನರೇಟ್ ವ್ಯವಸ್ಥೆ ಜಾರಿಗೆ ತರಲಾಯಿತು. ಸಂಚಾರ ವಿಭಾಗದ ಮೊದಲ ಡಿಸಿಪಿಯಾಗಿ ಬಿ.ಎನ್.ಗರುಡಾಚಾರ್ ಅವರು ನೇಮಕಗೊಂಡಿದ್ದರು. ಅದರ ಮಾಹಿತಿ ಕೇಂದ್ರದಲ್ಲಿ ಇದೆ.
ಸಿಗ್ನಲಿಂಗ್ ವ್ಯವಸ್ಥೆ: ಜಂಕ್ಷನ್‌ಗಳಲ್ಲಿ ಪೊಲೀಸರು ತಮ್ಮ ಕೈಗಳನ್ನು ಬಳಸಿ ವಾಹನ ದಟ್ಟಣೆ ನಿಯಂತ್ರಣ ಮಾಡುತ್ತಿದ್ದ ಛಾಯಾಚಿತ್ರಗಳಿಂದ ಹಿಡಿದು ಈವರೆಗಿನ ಕೃತಕ ಬುದ್ಧಿಮತ್ತೆ(ಎ.ಐ) ಕ್ಯಾಮೆರಾಗಳ ವರೆಗಿನ ಚಿತ್ರಗಳು ಸಂಗ್ರಹಾಲಯದಲ್ಲಿ ಇವೆ.
ಪ್ರಾರಂಭದ ದಿನಗಳಲ್ಲಿ ಸಂಚಾರ ಪೊಲೀಸರು, ನಗರದ ಪ್ರಮುಖ ಜಂಕ್ಷನ್‌ಗಳಲ್ಲಿ ಎರಡು ಅಡಿ ಎತ್ತರದ ಪೀಠದ ಮೇಲೆ ನಿಂತು ಸಂಚಾರ ನಿಯಂತ್ರಿಸುತ್ತಿದ್ದರು. 1970ರಲ್ಲಿ ಸಂಚಾರ ಕಿಯೋಸ್ಕ್‌ಗಳನ್ನು ಅಳವಡಿಸಿಕೊಳ್ಳಲಾಯಿತು. 1976ರಲ್ಲಿ ಸಂಚಾರ ಪೊಲೀಸ್ ಕಾನ್‌ಸ್ಟೆಬಲ್ ಒಬ್ಬರು ನೃಪತುಂಗ ರಸ್ತೆಯ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ ನಿಯಂತ್ರಣ ಮಾಡುತ್ತಿದ್ದ ಚಿತ್ರ ಗಮನ ಸೆಳೆಯುತ್ತಿದೆ.
ಬೆಂಗಳೂರಿನಲ್ಲಿ ಮೊದಲ ಸಂಚಾರ ಸಿಗ್ನಲ್, 1998ರಲ್ಲಿ ಸದಾಶಿವನಗರ ಪೊಲೀಸ್ ಠಾಣೆಯ ಜಂಕ್ಷನ್‌ನಲ್ಲಿ ಸ್ಥಾಪಿಸಲಾದ ಮೊದಲ ಸೌರಶಕ್ತಿ ಚಾಲಿತ ಸಿಗ್ನಲ್, ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರದ ಬಳಿಯ ಜಂಕ್ಷನ್‌ನಲ್ಲಿ ಅಳವಡಿಸಿದ್ದ ಕೌಂಟ್‌ಡೌನ್ ಟೈಮರ್ ಸಿಗ್ನಲ್ ಹಾಗೂ ಇತ್ತೀಚಿಗೆ ಅಳವಡಿಸಿಕೊಂಡಿರುವ ಮೊಡರಾಟೊ ಸಿಗ್ನಲ್ ವ್ಯವಸ್ಥೆಯ ಚಿತ್ರಗಳು ಸಂಚಾರ ನಿಯಂತ್ರಣ ವ್ಯವಸ್ಥೆಯ ಇತಿಹಾಸದ ಚಿತ್ರಣ ನೀಡುತ್ತವೆ.
