ADVERTISEMENT

ಮೆಟ್ರೊ ದಾಖಲೆ: ಒಂದೇ ದಿನ 4.64 ಲಕ್ಷ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2019, 16:52 IST
Last Updated 5 ಅಕ್ಟೋಬರ್ 2019, 16:52 IST
   

ಬೆಂಗಳೂರು: ತಿಂಗಳ ಅಂತರದಲ್ಲಿ ‘ನಮ್ಮ ಮೆಟ್ರೊ’ ಮತ್ತೊಂದು ದಾಖಲೆ ಬರೆದಿದೆ. ಶುಕ್ರವಾರ ಮೆಟ್ರೊ ರೈಲಿನಲ್ಲಿ 4.64 ಲಕ್ಷ ಪ್ರಯಾಣಿಕರು ಸಂಚರಿಸಿದ್ದು, ಇದರಿಂದ ₹1.20 ಕೋಟಿ ಆದಾಯ ಹರಿದು ಬಂದಿದೆ.

ವಾರಾಂತ್ಯದ ಜತೆಗೆ ನಾಡಹಬ್ಬದ ಹಿನ್ನೆಲೆಯಲ್ಲಿ ಸಾಲು ನಾಲ್ಕು ದಿನಗಳು ರಜೆ ಇದ್ದು, ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬೇರೆ ಊರುಗಳಿಗೆ ತೆರಳಿದರು. ಬಸ್ ನಿಲ್ದಾಣಗಳನ್ನು ತಲುಪಲು ಪ್ರಯಾಣಿಕರು ಮೆಟ್ರೊಗೆ ಮುಗಿಬಿದ್ದರು. ಇದರಿಂದ ಶುಕ್ರವಾರ ರಾತ್ರಿವರೆಗೆ ಒಟ್ಟಾರೆ 4.64 ಲಕ್ಷ ಜನ ಪ್ರಯಾಣಿಸಿದ್ದಾರೆ. ಈ ಪೈಕಿ ನೇರಳೆ ಮಾರ್ಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸಿದ್ದು, ಹಸಿರು ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ಈ ಹಿಂದೆ ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಅಂದರೆ ಆಗಸ್ಟ್ 31ರಂದು 4.58 ಲಕ್ಷ ಪ್ರಯಾಣಿಕರು ಪ್ರಯಾಣಿಸಿದ್ದು, ಪರಿಣಾಮ ₹1.09 ಕೋಟಿ ಆದಾಯ ಹರಿದು ಬಂದಿತ್ತು. ಇದಕ್ಕೂ ಮುನ್ನ ಆಗಸ್ಟ್ 14ರಂದು 4.53 ಲಕ್ಷ ಜನ ಪ್ರಯಾಣಿಸಿದ್ದರು. ಅಲ್ಲದೆ, ಏಪ್ರಿಲ್ 4ರಂದು 4.52 ಲಕ್ಷ ಜನ ಸಂಚರಿಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಶುಕ್ರವಾರದ ಅಂಕಿ-ಸಂಖ್ಯೆಯು ಆ ಎಲ್ಲ ದಾಖಲೆಗಳನ್ನು ಮೀರಿದೆ.

ADVERTISEMENT

ಸಾಮಾನ್ಯವಾಗಿ ಈ ಎರಡೂ ಮಾರ್ಗಗಳು ಸೇರಿನಿತ್ಯ ಸರಾಸರಿ 4.20 ಲಕ್ಷದಿಂದ4.30 ಲಕ್ಷ ಜನ ಪ್ರಯಾಣಿಸುತ್ತಾರೆ. ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 30 ಸಾವಿರದಿಂದ 40 ಸಾವಿರ ಜನ ಪ್ರಯಾಣಿಸಿದ್ದಾರೆ. ಶನಿವಾರ ಕೂಡ ಪ್ರಯಾಣಿಕರ ಸಂಖ್ಯೆ ಹೆಚ್ಚಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.