
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಶತಮಾನೋತ್ಸವದ ನೆನಪಿಗಾಗಿ ನ.8 ಮತ್ತು 9ರಂದು ಹಮ್ಮಿಕೊಂಡಿರುವ ‘ಸಂಘದ 100 ವರ್ಷದ ಪಯಣ: ನವ ಕ್ಷಿತಿಜ’ ಕಾರ್ಯಕ್ರಮದಲ್ಲಿ ಸಂಘದ ಸರಸಂಘ ಸಂಚಾಲಕ ಮೋಹನ್ ಭಾಗವತ್ ಉಪನ್ಯಾಸ ನೀಡಲಿದ್ದಾರೆ.
ಇಲ್ಲಿನ ಹೊಸಕೆರೆಹಳ್ಳಿ ವರ್ತುಲ ರಸ್ತೆಯ ಪಿಇಎಸ್ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಆಹ್ವಾನಿತರಿಗಷ್ಟೇ ಪ್ರವೇಶ ಇರುತ್ತದೆ. ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ಹಾಗೂ ಕೇರಳದಿಂದ 1,200 ಗಣ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿವಿಧ ಕ್ಷೇತ್ರಗಳ ಪರಿಣತರು ಭಾಗವಹಿಸುತ್ತಿದ್ದಾರೆ.
ನ.8ರಂದು ಸಂಜೆ 4ರಿಂದ 7.30ರವರೆಗೆ ಎರಡು ಅವಧಿಯಲ್ಲಿ ಮೋಹನ್ ಭಾಗವತ್ ಅವರು ಉಪನ್ಯಾಸ ನೀಡುವರು. ನ.9ರಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಎರಡು ಅವಧಿಯಲ್ಲಿ ಸಭಿಕರ ಪ್ರಶ್ನೆಗಳಿಗೆ ಉತ್ತರಿಸುವರು. ಕಾರ್ಯಕ್ರಮದ ನೇರಪ್ರಸಾರವನ್ನು ಆರ್‌ಎಸ್‌ಎಸ್‌ನ ಅಧಿಕೃತ ಜಾಲತಾಣ www.youtube.com/rssorg ಹಾಗೂ www.facebook.com/rssorg ಮೂಲಕ ವೀಕ್ಷಿಸಬಹುದು.
ಸಂಘದ ಶತಮಾನೋತ್ಸವದ ಪ್ರಯುಕ್ತ ವಿಜಯದಶಮಿ ಉತ್ಸವ, ಯುವ ಸಮಾವೇಶ, ಮನೆ–ಮನೆ ಸಂಪರ್ಕ, ಹಿಂದೂ ಸಮ್ಮೇಳನ, ಸಾಮಾಜಿಕ ಸದ್ಭಾವನಾ ಸಮಾವೇಶ, ಪ್ರಮುಖ ನಾಗರಿಕರ ವಿಚಾರಗೋಷ್ಠಿಗಳನ್ನು ದೇಶದಾದ್ಯಂತ ಆಯೋಜಿಸಲಾಗಿದೆ. ನವದೆಹಲಿ, ಬೆಂಗಳೂರು, ಮುಂಬೈ, ಕೋಲ್ಕತ್ತಾದಲ್ಲಿ ಉಪನ್ಯಾಸ ಮಾಲೆಗಳು ನಡೆಯಲಿವೆ. ದೆಹಲಿಯ ಮೊದಲ ಕಾರ್ಯಕ್ರಮ ಈಗಾಗಲೇ ಮುಕ್ತಾಯವಾಗಿದೆ ಎಂದು ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.