ಹಿಂದೆ ಗಣ್ಯರು ಬಂದಾಗ ಬೆಂಗಾವಲು ಪಡೆಯ ಕಾರ್ಯನಿರ್ವಹಣೆ, 1933ರಲ್ಲಿ ಪೊಲೀಸರು ಬಳಸುತ್ತಿದ್ದ ಖಾಕಿ ಚಡ್ಡಿ ಹಾಗೂ ಅಂಗಿಯ ಮಾದರಿ, 1982ರಲ್ಲಿ ತೆಳು ನೀಲಿ ಬಣ್ಣದ ಪ್ಯಾಂಟ್, ಬಿಳಿ ಬಣ್ಣದ ಅಂಗಿ, ಕಸ್ಟೋಡಿಯನ್ ಹೆಲ್ಮೆಟ್, ಬಾಬು ಹ್ಯಾಟ್‌ನ ಮಾದರಿಗಳೂ ಇವೆ. ಅಲ್ಲದೇ 1984ರಲ್ಲಿ ಖಾಕಿ ಸಮವಸ್ತ್ರಕ್ಕೆ ಹೇಗೆ ಬದಲಾವಣೆ ಮಾಡಿಕೊಳ್ಳಲಾಯಿತು ಎಂಬುದನ್ನು ಪರಿಚಯಿಸಲಾಗಿದೆ.
ಸಂಚಾರಕ್ಕೆ ಸಂಬಂಧಿಸಿದ ಹಳೇ ಉಪಕರಣಗಳು, ದಾಖಲೆಗಳು, ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಬಳಸುತ್ತಿದ್ದ ಡಾಪ್ಲಾರ್ ರೇಡಾರ್ ಉಪಕರಣ, ಅತಿವೇಗವಾಗಿ ಚಲಿಸುತ್ತಿದ್ದ ವಾಹನವನ್ನು ಪತ್ತೆಹಚ್ಚಲು ಬಳಸುತ್ತಿದ್ದ ಕ್ಯಾಮೆರಾಗಳು, ಮದ್ಯ ಸೇವಿಸಿದ್ದವರ ಪತ್ತೆಗೆ ಉಪಯೋಗಿಸುತ್ತಿದ್ದ ಹಳೇ ಉಪಕರಣಗಳು ಹಾಗೂ ಅವುಗಳ ಛಾಯಾಚಿತ್ರಗಳನ್ನು ಇಡಲಾಗಿದ್ದು, ಪ್ರೇಕ್ಷಕರ ಮನ ಸೆಳೆಯುತ್ತಿವೆ.
ತಂತ್ರಜ್ಞಾನದ ವರವೂ...: ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಭವಿಷ್ಯದಲ್ಲಿ ಏನೆಲ್ಲಾ ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುವುದು ಎಂಬುದನ್ನು ವಿವರಿಸಲು ಪ್ರತ್ಯೇಕ ಕೊಠಡಿಯೇ ಇದೆ. ಅಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲು ‘ಬಿಟಿಪಿ ರೋಡ್ ಮಾಸ್ಟರ್’ ಇಡಲಾಗಿದೆ. ಅಸ್ತ್ರಂ ಮೊಬೈಲ್ ಆ್ಯಪ್‌ನ ಬಗೆ ಮಾಹಿತಿ ನೀಡಲಾಗುತ್ತಿದೆ. ಸಂಚಾರ ವಿಭಾಗಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದರೆ ಇಲ್ಲಿರುವ ‘ರೋಬೊ’ ಥಟ್ ಎಂದು ಉತ್ತರಿಸುತ್ತದೆ.
