ADVERTISEMENT

ಪರಿಷತ್‌ನಲ್ಲಿ ಮತ್ತೆ ಪ್ರತಿಧ್ವನಿಸಿದ ನೈಸ್‌ ಅಕ್ರಮ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 20:10 IST
Last Updated 22 ಮಾರ್ಚ್ 2022, 20:10 IST
ನೈಸ್ ರಸ್ತೆ
ನೈಸ್ ರಸ್ತೆ   

ಬೆಂಗಳೂರು: ‘ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌’ (ನೈಸ್) ಸಂಸ್ಥೆಯ ಬೆಂಗಳೂರು– ಮೈಸೂರು ಹೆದ್ದಾರಿ ಯೋಜನೆಯ (ಬಿಎಂಐಸಿಎಲ್‌) ಅಕ್ರಮ ವಿಧಾನ ಪರಿಷತ್‌ನಲ್ಲಿ ಮತ್ತೆ ಪ್ರತಿಧ್ವನಿಸಿದೆ.

ವಿಷಯ ಪ್ರಸ್ತಾಪಿಸಿದ ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ, ‘ರಾಜ್ಯ ಸರ್ಕಾರದ ಅನುದಾನ ನೀಡದ ಯೋಜನೆ ಇದಾಗಿದ್ದು, ಪರ್ಯಾಯವಾಗಿ ಐದು ಕಡೆ ಟೌನ್‌ಶಿಪ್‌ ನಿರ್ಮಾಣಕ್ಕೆ ಸರ್ಕಾರ ಭೂಮಿ ನೀಡಬೇಕು ಎಂದು ತೀರ್ಮಾನವಾಗಿತ್ತು. ಯೋಜನೆಗೆ ಅನಗತ್ಯವಾಗಿ ಸುಮಾರು 9 ಸಾವಿರ ಎಕರೆ ಭೂಮಿ ಹೆಚ್ಚುವರಿಯಾಗಿ ನೀಡಲಾಗಿದೆ. ಈ ಅಕ್ರಮದ ಬಗ್ಗೆ ಜಂಟಿ ಸದನ ಸಮಿತಿ ವರದಿ ನೀಡಿದ್ದರೂ ಶಿಫಾರಸುಗಳು ಜಾರಿ ಆಗಿಲ್ಲ’ ಎಂದರು.

‘ನೈಸ್ ರಸ್ತೆಯಲ್ಲಿ 2008ರಿಂದಲೂ ಟೋಲ್ ಸಂಗ್ರಹಿಸಲಾಗುತ್ತಿದೆ. 2021ರಲ್ಲಿ ವೈಟ್ ಟ್ಯಾಪಿಂಗ್ ಮಾಡಲಾಗಿದೆ. ನಿತ್ಯ 10 ಸಾವಿರಕ್ಕೂ ಹೆಚ್ಚು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ ಕಂಪನಿ ಕಾಂಕ್ರೀಟ್ ರಸ್ತೆ ಮಾಡಿಲ್ಲ. ಆದರೆ, ಅದೇ ಆಧಾರದಲ್ಲಿ ಎರಡು ವರ್ಷಕ್ಕೊಮ್ಮೆ ಟೋಲ್ ಮೊತ್ತ ಹೆಚ್ಚಿಸಲಾಗುತ್ತಿದೆ. ಯೋಜನೆಯಲ್ಲಿ ವಂಚನೆ ನಡೆದಿದ್ದು, ಈ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಆಗ್ರಹಿಸಿದರು.

ADVERTISEMENT

ಜೆಡಿಎಸ್‌ನ ಮತ್ತೊಬ್ಬ ಸದಸ್ಯ ಎಸ್‌.ಎಲ್‌. ಭೋಜೇಗೌಡ, ‘ನೈಸ್ ಕಥೆ ಹಾರುವ ಮಗನಿಗೆ ಏಣಿ ಹಾಕಿಕೊಟ್ಟಂತಾಗಿದೆ. ಮೊದಲೇ ಭ್ರಷ್ಟಾಚಾರದಲ್ಲಿ ತೊಡಗಿದ್ದ ಸಂಸ್ಥೆಗೆ ಏಜೆನ್ಸಿಗಳು ಅವಕಾಶ ಮಾಡಿಕೊಟ್ಟಿವೆ’ ಎಂದು ದೂರಿದರು.

‘ಯೋಜನೆಗೆ ಸಂಬಂಧಿಸಿದಂತೆ ವಿವಿಧ ನ್ಯಾಯಾಲಯಗಳಲ್ಲಿದ್ದ ಪ್ರಕರಣಗಳು ಇತ್ಯರ್ಥವಾಗಿವೆ. ಅಗತ್ಯ ಮೂಲಸೌಕರ್ಯ ಒದಗಿಸದಿದ್ದರೂ ನೈಸ್ ಸಂಸ್ಥೆ ಪ್ರತಿದಿನ ನೂರಾರು ಕೋಟಿ ಟೋಲ್ ಸಂಗ್ರಹಿಸುತ್ತಿದೆ. ಆದಾಯ ಹೆಚ್ಚಿಸಿಕೊಳ್ಳುವ ನೈಸ್‌ನಿಂದಾಗಿ ಸರ್ಕಾರಕ್ಕೆ ಏನು ಸಿಕ್ಕಿದೆ? ಈ ಯೋಜನೆಯಲ್ಲಿ ದೇವೇಗೌಡರಿಂದ ಯಾವುದೇ ಅಕ್ರಮ ಆಗಿಲ್ಲ. ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಸಂಪುಟ ಉಪ ಸಮಿತಿ ನೀಡಿರುವ ವರದಿಯನ್ನು ಅಧಿಕಾರಿಗಳು ನೀಡಬೇಕು’ ಎಂದರು ಒತ್ತಾಯಿಸಿದರು.

ಈ ವಿಷಯದ ಚರ್ಚೆ ಬುಧವಾರವೂ ಮುಂದುವರಿಯಲಿದೆ. ಚರ್ಚೆಯ ಬಳಿಕ ಉತ್ತರ ನೀಡುವುದಾಗಿ ಕೈಗಾರಿಕಾ ಸಚಿವ ಮುರುಗೇಶ್‌ ನಿರಾಣಿ ಮತ್ತು ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.