ಬೆಂಗಳೂರು: ‘ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳು ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಸರ್ಕಾರದ ಮೇಲಿನ ಆರ್ಥಿಕ ಹೊರೆ ಇಳಿಸಿವೆ’ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್ ಅಭಿಮತ ವ್ಯಕ್ತಪಡಿಸಿದರು.
ಶ್ರೀ ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಜ್ರ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಸಹಕಾರಿ ಬ್ಯಾಂಕ್ ಮತ್ತು ಸಹಕಾರಿ ಸಂಘಗಳು ಇರದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮೇಲೆ ಆರ್ಥಿಕ ಹೊರೆ ಹೆಚ್ಚುತ್ತಿತ್ತು. ರಾಜ್ಯದಲ್ಲಿ 364 ಸಹಕಾರಿ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳ 1,200 ಶಾಖೆಗಳಿವೆ. ಲಕ್ಷಾಂತರ ಮಂದಿ ಈ ಬ್ಯಾಂಕುಗಳಲ್ಲಿ ಸಕ್ರಿಯವಾಗಿದ್ದು, ಜನರ ಜೀವನಮಟ್ಟ ಸುಧಾರಣೆಗೆ ಬ್ಯಾಂಕ್‌ಗಳು ನೆರವಾಗುತ್ತಿವೆ. ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ಕೂಡ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಎಂ.ಆರ್. ವೆಂಕಟೇಶ್, ‘ನಮ್ಮ ಬ್ಯಾಂಕ್ 14 ಶಾಖೆಗಳನ್ನು ಹೊಂದಿದ್ದು, ₹6 ಸಾವಿರ ಕೋಟಿ ವಹಿವಾಟು ನಡೆಸಲಾಗುತ್ತಿದೆ. ₹125 ಕೋಟಿ ಸ್ವಂತ ಬಂಡವಾಳ ಹೊಂದಲಾಗಿದೆ. ಸುಮಾರು 25 ಸಾವಿರ ಸದಸ್ಯರಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸರಿಸಮಾನವಾಗಿ ಕೆಲಸ ಮಾಡಲಾಗುತ್ತಿದೆ. ಬ್ಯಾಂಕಿಂಗ್ ವ್ಯವಹಾರ ಸುಲಭಗೊಳಿಸಲು ಆಧುನಿಕ ತಂತ್ರಜ್ಞಾನಗಳನ್ನೂ ಅಳವಡಿಸಿಕೊಳ್ಳಲಾಗಿದೆ. ಸಹಕಾರಿ ಸಂತೆ ಪ್ರಾರಂಭಿಸಿ, ಸಣ್ಣ ಉದ್ದಿಮೆದಾರರಿಗೆ ಸಾಲ ನೀಡಲು ವೇದಿಕೆ ಒದಗಿಸಿದ್ದೇವೆ’ ಎಂದರು.
ಸಹಕಾರಿ ಬ್ಯಾಂಕ್‌ಗಳು ಸಂಕಷ್ಟಕ್ಕೆ ಸಿಲುಕಿದಾಗ ಬಲಪಡಿಸಲು ಪ್ರತ್ಯೇಕ ಸಂಘ ಸ್ಥಾಪನೆ, ಠೇವಣಿ ವಿಮಾ ಮಿತಿ ₹10 ಲಕ್ಷಕ್ಕೆ ಏರಿಕೆ ಸೇರಿ ಸಹಕಾರಿ ಬ್ಯಾಂಕ್‌ಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದ ಎಂ.ಆರ್. ವೆಂಕಟೇಶ್, ಮನವಿಪತ್ರವನ್ನು ಭಾರತೀಯ ರಿಸರ್ವ್ ಬ್ಯಾಂಕ್‌ನ ಕೇಂದ್ರ ಮಂಡಳಿಯ ನಿರ್ದೇಶಕ ಸತೀಶ್ ಮರಾಠೆ ಅವರಿಗೆ ಹಸ್ತಾಂತರಿಸಿದರು.
ಇದೇ ಸಮಾರಂಭದಲ್ಲಿ ತಿಪಟೂರಿನ ‘ಮರ್ಚೆಂಟ್ಸ್ ಕೋ–ಆಪರೇಟಿವ್ ಬ್ಯಾಂಕ್’ಗೆ ‘ಅತ್ಯುತ್ತಮ ಬ್ಯಾಂಕ್’ ಪ್ರಶಸ್ತಿ, ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್‌ನ ವ್ಯವಸ್ಥಾಪಕ ಉಮೇಶ್ ಹಾಗೂ ದಿ ಗಾಂಧಿ ಗುಂಜ್ ಕೋ–ಆಪರೇಟಿವ್ ಬ್ಯಾಂಕ್‌ನ ವ್ಯವಸ್ಥಾಪಕಿ ವಾಣಿ ಬಿರಾದರ್ ಅವರಿಗೆ ‘ಅತ್ಯುತ್ತಮ ಸಿಬ್ಬಂದಿ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಗಳು ಕ್ರಮವಾಗಿ ₹25 ಸಾವಿರ ಹಾಗೂ ₹10 ಸಾವಿರ ನಗದು ಒಳಗೊಂಡಿವೆ.
ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಂಬಿಕೆಯೇ ಮುಖ್ಯ. ತ್ಯಾಗರಾಜ ಕೋ–ಆಪರೇಟಿವ್ ಬ್ಯಾಂಕ್ ಗ್ರಾಹಕರ ವಿಶ್ವಾಸ ಉಳಿಸಿಕೊಂಡು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಆರ್. ಅಶೋಕ , ವಿಧಾನಸಭೆ ವಿರೋಧ ಪಕ್ಷದ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.