ADVERTISEMENT

ನಮ್ಮ ಮೆಟ್ರೊ ತಿಂಗಳಿಗೆ ₹ 6 ಕೋಟಿ ಲಾಭ: ಡಿ.ಕೆ. ಶಿವಕುಮಾರ್‌

ಬಿಎಂಆರ್‌ಸಿಎಲ್‌ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಿಕೆಶಿ ಮಾಹಿತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 6:42 IST
Last Updated 7 ಜೂನ್ 2023, 6:42 IST
ಮೆಟ್ರೊ
ಮೆಟ್ರೊ   

ಬೆಂಗಳೂರು: ದೆಹಲಿ ಮೆಟ್ರೊ ನಂತರ ಎರಡನೇ ಅತಿ ದೊಡ್ಡದಾಗಿರುವ ಬೆಂಗಳೂರಿನ ನಮ್ಮ ಮೆಟ್ರೊ ತಿಂಗಳಿಗೆ ₹ 48 ಕೋಟಿ ಆದಾಯ ಗಳಿಸಿದರೂ ₹ 42 ಕೋಟಿ ನಿರ್ವಹಣೆಗೆ ವೆಚ್ಚವಾಗುತ್ತಿದೆ. ₹ 6 ಕೋಟಿಯಷ್ಟೇ ಲಾಭ ಬರುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಬಿಎಂಆರ್‌ಸಿಎಲ್‌ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಮೆಟ್ರೊ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರಿಗೆ ಈ ಮಾಹಿತಿ ನೀಡಿದರು.

‘ಪ್ರಯಾಣಿಕರ ಹೊರತಾಗಿ ಇತರೆ ಮೂಲಗಳಿಂದ ಆದಾಯ ಗಳಿಸುವ ಕುರಿತು ಕೆಲವು ಸಲಹೆ ನೀಡಿದ್ದೇನೆ. ಜಾಹೀರಾತು ಬಗ್ಗೆ ಇರುವ ನಿರ್ಬಂಧವನ್ನು ಸರಿಪಡಿಸಲಾಗುವುದು. ಇದರ ಜತೆಗೆ ಅವರಿಗೆ ಸಬ್ಸಿಡಿಯಲ್ಲಿ ಸಿಗುತ್ತಿರುವ ವಿದ್ಯುತ್ ಅನ್ನು ಮತ್ತಷ್ಟು ಕಡಿಮೆ ದರಕ್ಕೆ ಪಡೆಯಲು ಸಲಹೆ ನೀಡಿದ್ದೇನೆ’ ಎಂದು ವಿವರಿಸಿದರು.

ADVERTISEMENT

2ನೇ ಹಂತದ ಯೋಜನೆಗೆ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅವರು ಒಪ್ಪಿಗೆ ನೀಡಬೇಕಿದೆ. 3ನೇ ಹಂತದ ಯೋಜನೆಯಲ್ಲಿ ಸರ್ಜಾಪುರದಿಂದ ಹೆಬ್ಬಾಳದವರೆಗೆ ಸಮೀಕ್ಷೆ ನಡೆಯುತ್ತಿದೆ. ಅಲ್ಲಿಂದ ಮುಂದೆ ಎಲ್ಲೆಲ್ಲಿ ವಿಸ್ತರಣೆ ಮಾಡಬಹುದು ಎಂಬುದೂ ಸಮೀಕ್ಷೆಯಾಗಬೇಕು ಎಂದರು.

ಬೈಯ್ಯಪ್ಪನಹಳ್ಳಿ– ಕೆ.ಆರ್. ಪುರಂ ಮೆಟ್ರೊ ಜುಲೈ ವೇಳೆಗೆ, ಕೆಂಗೇರಿ ಹಾಗೂ ಚಲಘಟ್ಟ ಸೆಪ್ಟೆಂಬರ್‌ಗೆ, ನಾಗಸಂದ್ರ ಹಾಗೂ ಮಾದವಾರ ಅಕ್ಟೋಬರ್ ವೇಳೆಗೆ ಸಿದ್ಧವಾಗಬಹುದು. ನೂತನ ಮಾರ್ಗ ಬೊಮ್ಮಸಂದ್ರದಿಂದ ಆರ್.ವಿ ರಸ್ತೆ ಮಾರ್ಗ ನವೆಂಬರ್ ವೇಳೆಗೆ ಆಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೊ ಸಂಪರ್ಕ ಮಾರ್ಗ 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ. ಸಿಲ್ಕ್ ಬೋರ್ಡ್‌ನಿಂದ ಕೆ.ಆರ್ ಪುರಂವರೆಗಿನ ಮಾರ್ಗ ಕೂಡ ಇದೇ ಸಮಯದಲ್ಲಿ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಇಂದಿನ ಚರ್ಚೆಯಲ್ಲಿ ಅಧಿಕಾರಿಗಳು ಕಾಮಗಾರಿ ವಿಳಂಬದ ಬಗೆಗಿನ ಸಮಸ್ಯೆ ಹೇಳಿಕೊಂಡಿದ್ದಾರೆ. ರಾತ್ರಿ ವೇಳೆ ಈ ಕಾಮಗಾರಿಗಳು ನಡೆಯುತ್ತಿವೆ. ಹಗಲಲ್ಲಿ ಸಿಮೆಂಟ್, ಸಾಮಗ್ರಿ ತಲುಪಿಸಲು ಆಗುತ್ತಿಲ್ಲ. ಈ ವಿಚಾರವಾಗಿ ಪೊಲೀಸರ ಜತೆ ಸಭೆ ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.