ADVERTISEMENT

ನೇಪಿಯರ್ ಹುಲ್ಲು: ಮೇವಿಗೂ ಸೈ, ಇಂಧನಕ್ಕೂ ಜೈ

ಖಲೀಲಅಹ್ಮದ ಶೇಖ
Published 17 ಸೆಪ್ಟೆಂಬರ್ 2025, 23:30 IST
Last Updated 17 ಸೆಪ್ಟೆಂಬರ್ 2025, 23:30 IST
ಜಿಕೆವಿಕೆ ಆವರಣದಲ್ಲಿ ನೇಪಿಯರ್‌–ಪಿಬಿಎನ್‌–342 ತಳಿಯನ್ನು ಬೆಳೆಯಲಾಗಿದೆ
ಜಿಕೆವಿಕೆ ಆವರಣದಲ್ಲಿ ನೇಪಿಯರ್‌–ಪಿಬಿಎನ್‌–342 ತಳಿಯನ್ನು ಬೆಳೆಯಲಾಗಿದೆ   

ಬೆಂಗಳೂರು: ಜೈವಿಕ ಇಂಧನ ಬಳಕೆಗೆ ಕಚ್ಚಾ ವಸ್ತುವನ್ನಾಗಿ ಬಳಕೆ ಮಾಡುವ ನೇಪಿಯರ್‌ ಹುಲ್ಲಿನ ಸುಧಾರಿತ ತಳಿಯನ್ನು ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ಅಭಿವೃದ್ಧಿಪಡಿಸುತ್ತಿದೆ.   

ದೇಶದಲ್ಲಿ ಜೈವಿಕ ಇಂಧನ ಮೂಲಗಳಿಗೆ ಹೆಚ್ಚಿನ ಬೇಡಿಕೆ ಇದೆ. ಜೈವಿಕ ಇಂಧನ ಉತ್ಪಾದಿಸಲು ನೇಪಿಯರ್‌ ಹುಲ್ಲನ್ನು ಕಚ್ಚಾವಸ್ತುವನ್ನಾಗಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಜೈವಿಕ ಇಂಧನ ಉತ್ಪಾದನೆಗೆ ಸಹಾಯಕವಾಗುವ ಲಿಗ್ನಿನೋ ಸಿಲ್ಯುಲೋಸ್‌ ಎಂಬ ಅಂಶ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. 

‘ಜಾಗತಿಕವಾಗಿ ಕಚ್ಚಾತೈಲದ ಬೆಲೆ ತುಟ್ಟಿಯಾಗುತ್ತಿದೆ. ನೇಪಿಯರ್‌ ಹುಲ್ಲು ಸಾಂದ್ರೀಕೃತ ನೈಸರ್ಗಿಕ ಅನಿಲಕ್ಕೆ (ಸಿಎನ್‌ಜಿ) ಪರ್ಯಾಯವಾಗಿದೆ. ಇದು ಜೈವಿಕ ಇಂಧನದ ಉತ್ಪಾದನೆಗೆ ಒಂದು ಉತ್ತಮ ಕಚ್ಚಾ ವಸ್ತುವಾಗಿದೆ. ಈ ಹುಲ್ಲಿನಿಂದ ಜೈವಿಕ ಅನಿಲವನ್ನು ಉತ್ಪಾದಿಸುವ ಮೂಲಕ ದೇಶದ ಇಂಧನದ ಭದ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಗ್ರಾಮೀಣ ಭಾಗದಲ್ಲಿ ಉದ್ಯೋಗಗಳು ಸೃಷ್ಟಿ ಆಗುತ್ತವೆ. ಜೊತೆಗೆ ಇಂಗಾಲದ ಹೊರಸೂಸುವಿಕೆ ಕಡಿಮೆಗೊಳಿಸಿ, ರೈತರ ಆದಾಯವನ್ನು ಹೆಚ್ಚಿಸುತ್ತದೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ ತಿಳಿಸಿದರು.  

ADVERTISEMENT

‘ಕೇಂದ್ರ ಸರ್ಕಾರವು 2025ರ ಡಿಸೆಂಬರ್‌ನೊಳಗೆ ನೇಪಿಯರ್‌ ಹುಲ್ಲಿನಿಂದ ಜೈವಿಕ ಇಂಧನ ಉತ್ಪಾದಿಸುವ 5 ಸಾವಿರಕ್ಕೂ ಹೆಚ್ಚು ಸಿಎನ್‌ಜಿ ಸಂಸ್ಕರಣ ಘಟಕಗಳನ್ನು ಸ್ಥಾಪಿಸುವ ಗುರಿ ಹೊಂದಿದೆ. ಇದನ್ನು ದ್ವಿಚಕ್ರ ವಾಹನಗಳು ಮತ್ತು ಕಾರುಗಳ ಲಘು ಎಂಜಿನ್‌ ವಾಹನಗಳಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತದೆ. ಇದು ಸಾಂಪ್ರದಾಯಿಕ ಪೆಟ್ರೋಲ್, ಡೀಸೆಲ್‌ಗಿಂತ ಅಗ್ಗವಾಗಿದೆ’ ಎಂದು ವಿವರಿಸಿದರು. 

