ADVERTISEMENT

ಬೆಂಗಳೂರಿನ ಹಲವೆಡೆ ಏಕಾಏಕಿ ಮಾರಾಟ ಸ್ಥಗಿತ: ಸಿಗುತ್ತಿಲ್ಲ ನಂದಿನಿ ಸಮೃದ್ಧಿ ಹಾಲು

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2025, 23:04 IST
Last Updated 5 ಅಕ್ಟೋಬರ್ 2025, 23:04 IST
ನಂದಿನಿ ಸಮೃದ್ಧಿ ಹಾಲು
ನಂದಿನಿ ಸಮೃದ್ಧಿ ಹಾಲು   

ಬೆಂಗಳೂರು: ನಗರದ ಹಲವು ಭಾಗಗಳಲ್ಲಿ ನಂದಿನಿ ಸಮೃದ್ಧಿ( ನೇರಳೆ ಪ್ಯಾಕೇಟ್‌) ಹಾಲು ಸರಬರಾಜು ಸ್ಥಗಿತಗೊಂಡಿದೆ. ಮೈಸೂರು ಸಹಿತ ಇತರೆ ಭಾಗಗಳಲ್ಲಿ ಸಮೃದ್ಧಿ ಹಾಲು ಮಾರಾಟಕ್ಕಾಗಿ ರಿಯಾಯಿತಿಯನ್ನು ಘೋಷಿಸಲಾಗಿದೆ.

ಗ್ರಾಹಕರಿಂದ ನಿರೀಕ್ಷೆಯಷ್ಟು ಪ್ರತಿಕ್ರಿಯೆ ಬಾರದೇ ಇರುವುದರಿಂದ ಸಮೃದ್ಧಿ ಹಾಲು ಸರಬರಾಜು ಕಡಿಮೆ ಮಾಡಲಾಗಿದೆ ಎಂದು ಕರ್ನಾಟಕ ಹಾಲು ಮಹಾಮಂಡಲ ಹೇಳಿದೆ. ಆದರೆ, ಕೆಲ ವರ್ಷದಿಂದ ಬಳಕೆ ಮಾಡುತ್ತಿರುವವರಿಗೂ ನಂದಿನಿ ಮಳಿಗೆಗಳು ಹಾಗೂ ಮಾರಾಟಗಾರರ ಬಳಿ ಸಮೃದ್ಧಿ ಹಾಲು ಸಿಗುತ್ತಿಲ್ಲ ಎನ್ನುವ ಅಭಿಪ್ರಾಯ ಕೇಳಿಬಂದಿದೆ.

ಬೆಂಗಳೂರು ನಗರ ಮಾತ್ರವಲ್ಲದೇ ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಂದಿನಿ ಸಮೃದ್ಧಿ ಹಾಲು ಬೇಡಿಕೆಯಷ್ಟು ಸಿಗುತ್ತಿಲ್ಲ. ಬೆಂಗಳೂರಿನ ಕೆಲವು ಭಾಗಗಳಲ್ಲಿ ಮೂರ್ನಾಲ್ಕು ದಿನಗಳಿಂದ ಸಮೃದ್ಧಿ ಹಾಲು ಸರಬರಾಜು ನಿಲ್ಲಿಸಲಾಗಿದೆ. ಇದರಿಂದ ಇದೇ ಹಾಲು ಬಳಸುವವರು ಪರದಾಡುವ ಸನ್ನಿವೇಶ ನಿರ್ಮಾಣವಾಗಿದೆ.

ADVERTISEMENT

ಸಮೃದ್ಧಿ ಪಾಶ್ಚರೀಕರಿಸಿದ ಕೆನೆಭರಿತ ಹಾಲನ್ನು ಕ್ರೀಮ್‌ ಹಾಲು ಎಂದೂ ಕರೆಯಲಾಗುತ್ತದೆ. ಗಟ್ಟಿಯಾದ ಈ ಹಾಲು ಕನಿಷ್ಠ ಶೇ 6ರಷ್ಟು ಜಿಡ್ಡಿನ ಅಂಶ ಹಾಗೂ ಕನಿಷ್ಠ ಶೇ 9ರಷ್ಟು ಎಸ್.ಎನ್.ಎಫ್(ಘನವಲ್ಲದ ಕೊಬ್ಬು) ಹೊಂದಿದೆ. ಇದನ್ನು ಪಾಯಸ, ಸಿಹಿ ಉತ್ಪನ್ನಗಳ ಜತೆಗೆ ಇತರೆ ಹಾಲಿನ ಉತ್ಪನ್ನಗಳನ್ನು ತಯಾರಿಸಲು ಬಳಸಬಹುದಾಗಿದೆ. ನಂದಿನಿ ಕೆನೆಭರಿತ ಹಾಲು ರುಚಿಕರ, ಸ್ವಾದಿಷ್ಟವೂ ಆಗಿದೆ. ಕಾಫಿ ಮತ್ತು ಗಟ್ಟಿ ಮೊಸರು ತಯಾರಿಕೆಗೂ ಈ ಹಾಲು ಬಳಕೆಯಾಗುತ್ತಿದೆ.

