ADVERTISEMENT

ಮೆಟ್ರೊ ಕೆಂಪು ಮಾರ್ಗದ ಡಬಲ್ ಡೆಕರ್‌ಗೆ ಕೇಂದ್ರ ಆಕ್ಷೇಪ: ಮರುಪರಿಶೀಲನೆಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 9:55 IST
Last Updated 12 ಫೆಬ್ರುವರಿ 2026, 9:55 IST
<div class="paragraphs"><p>ನಮ್ಮ ಮೆಟ್ರೊ </p></div>

ನಮ್ಮ ಮೆಟ್ರೊ

   

ಬೆಂಗಳೂರು: ಹೆಬ್ಬಾಳ-ಸರ್ಜಾಪುರ ಡಬಲ್ ಡೆಕ್ಕರ್ ಮೆಟ್ರೊ ಕಾರಿಡಾರ್‌ ಯೋಜನೆಗೆ ( ಕೆಂಪು ಮಾರ್ಗ) ಅನುಮೋದನೆ ನೀಡಲು ನಿರಾಕರಿಸುವ ಕೇಂದ್ರ ಸರ್ಕಾರವು ಯೋಜನೆಯನ್ನು ಮರುಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.

ಈ ಬಗ್ಗೆ ಬೆಂಗಳೂರು ಕೇಂದ್ರದ ಬಿಜೆಪಿ ಸಂಸದ ಪಿ.ಸಿ.ಮೋಹನ್‌ ತನ್ನ ‘ಎಕ್ಸ್‌’ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ADVERTISEMENT

ಹೆಬ್ಬಾಳ-ಸರ್ಜಾಪುರ ಮೆಟ್ರೊ ಕಾರಿಡಾರ್‌ಗೆ ಕೇಂದ್ರದ ಅನುಮತಿ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಯೋಜನೆಯಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಧಕ್ಕೆ ಉಂಟಾಗಲಿದೆ ಎಂದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಎಚ್ಚರಿಸಿದೆ. ಈ ಯೋಜನೆಯ ಕಾರ್ಯಸಾಧ್ಯತೆ, ವಿನ್ಯಾಸವನ್ನು ಬಿಎಂಆರ್‌ಸಿಎಲ್‌ ಮರುಪರಿಶೀಲಿಸುವಂತೆ ಪಿ.ಸಿ.ಮೋಹನ್ ಹೇಳಿದ್ದಾರೆ.

ಮೆಟ್ರೊ ಸಂಚರಿಸುವ ಮಾರ್ಗ ಪೂರ್ತಿ ಡಬಲ್‌ ಡೆಕರ್‌ ಯಾಕೆ ಮಾಡಬೇಕು. ಇದರಿಂದ ಮೆಟ್ರೊದಲ್ಲಿ ಸಂಚರಿಸುವವರ ಸಂಖ್ಯೆ ಕಡಿಮೆಯಾಗುವುದಿಲ್ಲವೇ? ಅಗತ್ಯ ಇರುವಲ್ಲಿ ಮಾತ್ರ ಡಬಲ್‌ ಡೆಕರ್‌ ಮಾಡುವುದು ಸಮಂಜಸವಲ್ಲವೇ  ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಕೇಳಿದೆ ಎಂದು ಸಂಸದರು ಮಾಹಿತಿ ನೀಡಿದ್ದಾರೆ.

2024ರಲ್ಲಿ ರಾಜ್ಯ ಸರ್ಕಾರ ಈ ಯೋಜನೆಗೆ ಅನುಮೋದನೆ ನೀಡಿತ್ತು. ಆಗ ಟೆಂಡರ್‌ನಲ್ಲಿ ಪ್ರಸ್ತಾವ ಮಾಡಿದ್ದ ಯೋಜನೆ ಮೊತ್ತ ಇಷ್ಟು ಅಧಿಕ ಯಾಕೆ ಎಂದು ಕೇಂದ್ರ ಪ್ರಶ್ನಿಸಿತ್ತು. ಈಗ ಎರಡನೇ ಬಾರಿಗೆ ಆಕ್ಷೇಪ ವ್ಯಕ್ತಪಡಿಸಿದೆ. 

37 ಕಿಮೀ ಉದ್ದದ ಹೆಬ್ಬಾಳ-ಸರ್ಜಾಪುರ ಮೆಟ್ರೊ ಮಾರ್ಗ ಸುಮಾರು ₹28,000 ಕೋಟಿ ವೆಚ್ಚದ ಯೋಜನೆಯಾಗಿದೆ. ಸರ್ಜಾಪುರದ ಐಟಿ ಹಬ್, ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್ ಮತ್ತು ಹೆಬ್ಬಾಳವನ್ನು ಸಂಪರ್ಕ ಮಾಡಲು ಇದರಿಂದ ಅನುಕೂಲ ಆಗಲಿದೆ. ಇದು ಮೆಟ್ರೊ ಹಾಗೂ ರಸ್ತೆ ಎರಡನ್ನೂ ಒಳಗೊಂಡ ಡಬಲ್ ಡೆಕರ್ ಮಾರ್ಗ ಆಗಿರುವುದರಿಂದ ಕೇಂದ್ರ ಅನುಮತಿ ನೀಡಲು ಹಿಂದೇಟು ಹಾಕಿರುವುದು ಹಿನ್ನಡೆ ಉಂಟು ಮಾಡಿದೆ. ಇನ್ನು ಐದು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕಿದ್ದ ಯೋಜನೆ ಮತ್ತಷ್ಟು ಮುಂದಕ್ಕೆ ಹೋಗುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.