ನಮ್ಮ ಮೆಟ್ರೊ
ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣ ದರ ಏರಿಕೆಯಾದ ಏಳು ತಿಂಗಳ ಬಳಿಕ ಬಿಎಂಆರ್‌ಸಿಎಲ್ ತನ್ನ ವೆಬ್‌ಸೈಟ್‌ನಲ್ಲಿ ದರ ನಿಗದಿ ಸಮಿತಿ ನೀಡಿರುವ ವರದಿಯನ್ನು ಪ್ರಕಟಿಸಿದೆ. ಬಿಎಂಆರ್‌ಸಿಎಲ್ ಶೇ 105.5ರಷ್ಟು ದರ ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದು, ಶೇ 51.55ರಷ್ಟು ಹೆಚ್ಚಳ ಮಾಡಲು ದರ ನಿಗದಿ ಸಮಿತಿ ಶಿಫಾರಸು ಮಾಡಿತ್ತು.
ದರ ಹೆಚ್ಚಳಕ್ಕಾಗಿ ಸಮಿತಿ ಮಾಡಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ರಾಜ್ಯ ಸರ್ಕಾರವನ್ನು ಬಿಎಂಆರ್‌ಸಿಎಲ್ ಕೋರಿತ್ತು. ಅದರಂತೆ ರಾಜ್ಯ ಮೂಲಸೌಕರ್ಯ ಇಲಾಖೆಯು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇಂದ್ರ ಸರ್ಕಾರವು ದರ ನಿಗದಿ ಸಮಿತಿಯನ್ನು ನೇಮಕ ಮಾಡಿತ್ತು. ಸಮಿತಿಯು ಸಾರ್ವಜನಿಕರಿಂದ, ಬಿಎಂಆರ್‌ಸಿಎಲ್ ಅಧಿಕಾರಿಗಳಿಂದ, ತಜ್ಞರಿಂದ ಅಭಿಪ್ರಾಯ ಸಂಗ್ರಹಿಸಿತ್ತು.
2017ರಲ್ಲಿ ಕೊನೇಬಾರಿ ದರ ಪರಿಷ್ಕರಣೆ ಮಾಡಲಾಗಿತ್ತು. ಆಗ ಮೊದಲ ಎರಡು ಕಿ.ಮೀ.ಗೆ ಕನಿಷ್ಠ ದರ ₹ 10 ಹಾಗೂ ಗರಿಷ್ಠ ಅಂದರೆ 22 ಕಿ.ಮೀ.ಯಿಂದ 30 ಕಿ.ಮೀ.ವರೆಗೆ ಗರಿಷ್ಠ ದರ ₹ 60 ನಿಗದಿಯಾಗಿತ್ತು. ಅದಾಗಿ 7.5 ವರ್ಷಗಳಾಗಿರುವುದರಿಂದ ವೇತನ ಹೆಚ್ಚಳ, ಸಾಮಗ್ರಿಗಳ ಬೆಲೆ ಹೆಚ್ಚಳ, ಸಾಲ ಹೆಚ್ಚಳ ಹೀಗೆ ಎಲ್ಲವೂ ಅಧಿಕವಾಗಿರುವುದರಿಂದ ಶೇ 105.5ರಷ್ಟು ಹೆಚ್ಚಳ ಮಾಡಬೇಕು ಎಂದು ಬಿಎಂಆರ್‌ಸಿಎಲ್ ಬೇಡಿಕೆ ಮುಂದಿಟ್ಟಿತ್ತು.