ಬೆಂಗಳೂರು ವೇಗವಾಗಿ ಬೆಳೆಯುತ್ತಿರುವ ನಗರ. ಹಾಗಾಗಿ ನಗರದ ಅಗತ್ಯಗಳಿಗೆ ಅನುಗುಣವಾಗಿ ಸಂಚಾರ ವಿಭಾಗದ ಪೊಲೀಸರು ತಂತ್ರಜ್ಞಾನ ಉಪಯೋಗಿಸಿಕೊಂಡು ಸುಧಾರಣೆ ತರುತ್ತಿದ್ದಾರೆ
– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್
– ಬಿ.ದಯಾನಂದ ನಗರ ಪೊಲೀಸ್ ಕಮಿಷನರ್
ಸಂಚಾರ ಪೊಲೀಸರ ಕಾರ್ಯ ನಿರ್ವಹಣೆಯ ಛಾಯಾಚಿತ್ರಗಳನ್ನು ವೀಕ್ಷಿಸುವ ಜತೆಗೇ ಅವರ ಕಥೆಗಳು ಹಾಗೂ ಸಾಹಸವನ್ನೂ ಕೇಂದ್ರದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ
– ಎಂ.ಎನ್.ಅನುಚೇತ್ ಜಂಟಿ ಪೊಲೀಸ್ ಕಮಿಷನರ್ ಸಂಚಾರ ವಿಭಾಗ
– ಎಂ.ಎನ್.ಅನುಚೇತ್ ಜಂಟಿ ಪೊಲೀಸ್ ಕಮಿಷನರ್ ಸಂಚಾರ ವಿಭಾಗ
ತಿಮ್ಮಯ್ಯ ಅವರ ನೆನಪು
1995ರಲ್ಲಿ ಮೀಸೆ ತಿಮ್ಮಯ್ಯ ಅವರು ಸಿಗ್ನಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಮಹಿಳೆ ಹಾಗೂ ಅವರ ಪುತ್ರನನ್ನು ಅಪಘಾತದಿಂದ ಪಾರು ಮಾಡಿದ್ದರು. ಇಬ್ಬರನ್ನೂ ರಕ್ಷಿಸಿದ್ದ ಅವರು ಸ್ಥಳದಲ್ಲೇ ಮೃತಪಟ್ಟಿದ್ದರು. ಆ ವೃತ್ತಕ್ಕೆ ಪೊಲೀಸ್ ತಿಮ್ಮಯ್ಯ ವೃತ್ತ (ಜಿ.ಪಿ.ಒ ಸಿಗ್ನಲ್) ಎಂದು ಹೆಸರಿಡಲಾಗಿದೆ. 1990ರಲ್ಲಿ ತಿಮ್ಮಯ್ಯ ಅವರು ಕರ್ತವ್ಯದಲ್ಲಿದ್ದ ಫೋಟೊವನ್ನು ಸಂಗ್ರಹಾಲಯದಲ್ಲಿ ಇಡಲಾಗಿದೆ.
ಗತವೈಭವ...
‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ಗ್ರಂಥಾಲಯದಿಂದ ಹಲವು ಚಿತ್ರಗಳನ್ನು ಪಡೆದುಕೊಂಡಿರುವ ಪೊಲೀಸ್ ಇಲಾಖೆ ಆ ಚಿತ್ರಗಳನ್ನೂ ಸಂಗ್ರಹಾಲಯದಲ್ಲಿ ಇರಿಸಿದೆ. ಈ ಚಿತ್ರಗಳು ನಗರದ ಗತವೈಭವವನ್ನು ಸಾರುತ್ತಿವೆ.
ಮುಕ್ತ ಅವಕಾಶ
ವಸ್ತು ಸಂಗ್ರಹಾಲಯ ಹಾಗೂ ಅನುಭವ ಕೇಂದ್ರದ ವೀಕ್ಷಣೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದೆ. ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಅವಕಾಶ ಇದೆ. ವಿದ್ಯಾರ್ಥಿಗಳು ಹಾಗೂ ಸಂಶೋಧಕರು ಆಸಕ್ತರು ಸಂಚಾರ ನಿಯಮಗಳ ಕುರಿತು ತಿಳಿದುಕೊಳ್ಳಲು ಇಲ್ಲಿಗೆ ಭೇಟಿ ನೀಡಬಹುದಾಗಿದೆ. ಕೇಂದ್ರಕ್ಕೆ ಬಂದವರನ್ನು ಆತ್ಮೀಯವಾಗಿ ಸ್ವಾಗತಿಸುವ ಸಿಬ್ಬಂದಿ ಬೇಕಾದ ಮಾಹಿತಿಯನ್ನೂ ಒದಗಿಸುತ್ತಾರೆ. ಅಲ್ಲಲ್ಲಿ ಧ್ವನಿಮುದ್ರಿತ ವ್ಯವಸ್ಥೆಯೂ ಇದೆ. ಅಲ್ಲಿಯೂ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.