ಸಮೃದ್ಧಿ ಹಾಲಿನ ಸಂಗ್ರಹಣೆ ಜತೆಗೆ ಇದನ್ನು ಪರಿಷ್ಕರಿಸಿ ನೀಡಲು ಹೆಚ್ಚಿನ ವೆಚ್ಚ ಆಗುತ್ತಿದೆ. ಇದರ ಖರೀದಿ ಪ್ರಮಾಣವೂ ಕಡಿಮೆಯಿದೆ. ಹಾಲು ಬಳಕೆಯಾಗದೇ ವೆಚ್ಚ ಹೆಚ್ಚಳವಾಗಿ ನಷ್ಟವಾಗುವುದನ್ನು ತಪ್ಪಿಸಲು ಸರಬರಾಜು ಕಡಿಮೆ ಮಾಡಲಾಗುತ್ತಿದೆ ಎನ್ನಲಾಗಿದೆ.

‘ಬೆಂಗಳೂರು, ಮೈಸೂರು ಮಾತ್ರವಲ್ಲದೇ ಶಿವಮೊಗ್ಗ, ದಕ್ಷಿಣ ಕನ್ನಡ, ಹಾಸನ, ತುಮಕೂರು ಸಹಿತ ಹಲವು ಭಾಗಗಳಲ್ಲಿ ಸಮೃದ್ಧಿ ಬಳಕೆ ಮಾಡುತ್ತಾರೆ.‌ ಮೊದಲಿನಿಂದಲೂ ಸಮೃದ್ಧಿ ಹಾಲನ್ನೇ ಬಳಸುವವರು ಇದನ್ನು ಕೇಳಿ, ಖರೀದಿಸುತ್ತಾರೆ. ಆದರೆ, ಉತ್ತರ ಕರ್ನಾಟಕದ ಭಾಗಗಳಲ್ಲಿ ಎಮ್ಮೆಯ ಹಾಲಿನ ಬಳಕೆ ಪ್ರಮಾಣ ಹೆಚ್ಚಿರುವುದರಿಂದ ಅಲ್ಲಿ ಸಮೃದ್ಧಿ ಹಾಲು ಖರೀದಿ ಪ್ರಮಾಣ ಹೆಚ್ಚಿದೆ’ ಎಂದು ಹಾಲು ಮಹಾಮಂಡಳದ ಅಧಿಕಾರಿಯೊಬ್ಬರು ತಿಳಿಸಿದರು.

‘ಬೆಂಗಳೂರಿನಲ್ಲಿ ನಮಗೆ ಸಮೃದ್ಧಿ ಹಾಲು ಸಿಗುತ್ತಿಲ್ಲ. ಕಾರಣ ಕೇಳಿದರೂ ಹೇಳುತ್ತಿಲ್ಲ. ಬೇರೆ ಹಾಲು ತೆಗೆದುಕೊಳ್ಳುವಂತಾಗಿದೆ. ವರ್ಷಗಳಿಂದ ಬಳಸುತ್ತಿದ್ದ ಕೆನೆಭರಿತ ಹಾಲು ಎಲ್ಲಾ ಕಡೆ ಸಿಗುವಂತೆ ಮಾಡಬೇಕು’ ಎಂದು ಮಹಾಲಕ್ಷ್ಮಿ ಲೇಔಟ್‌ ಗ್ರಾಹಕರೊಬ್ಬರು ಹೇಳಿದರು.

ಮೈಸೂರಲ್ಲಿ ರಿಯಾಯಿತಿ

ವಿಜಯಪುರದಲ್ಲಿ ಪುನರಾರಂಭ ಮೈಸೂರು ಹಾಲು ಒಕ್ಕೂಟವು ಸಮೃದ್ಧಿ ಹಾಲು ಬಳಕೆ ಪ್ರೋತ್ಸಾಹಿಸಲು ರಿಯಾಯಿತಿಯನ್ನೂ ಘೋಷಿಸಿದೆ. ಹಾಲಿನ ಎಂಆರ್‌ಪಿ ದರದ ಮೇಲೆ ಶೇ 10ರಷ್ಟನ್ನು ಕಡಿತ ಮಾಡಲಾಗಿದೆ.  ‘ವಿಜಯಪುರ– ಬಾಗಲಕೋಟೆ ಹಾಲು ಒಕ್ಕೂಟವು ಸಮೃದ್ಧಿ ಹಾಲು ಮಾರಾಟವನ್ನು ತಾಂತ್ರಿಕ ಕಾರಣದಿಂದ ಸ್ಥಗಿತಗೊಳಿಸಿತ್ತು. ಕೆಲವು ದಿನಗಳ ನಂತರ ಪುನಾರಂಭಗೊಳಿಸಲಾಗಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ಶಿವಶಂಕರಸ್ವಾಮಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.