12 ಸ್ಟ್ಯಾಬ್ ಮಾಡಬೇಕು. ಕನಿಷ್ಠದರ ₹21 ಹಾಗೂ ಗರಿಷ್ಠ ದರ ₹123ಕ್ಕೆ ಏರಿಸಬೇಕು ಎಂದು ತಿಳಿಸಿತ್ತು. ದೇಶದ ವಿವಿಧ ಮೆಟ್ರೊಗಳಲ್ಲಿ ಇರುವ ದರ, ವಿದೇಶಗಳಲ್ಲಿ ಇರುವ ದರ ಪರಿಷ್ಕರಣೆ ವ್ಯವಸ್ಥೆ ಎಲ್ಲವನ್ನೂ ಅಧ್ಯಯನ ನಡೆಸಿದ ದರ ನಿಗದಿ ಸಮಿತಿಯು 12 ಸ್ಲ್ಯಾಬ್‌ಗಳ ಬದಲು 10 ಸ್ಲ್ಯಾಬ್‌ಗಳನ್ನು ಮಾಡಿತ್ತು. ಅಲ್ಲದೇ ಕನಿಷ್ಠ ದರವನ್ನು ₹ 10 ಇರುವುದನ್ನು ಹಾಗೇ ಉಳಿಸಿಕೊಂಡು ಗರಿಷ್ಠ ದರವನ್ನು ₹ 90ಕ್ಕೆ ನಿಗದಿ ಮಾಡಿತ್ತು. ಫೆಬ್ರುವರಿ 9ಕ್ಕೆ ಪರಿಷ್ಕೃತ ದರ ಜಾರಿಗೆ ಬಂದಿತ್ತು.
ಕಿಲೋಮೀಟರ್ ಆಧಾರದಲ್ಲಿ ಮಾಡಲಾದ ಪರಿಷ್ಕೃತ ದರವು ಜಾರಿಗೆ ಬರುವಾಗ ನಿಲ್ದಾಣಗಳಿಗೆ ಅನ್ವಯವಾಗುವುದರಿಂದ ಹಲವು ನಿಲ್ದಾಣಗಳಿಗೆ ಶೇ 100ರಷ್ಟು ಹೆಚ್ಚಳವಾಗಿತ್ತು. ಪ್ರಯಾಣಿಕರ ಪ್ರತಿಭಟನೆ, ಆಂದೋಲನ, ರಾಜ್ಯ ಸರ್ಕಾರದ ಸೂಚನೆಯಂತೆ ಅತ್ಯಧಿಕ ದರ ಹೆಚ್ಚಳ ಆಗಿರುವಲ್ಲಿ ಕಡಿಮೆ ಮಾಡಲು ಬಿಎಂಆರ್‌ಸಿಎಲ್ ಮುಂದಾಗಿತ್ತು. ಗರಿಷ್ಠ ಹೆಚ್ಚಳವು ಶೇ 71.5ರಷ್ಟಾಗಿದೆ.
‘ಎರಡೂ ಸರ್ಕಾರಗಳು ಕಾರಣ’
ಬಿಎಂಆರ್‌ಸಿಎಲ್ ದರ ವಿಪರೀತ ಹೆಚ್ಚಳವಾದ ಬಳಿಕ ಕೇಂದ್ರ ಸರ್ಕಾರ ಮತ್ತು ಬಿಜೆಪಿ ಜನಪ್ರತಿನಿಧಿಗಳು ರಾಜ್ಯ ಸರ್ಕಾರವನ್ನು ದೂರಿದರೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಜನಪ್ರತಿನಿಧಿಗಳು ಕೇಂದ್ರ ಸರ್ಕಾರವನ್ನು ದೂರಿದ್ದರು. ಒಬ್ಬರಿಗೊಬ್ಬರು ಟೀಕೆ ಮಾಡಿದ್ದರು. ರಾಜ್ಯ ಸರ್ಕಾರದ ಪ್ರಸ್ತಾವದಂತೆ ಕೇಂದ್ರ ಸರ್ಕಾರ ದರ ನಿಗದಿ ಸಮಿತಿ ರಚಿಸಿತ್ತು. ಆ ಸಮಿತಿ ನೀಡಿದ ವರದಿಯಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಅಧಿಕಾರಿಗಳು ಇರುವ ಬಿಎಂಆರ್‌ಸಿಎಲ್ ಆಡಳಿತ ಮಂಡಳಿ ಜಾರಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.