ADVERTISEMENT

ನಂದಿ ಬೆಟ್ಟ: ಮಳೆ ನೀರು ಸಂಗ್ರಹಕ್ಕೆ ಚೆಕ್‍ಡ್ಯಾಂ

ಮನೋಹರ್ ಎಂ.
Published 4 ಜೂನ್ 2020, 22:47 IST
Last Updated 4 ಜೂನ್ 2020, 22:47 IST
ನಂದಿ ಗಿರಿಧಾಮ
ನಂದಿ ಗಿರಿಧಾಮ   

ಬೆಂಗಳೂರು: ನಂದಿ ಗಿರಿಧಾಮದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿಯುವುದನ್ನು ತಡೆಯಲು ಖಾಸಗಿ ಸಂಸ್ಥೆಗಳ ಸಹಭಾಗಿತ್ವದಲ್ಲಿ ತೋಟಗಾರಿಕೆ ಇಲಾಖೆಯು ಅಲ್ಲಲ್ಲಿ ಸಣ್ಣ ಚೆಕ್ ಡ್ಯಾಂಗಳನ್ನು ನಿರ್ಮಿಸಲು ಮುಂದಾಗಿದೆ.

ಯುನೈಟೆಡ್ ವೇ ಸಂಸ್ಥೆ ಸಹಭಾಗಿತ್ವದಲ್ಲಿ ಗಿರಿಧಾಮದಲ್ಲಿ ಐದು ಇಳಿಜಾರು ಪ್ರದೇಶಗಳಲ್ಲಿ ಚೆಕ್‍ಡ್ಯಾಂ ನಿರ್ಮಾಣಕ್ಕೆ ಮುಂದಾಗಿದೆ. ಬೆಟ್ಟದ ಮೇಲೆ ಸುರಿಯುವ ಮಳೆ ನೀರನ್ನು ತಡೆದು ಅಲ್ಲೇ ಇಂಗಿಸಲು ಯೋಜನೆ ಕೈಗೊಳ್ಳಲಾಗಿದೆ.

‘ಪ್ರತಿ ವರ್ಷ ಬೆಟ್ಟದ ಮೇಲೆ ಸುರಿಯುತ್ತಿದ್ದ ಮಳೆ ನೀರು ಎಲ್ಲೂ ಸಂಗ್ರಹವಾಗದೆ ವ್ಯರ್ಥವಾಗಿ ಹರಿಯುತ್ತಿತ್ತು. ಚೆಕ್‍ಡ್ಯಾಂ ನಿರ್ಮಾಣದಿಂದ ಬೆಟ್ಟದಲ್ಲಿ ಮಳೆ ನೀರು ಸಂರಕ್ಷಣೆಯಾಗಲಿದೆ. ಇದರಿಂದ ಮಣ್ಣಿನ ತೇವಾಂಶ ದೀರ್ಘಕಾಲದವರೆಗೆ ಇರಲು ಸಹಕಾರಿಯಾಗಲಿದೆ. ಈಗಾಗಲೇ ಎರಡು ಡ್ಯಾಂಗಳ ಕಾಮಗಾರಿ ಪೂರ್ಣಗೊಂಡಿವೆ’ ಎಂದು ತೋಟಗಾರಿಕೆ ಇಲಾಖೆಯ ವಿಶೇಷ ಅಧಿಕಾರಿ ಎನ್.ಗೋಪಾಲ್ ತಿಳಿಸಿದರು.

ADVERTISEMENT

‘ಗಿರಿಧಾಮದಲ್ಲಿ ನೀರು ಇಂಗಿಸುವ ಸಲುವಾಗಿ 20 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದೆ. ಪ್ರತಿ ಗುಂಡಿಯಲ್ಲಿ
10 ಸಾವಿರ ಲೀಟರ್ ನೀರು ಇಂಗಿಸಲಾಗುತ್ತಿದೆ. ತೋಟಗಾರಿಕೆ ಇಲಾಖೆ ವತಿಯಿಂದ ₹15 ಲಕ್ಷ ವೆಚ್ಚದಲ್ಲಿ 6 ಅಡಿ ಅಗಲ ಹಾಗೂ 15 ಅಡಿ ಉದ್ದದ 40ಕ್ಕೂಹೆಚ್ಚು ಇಂಗುಗುಂಡಿಗಳನ್ನು ನಿರ್ಮಿಸಲಾಗುತ್ತಿದೆ’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ.ಜಗದೀಶ್ ತಿಳಿಸಿದರು.

ಪ್ಲಾಸ್ಟಿಕ್‍ಮುಕ್ತ ಗಿರಿಧಾಮ?
‘ಗಿರಿಧಾಮದಲ್ಲಿ ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿತ್ತು. ಲಾಕ್‍ಡೌನ್ ಜಾರಿಯಾದ ಬಳಿಕ ಮೂರು ತಿಂಗಳಿನಿಂದ ಇಲಾಖೆಯ ಐವರು ಸಿಬ್ಬಂದಿ ಬೆಟ್ಟದ ಮೂಲೆ ಮೂಲೆಯಲ್ಲಿದ್ದ ಪ್ಲಾಸ್ಟಿಕ್ ಸಂಗ್ರಹಿಸಿದ್ದಾರೆ. ಇದನ್ನು ಸಂಸ್ಕರಿಸಿ, ವಿಲೇವಾರಿ ಮಾಡಲಾಗುವುದು. ಶೇ 70 ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ತೆರವಾಗಿದ್ದು, ಶೀಘ್ರವೇ ‘ಪ್ಲಾಸ್ಟಿಕ್ ಮುಕ್ತ ನಂದಿಗಿರಿಧಾಮ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ' ಎಂದು ಎಂ.ಜಗದೀಶ್ ತಿಳಿಸಿದರು.

ಲಾಕ್‍ಡೌನ್‍ನಿಂದ ಆದಾಯಕ್ಕೂ ಪೆಟ್ಟು
‘ಲಾಕ್‍ಡೌನ್‍ನಿಂದ ನಂದಿ ಗಿರಿಧಾಮಕ್ಕೆ ಮೂರು ತಿಂಗಳಿನಿಂದ ಪ್ರವೇಶ ನಿರ್ಬಂಧಿಸಲಾಗಿದೆ. ವಾಹನಗಳ ನಿಲುಗಡೆ ಶುಲ್ಕ, ಪ್ರವಾಸಿಗರ ಪ್ರವೇಶ ಶುಲ್ಕ, ವಸತಿ ಗೃಹಗಳಿಂದ ಒಟ್ಟಾರೆ ತಿಂಗಳಿಗೆ ₹20 ಲಕ್ಷ ಆದಾಯ ಬರುತ್ತಿತ್ತು. ಲಾಕ್‍ಡೌನ್‍ನಿಂದ ಗಿರಿಧಾಮದ ಆದಾಯಕ್ಕೂ ಪೆಟ್ಟುಬಿದ್ದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.