ADVERTISEMENT

ಮೆಟ್ರೊ ನಿಲ್ದಾಣಗಳ ಹೆಸರು ಅದಲು ಬದಲು: ಗೊಂದಲ

ಎಲೆಕ್ಟ್ರಾನಿಕ್‌ ಸಿಟಿ– ಕೋನಪ್ಪನ ಅಗ್ರಹಾರದಲ್ಲಿ ಗೊಂದಲ ಮೂಡಿಸುತ್ತಿರುವ ಬಿಎಂಟಿಸಿ–ಮೆಟ್ರೊ ನಿಲ್ದಾಣಗಳ ಭಿನ್ನ ನಾಮಫಲಕ

ಬಾಲಕೃಷ್ಣ ಪಿ.ಎಚ್‌
Published 8 ಆಗಸ್ಟ್ 2025, 23:20 IST
Last Updated 8 ಆಗಸ್ಟ್ 2025, 23:20 IST
ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ‘ಇನ್ಫೊಸಿಸ್‌ ಫೌಂಡೇಶನ್‌ ಕೋನಪ್ಪನ ಅಗ್ರಹಾರ’ ಮೆಟ್ರೊ ನಿಲ್ದಾಣ
ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ‘ಇನ್ಫೊಸಿಸ್‌ ಫೌಂಡೇಶನ್‌ ಕೋನಪ್ಪನ ಅಗ್ರಹಾರ’ ಮೆಟ್ರೊ ನಿಲ್ದಾಣ   

ಬೆಂಗಳೂರು: ‘ನಮ್ಮ ಮೆಟ್ರೊ’ ಹಳದಿ ಮಾರ್ಗದಲ್ಲಿ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ನಿಲ್ದಾಣಕ್ಕೆ ಕೋನಪ್ಪನ ಅಗ್ರಹಾರ ಎಂದೂ, ಕೋನಪ್ಪನ ಅಗ್ರಹಾರದ ನಿಲ್ದಾಣಕ್ಕೆ ಎಲೆಕ್ಟ್ರಾನಿಕ್‌ ಸಿಟಿ ನಿಲ್ದಾಣ ಎಂದೂ ಹೆಸರಿಟ್ಟಿರುವುದು ಗೊಂದಲಕ್ಕೆ ಕಾರಣವಾಗಿದೆ.

ಈ ಎರಡು ಮೆಟ್ರೊ ನಿಲ್ದಾಣಗಳಲ್ಲಿರುವ ಹೆಸರು ಮತ್ತು ಅಲ್ಲೇ ಪಕ್ಕದಲ್ಲಿರುವ ಬಿಎಂಟಿಸಿ ನಿಲ್ದಾಣಗಳಲ್ಲಿ ಇರುವ ಹೆಸರು ಅದಲು ಬದಲು ಇರುವುದು ಮೆಟ್ರೊ ಪ್ರಯಾಣ ಆರಂಭವಾದಾಗ ಪ್ರಯಾಣಿಕರನ್ನು ತಬ್ಬಿಬ್ಬುಗೊಳಿಸಲಿದೆ.

ರಾಷ್ಟ್ರೀಯ ವಿದ್ಯಾಲಯ–ಬೊಮ್ಮಸಂದ್ರ ಸಂಪರ್ಕಿಸುವ ನಮ್ಮ ಮೆಟ್ರೊ ಹಳದಿ ಮಾರ್ಗವು ಎಲೆಕ್ಟ್ರಾನಿಕ್‌ ಸಿಟಿಯನ್ನು ಹಾದು ಹೋಗುತ್ತದೆ. ಈ ಮಾರ್ಗಕ್ಕೆ ಆ.10ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. 

ADVERTISEMENT

ಇಲ್ಲಿವರೆಗೆ ಬಿಎಂಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿದ್ದವರು ಮೆಟ್ರೊದಲ್ಲಿ ಸಂಚರಿಸಲು ಆರಂಭಿಸಿದಾಗ ಹೆಸರುಗಳು ಗೊಂದಲ ಉಂಟುಮಾಡಲಿವೆ. ಆರ್‌ವಿ ರಸ್ತೆ ಕಡೆಯಿಂದ ಮೆಟ್ರೊದಲ್ಲಿ ಸಂಚರಿಸುವವರು ಇಲ್ಲಿವರೆಗಿನ ವಾಡಿಕೆಯಂತೆ ಎಲೆಕ್ಟ್ರಾನಿಕ್‌ ಸಿಟಿಗೆ ಟಿಕೆಟ್‌ ತೆಗೆದುಕೊಂಡರೆ ಇಳಿಯಬೇಕಾಗಿರುವುದಕ್ಕಿಂದ ಹೆಚ್ಚುವರಿಯಾಗಿ ಒಂದು ನಿಲ್ದಾಣಕ್ಕೆ ಪಾವತಿ ಮಾಡಿದಂತಾಗಲಿದೆ. ಅದೇ ರೀತಿ ಬಿಎಂಟಿಸಿ ಬಸ್‌ ನಿಲ್ದಾಣದ ನೆನಪಿನಲ್ಲಿ ಕೋನಪ್ಪನ ಅಗ್ರಹಾರಕ್ಕೆ ಮೆಟ್ರೊದಲ್ಲಿ ಟಿಕೆಟ್‌ ತೆಗೆದುಕೊಂಡರೆ ‘ಇನ್ಫೊಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ’ ಎಂದು  ಹೆಸರು ಇರುವ ಮೆಟ್ರೊ ನಿಲ್ದಾಣದಲ್ಲಿ ಇಳಿಯಬೇಕಿದೆ. ಇದು ನಿಜವಾದ ಕೋನಪ್ಪನ ಅಗ್ರಹಾರದಿಂದ ಹಿಂದಿನ ನಿಲ್ದಾಣವಾಗಿದೆ. ಅಲ್ಲಿಂದ ಮುಂದಕ್ಕೆ ಮತ್ತೆ ಟಿಕೆಟ್‌ ತೆಗೆದುಕೊಳ್ಳಬೇಕಿದೆ.

