
ಬೆಂಗಳೂರು: ‘ಭಾರತದಲ್ಲಿ ಸಂಗೀತ ಪ್ರಮುಖ ಕಲಾ ಪ್ರಕಾರವಾಗಿ ಬೆಳೆದು ಬಂದಿದ್ದು, ಸಂಗೀತ ಕ್ಷೇತ್ರದಲ್ಲಿ ತೊಡಗಿದವರಿಗೆ ಸಂಸ್ಕಾರ ತಾನಾಗಿಯೇ ಬರಲಿದೆ. ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಸಂಗೀತಕ್ಕೆ ಇನ್ನಷ್ಟು ಪ್ರೋತ್ಸಾಹ ನೀಡಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಷಾನಂದ ಹೇಳಿದರು.
ಬೆಂಗಳೂರು ಗಾಯನ ಸಮಾಜದಲ್ಲಿ ಭಾನುವಾರ ನಡೆದ 55ನೇ ಸಂಗೀತ ಸಮ್ಮೇಳನದಲ್ಲಿ ಹಿರಿಯ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
‘ಸಂಗೀತ, ಸಂಸ್ಕೃತಿ ಕ್ಷೇತ್ರದಲ್ಲಿ ವಿಶ್ವದ ಇತರೆ ದೇಶಗಳಿಗಿಂತ ಭಾರತ ಸದಾ ಮುಂಚೂಣಿಯಲ್ಲಿದೆ. ಸಂಗೀತಕ್ಕೆ ವಿಶ್ವ ಮಟ್ಟದಲ್ಲಿ ಮಹತ್ವವಿದೆ. ಶತಮಾನಕ್ಕೂ ಹೆಚ್ಚಿನ ಇತಿಹಾಸವಿದೆ. ಭಾರತೀಯರ ಬದುಕಿನ ಭಾಗವೇ ಆಗಿರುವ ಸಂಗೀತಕ್ಕೆ ವ್ಯಕ್ತಿಯನ್ನು ಬದಲು ಮಾಡುವ ಶಕ್ತಿ ಇದೆ’ ಎಂದು ನುಡಿದರು.
ಪ್ರಶಸ್ತಿ ಸ್ವೀಕರಿಸಿದ ಹಿರಿಯ ಕಲಾವಿದೆ ಪದ್ಮಾ ಗುರುದತ್ ಮಾತನಾಡಿ, ‘ನಿರಂತರವಾಗಿ ಸಂಗೀತ ಸೇವೆ ಮಾಡಲು ಬೆಂಗಳೂರು ಗಾಯನ ಸಮಾಜದಂತ ಹತ್ತಾರು ಸಂಸ್ಥೆಗಳು ಪ್ರೋತ್ಸಾಹ ನೀಡಿವೆ. ಕಲಾವಿದರಿಗೆ ಈ ರೀತಿ ಬೆಂಬಲ ಸಿಗದೇ ಇದ್ದರೆ ಸಾಧನೆ ಮಾಡಲು ಆಗದು’ ಎಂದು ನುಡಿದರು.
ಇದೇ ವೇಳೆ ಸಂಗೀತ ಕಲಾರತ್ನ ಪ್ರಶಸ್ತಿಯನ್ನು ಪದ್ಮಾ ಗುರುದತ್, ಕರ್ನಾಟಕ ಕಾಲಚಾರ್ಯ ಪ್ರಶಸ್ತಿಯನ್ನು ತಿರುಮಲೆ ಶ್ರೀನಿವಾಸ್, ಕಲಾಜ್ಯೋತಿ ಪ್ರಶಸ್ತಿಯನ್ನು ಟಿ.ಎಸ್. ವಸುಂಧರಾ, ಕೆ.ಎಸ್. ನಾಗಭೂಷಣಯ್ಯ, ಈಶ್ವರ ಭಟ್ ಕಾಂಚನ, ಉಪಾಸನಾ ಮೋಹನ್, ಸ್ವರಭೂಷಿಣಿ ಪ್ರಶಸ್ತಿಯನ್ನು ನಳಿನಾ ಮೋಹನ್ ಹಾಗೂ ಸ್ವರಲಿಪಿ ಪ್ರಶಸ್ತಿಯನ್ನು ತೇಜಸ್ವಿನಿ ಹೆಗಡೆ ಅವರಿಗೆ ಪ್ರದಾನ ಮಾಡಲಾಯಿತು.
ಗಾಯನ ಸಮಾಜದ ಅಧ್ಯಕ್ಷ ಎಂ. ಆರ್.ವಿ. ಪ್ರಸಾದ್, ಉಪಾಧ್ಯಕ್ಷ ಟಿ. ಅಚ್ಚುತರಾವ್ ಪದಕಿ, ಕಾರ್ಯದರ್ಶಿ ಕೆ. ನಾಗರಾಜ, ಖಜಾಂಚಿ ಜಿ.ಕೆ.ವೇಣು, ಕಲಾವಿದ ವಿ.ಅನೂರ್ ಅನಂತಕೃಷ್ಣ ಶರ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.