‘ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು 2024ರಲ್ಲಿ ನೇಪಿಯರ್‌–ಪಿಬಿಎನ್‌–342 ತಳಿಯನ್ನು ಅಭಿವೃದ್ಧಿಪಡಿಸಿ, ಬಿಡುಗಡೆಗೊಳಿಸಿದೆ. ಇದು ಪ್ರತಿ ಹೆಕ್ಟೇರ್‌ಗೆ 150ರಿಂದ 180 ಟನ್‌ವರೆಗೆ ಇಳುವರಿ ನೀಡುತ್ತಿದೆ. ವಿಶ್ವವಿದ್ಯಾಲಯದ ಮೇವು ವಿಭಾಗದ ವಿಜ್ಞಾನಿಗಳು ಇಂಧನ ಉತ್ಪಾದಿಸುವ ಸಲುವಾಗಿ ಹೆಚ್ಚು ಇಳುವರಿ ನೀಡುವ ನೇಪಿಯರ್‌ ತಳಿಯ ಸಂಶೋಧನೆಯಲ್ಲಿ ನಿರತರಾಗಿದ್ದಾರೆ’ ಎಂದು ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ನಿರ್ದೇಶಕ ಎಚ್.ಎಸ್. ಶಿವರಾಮು ಹಾಗೂ ಮೇವು ವಿಭಾಗದ ವಿಜ್ಞಾನಿ ಮೋಹನ್‌ ಕುಮಾರ್‌ ಆರ್‌. ತಿಳಿಸಿದರು. 

‘ನೇಪಿಯರ್ ಹುಲ್ಲನ್ನು ಒಂದು ವರ್ಷದಲ್ಲಿ ನಾಲ್ಕು ಬಾರಿ ಕೊಯ್ಲು ಮಾಡಬಹುದು. ಇದು ಸ್ಥಳೀಯವಾಗಿ ಬೆಳೆಯಬಹುದಾದ ಮತ್ತು ಸುಸ್ಥಿರವಾಗಿ ಲಭ್ಯವಿರುವ ಸಂಪನ್ಮೂಲವಾಗಿದೆ. ಈ ಹುಲ್ಲನ್ನು ಕೃಷಿ ಭೂಮಿಯಲ್ಲಿ ಬೆಳೆಯುವುದರಿಂದ ಮಣ್ಣಿನ ಸವೆತವನ್ನು ತಡೆಯಬಹುದು ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಬಹುದು’ ಎಂದರು. 

ಗ್ರಾಮೀಣ ಪ್ರದೇಶಗಳಲ್ಲಿ ಜೈವಿಕ ಅನಿಲ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದರಿಂದ ಉದ್ಯೋಗ ಅವಕಾಶಗಳು ಸೃಷ್ಟಿಯಾಗುತ್ತವೆ. ನೇಪಿಯರ್‌ ಬೆಳೆಯುವ ರೈತರಿಗೆ ಇದು ಹೆಚ್ಚುವರಿ ಆದಾಯವನ್ನು ತಂದುಕೊಡಲಿದೆ. ಈ ಬೆಳೆಯನ್ನು ವಾರ್ಷಿಕ 300ರಿಂದ 400 ಟನ್‌ವರೆಗೂ ಬೆಳೆಯಬಹುದು’ ಎಂದು ಹೇಳಿದರು.  

‘1 ಟನ್‌ ಹುಲ್ಲಿನಿಂದ 63 ಕೆ.ಜಿ. ಸಿಎನ್‌ಜಿ’

‘ಸಿಎನ್‌ಜಿ ತಯಾರಿಸಲು ಸಸ್ಯ ಭಾಗಗಳನ್ನು ಆಮ್ಲಜನಕರಹಿತವಾದ ಹುದುಗುವಿಕೆಗೆ ಒಳಪಡಿಸಲಾಗುತ್ತದೆ. ನಂತರ ಇದರಲ್ಲಿ ಉತ್ಪಾದನೆಗೊಂಡ ಅನಿಲ ರೂಪದ ಇಂಧನವನ್ನು ಶುದ್ಧೀಕರಿಸಿ ಶೇಖರಿಸಲಾಗುತ್ತದೆ. ನಿರ್ದಿಷ್ಟ ಪ್ರಮಾಣದ ಸಿಎನ್‌ಜಿ ತಯಾರಿಸಲು ಈ ಹಿಂದೆ ಬಳಕೆಯಾಗುತ್ತಿದ್ದ ಸಸ್ಯಜನ್ಯ ಉತ್ಪನ್ನಗಳಿಗಿಂತ ಕಡಿಮೆ ಪ್ರಮಾಣದ ನೇಪಿಯರ್‌ ಹುಲ್ಲು ಆಧಾರಿತ ಕಚ್ಚಾ ಉತ್ಪನ್ನ ಅಗತ್ಯವಿರುತ್ತದೆ. ಒಂದು ಟನ್‌ ನೇಪಿಯರ್‌ ಹುಲ್ಲಿನಿಂದ ಸುಮಾರು 150 ಘನ ಮೀಟರ್‌ (63 ಕೆ.ಜಿ.) ಸಿಎನ್‌ಜಿ ತಯಾರಿಸಬಹುದು’ ಎಂದು ಎಸ್.ವಿ. ಸುರೇಶ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸಕ್ತ ರೈತರು ಉದ್ಯಮಿಗಳು ಹಾಗೂ ಸಂಘ–ಸಂಸ್ಥೆಗಳು ನೇಪಿಯರ್‌ ಹುಲ್ಲು ಬೆಳೆಯುವ ತಾಂತ್ರಿಕ ಮಾಹಿತಿಗೆ ಜಿಕೆವಿಕೆ ಆವರಣದಲ್ಲಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಮೇವು ಬೆಳೆ ವಿಭಾಗವನ್ನು ಸಂಪರ್ಕಿಸಬಹುದು’ ಎಂದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.