‘ಇದು ಎರಡೂ ಪ್ರಧಾನ ಜಂಕ್ಷನ್‌ಗಳಾಗಿರುವುದರಿಂದ ಪ್ರತಿದಿನ ಸಾವಿರಾರು ಪ್ರಯಾಣಿಕರಿಗೆ ಸಮಸ್ಯೆ ಉಂಟುಮಾಡಲಿದೆ. ಹೆಸರು ಅದಲು ಬದಲಾಗಿ ತಪ್ಪಾಗಿರುವ ಬಗ್ಗೆ ನಾನು ಬಿಎಂಆರ್‌ಸಿಎಲ್‌ಗೆ, ಇಎಲ್‌ಸಿಟಿಎಗೆ, ಇನ್ಫೊಸಿಸ್‌ ಫೌಂಡೇಷನ್‌ಗೆ ಇ–ಮೇಲ್‌, ‘ಎಕ್ಸ್‌’ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದೇನೆ. ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದನ ದೊರೆತಿಲ್ಲ’ ಎಂದು ಈ ಮಾರ್ಗದಲ್ಲಿ ಸಂಚರಿಸುವ ವಿದ್ಯಾರ್ಥಿ, ಆನೇಕಲ್‌ ತಾಲ್ಲೂಕು ಕಿತ್ತಿಗಾನಹಳ್ಳಿ ನಿವಾಸಿ ವಿಮಲ್‌ಕಾಂತ್‌ ಎಲ್‌. ತಿಳಿಸಿದರು.

‘ಆಯುರ್ವೇದ ಕಲಿಯುತ್ತಿರುವ ನಾನು, ಚಂದಾಪುರದಿಂದ ಕೆಂಗೇರಿಗೆ ನಿತ್ಯ ಬಿಎಂಟಿಸಿ ಬಸ್‌ನಲ್ಲಿ ಸಂಚರಿಸುತ್ತಿದ್ದೇನೆ. ಹೆಸರು ತಪ್ಪಾಗಿರುವುದು ನನ್ನ ಗಮನಕ್ಕೆ ಬಂದಿದೆ. ನೈಸ್‌ ರಸ್ತೆ, ಕೆಂಗೇರಿ, ಅತ್ತಿಬೆಲೆ ಸಹಿತ ವಿವಿಧೆಡೆಯಿಂದ ಬರುವ ಜನರು ಗೊಂದಲಕ್ಕೀಡಾಗಲಿದ್ದಾರೆ. ಹಾಗಾಗಿ ಬಿಎಂಆರ್‌ಸಿಎಲ್‌ನವರು ಹೆಸರು ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಕೋನಪ್ಪನ ಅಗ್ರಹಾರದಲ್ಲಿರುವ ‘ಎಲೆಕ್ಟ್ರಾನಿಕ್‌ ಸಿಟಿ’ ನಮ್ಮ ಮೆಟ್ರೊ ನಿಲ್ದಾಣ

ಎರಡೂ ಎಲೆಕ್ಟ್ರಾನಿಕ್‌ ಸಿಟಿಯಲ್ಲೇ ಇವೆ

ಎರಡೂ ನಿಲ್ದಾಣಗಳು ಎಲೆಕ್ಟ್ರಾನಿಕ್‌ ಸಿಟಿಯಲ್ಲಿಯೇ ಇವೆ. ಇನ್ಫೊಸಿಸ್‌ ಫೌಂಡೇಷನ್‌ ಇರುವಲ್ಲಿ ‘ಇನ್ಫೊಸಿಸ್‌ ಫೌಂಡೇಷನ್‌ ಕೋನಪ್ಪನ ಅಗ್ರಹಾರ’ ಎಂದು ಹೆಸರಿಡಲಾಗಿದೆ. ಇನ್ನೊಂದು ಭಾಗದಲ್ಲಿ ಇರುವ ನಿಲ್ದಾಣಕ್ಕೆ ಎಲೆಕ್ಟ್ರಾನಿಕ್‌ ಸಿಟಿ ಎಂದು ಹೆಸರಿಡಲಾಗಿದೆ. ಇದರಿಂದ ಪ್ರಯಾಣಿಕರಿಗೆ ಗೊಂದಲಗಳು ಆಗುವುದಿಲ್ಲ. ಅಲ್ಲದೇ ಹಿಂದೆ ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು ಇಟ್ಟಿರುವ ಹೆಸರುಗಳು ತಕ್ಷಣಕ್ಕೆ ಬದಲಾಯಿಸಲು ಆಗುವುದಿಲ್ಲ. ನಮ್ಮ ಮೆಟ್ರೊ ಪ್ರಯಾಣ ಆರಂಭವಾದಾಗ ಪ್ರಯಾಣಿಕರಿಗೆ ತಮ್ಮ ನಿಲ್ದಾಣಗಳ ಹೆಸರು ಗೊತ್ತಾಗುತ್ತದೆ’ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.