
ಬೆಂಗಳೂರು: ಕರ್ನಾಟಕ ನಾಟಕ ಅಕಾಡೆಮಿ ಮತ್ತು ನವದೆಹಲಿಯ ರಾಷ್ಟ್ರೀಯ ನಾಟಕ ಶಾಲೆ ಜಂಟಿಯಾಗಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಮಾಧ್ಯಮ ಸಹಯೋಗದಲ್ಲಿ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಹಮ್ಮಿಕೊಂಡಿದ್ದ ಆರು ದಿನಗಳ ‘ಭಾರತ ರಂಗ ಮಹೋತ್ಸವ’ ಹಾಗೂ ‘ರಂಗ ಪರಿಷೆ’ಯು ಶುಕ್ರವಾರ ಸಂಪನ್ನವಾಯಿತು.
ಕೊನೆಯ ದಿನದ ಕಾರ್ಯಕ್ರಮದಲ್ಲಿ ರಂಗಕರ್ಮಿ ವಾಲ್ಟರ್ ಡಿಸೋಜಾ ಅವರಿಗೆ ‘ಉತ್ಸವ ಗೌರವ’ ನೀಡಿ ಸನ್ಮಾನಿಸಲಾಯಿತು. 40 ವರ್ಷ ಪೂರೈಸಿರುವ ಧಾರವಾಡದ ಅಭಿನಯ ಭಾರತಿ ತಂಡಕ್ಕೆ ‘ರಂಗ ಗೌರವ’ ಪ್ರದಾನ ಮಾಡಲಾಯಿತು.
ಈ ವೇಳೆ ಮಾತನಾಡಿದ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ, ‘ರಂಗಕರ್ಮಿಗಳು ಜಾಗೃತವಾಗುವ, ನಿಜವಾದ ರಾಜಕಾರಣದ ಬಗ್ಗೆ ಮಾತನಾಡುವ ಕಾಲ ಇದಾಗಿದೆ. ಚಿತ್ರಸಂತೆಯಂತೆ ರಂಗ ಪರಿಷೆ ನಿರಂತರ ನಡೆಯಬೇಕು’ ಎಂದರು.
ವೃತ್ತಿ ನಾಟಕ ಕಂಪನಿ ಮಾಲೀಕ ಶೇಖ್ ಮಾಸ್ತರ್, ‘ರಂಗಭೂಮಿಗೆ ತನ್ನದೇ ಆದ ತಾಕತ್ತಿದೆ. ವೃತ್ತಿ ರಂಗಭೂಮಿಯಿಂದ ಮೇರು ನಟರು ಹೊರಹೊಮ್ಮಿದ್ದಾರೆ. ರಾಜ್ಯದ ವಿವಿಧೆಡೆ ಈ ಪರಿಷೆ ನಡೆಯುವಂತಾಗಬೇಕು’ ಎಂದು ಹೇಳಿದರು.
ನಟ ‘ದುನಿಯಾ’ ವಿಜಯ್, ಕಲಾವಿದೆ ಸುಮತಿಶ್ರೀ, ಮೈಸೂರು ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು, ಚಲನಚಿತ್ರ ನಿರ್ದೇಶಕ ಜಡೇಶ್ ಹಂಪಿ, ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಕೆ.ವಿ. ನಾಗರಾಜಮೂರ್ತಿ, ರಿಜಿಸ್ಟ್ರಾರ್ ನೀಲಮ್ಮ ಪಾಲ್ಗೊಂಡಿದ್ದರು.
ಮೈಸೂರು ರಂಗಾಯಣದ ಕಲಾವಿದರಿಂದ ‘ಅಂಬೇಡ್ಕರ್ ಕೊಲಾಜ್’, ಹಸ್ಮಿ ಥಿಯೇಟರ್ ಫೋರಂ ತಂಡದಿಂದ ‘ಮ್ಯಾಡ್ ಉಮೆನ್ ಆಫ್ ಶಯೋ’ ಮತ್ತು ಯುವ ರಂಗ ಸಂಭ್ರಮದಲ್ಲಿ ಅಭಿನಯ ತರಂಗದಿಂದ ‘ತಾರಾ’ ನಾಟಕಗಳು ಪ್ರದರ್ಶನಗೊಂಡವು.
ರಂಗಪಯಣ ಮತ್ತು ದೃಶ್ಯ ಕಾವ್ಯ ತಂಡವು ರಂಗಗೀತೆಗಳನ್ನು ಪ್ರಸ್ತುತಪಡಿಸಿದವು. ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ಬಿಂಬ ರಾಘವೇಂದ್ರ ಮತ್ತು ತಂಡದಿಂದ ಹಮ್ಮಿಕೊಳ್ಳಲಾಗಿದ್ದ ವೀಣಾ ವಾದನ ನೆರೆದಿದ್ದವರನ್ನು ರಂಜಿಸಿತು.
ಇದಕ್ಕೂ ಮೊದಲು ‘ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಶತಮಾನೋತ್ಸವ ಸಂಭ್ರಮ ಕವಿಗೋಷ್ಠಿ’ ನಡೆಯಿತು. ರಾಜಶೇಖರ್ ಮಠಪತಿ ಅವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಲ್ಲಿಕಾರ್ಜುನ ಮಹಾಮನೆ ಅವರು ಉಪನ್ಯಾಸ ನೀಡಿದರು. ಕಾಂತರಾಜಪುರ ಸುರೇಶ, ಕರಿಯಣ್ಣ ನಿಷಾದ, ಮಂಜುಳ ಬಿ.ವಿ., ಜಯಮಾಲಾ ಮಾಲ, ರೈಗಾ ಥಾಮಸ್, ವಿ. ಮಂಜುಳಾ ಪಾಟೀಲ, ಸುಮನಾ ಸೊರಬ, ಅನಿತಾ ಚಿಕ್ಕಡಂಕಣಕಲ್, ಕೆ.ಎಸ್. ಯುಕ್ತಿ, ದೇವರಾಜ್ ಆರ್. ಮತ್ತು ಕಿರಣ್ ಭಟ್ ಅವರು ಕವಿಗೋಷಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.