ಬೆಂಗಳೂರು: ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನಕ್ಕೆ ಸ್ಥಳಾಂತರಗೊಂಡಿದ್ದ ತಾತ್ಕಾಲಿಕ ತರಕಾರಿ ಮಾರುಕಟ್ಟೆಯನ್ನು ಸದ್ಯಕ್ಕೆ ನ್ಥಗಿತಗೊಳಿಸದ ಪರಿಣಾಮ ಸ್ಥಳೀಯ ನಿವಾಸಿಗಳು ನಿರಾಳರಾಗಿದ್ದಾರೆ.
ಕೊರೊನಾ ನೋಂಕು ಹರಡುವಿಕೆಯನ್ನು ತಡೆಯುವ ಉದ್ದೇಶದಿಂದ ಬಿಬಿಎಂಪಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿತ್ತು. ಸೂಕ್ತವಾಗಿ ಗುರುತುಗಳನ್ನು ಹಾಕದ ಪರಿಣಾಮ ವ್ಯಾಪಾರಿಗಳು ಹಾಗೂ ಗ್ರಾಹಕರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡಿರಲಿಲ್ಲ. ಇದರಿಂದ ಸೋಂಕು ಹರಡುವ ಭೀತಿ ಉಂಟಾಗಿತ್ತು. ಈ ಬಗ್ಗೆ ‘ಪ್ರಜಾವಾಣಿ’ ಶನಿವಾರ ಬೆಳಿಗ್ಗೆಯೇ ಆನ್‌ಲೈನ್ ಆವೃತ್ತಿಯಲ್ಲಿ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಮಾರಾಟವನ್ನು ಸ್ಥಗಿತಗೊಳಿಸಿ, ಮೂಲಸೌಕರ್ಯ ಒದಗಿಸುವವರೆಗೂ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಾಲಿಕೆ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದರು.
ಹಳೆ ಬೆಂಗಳೂರಿನ ಹೃದಯ ಭಾಗವಾದ ಬಸವನಗುಡಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿರಿಯ ನಾಗರಿಕರು ವಾಸಿಸುತ್ತಿದ್ದಾರೆ. ಮಾರುಕಟ್ಟೆಗೆ ಬಂದವರು ಸಾಮಾಜಿಕ ಅಂತರ ಕಾಯ್ದುಕೊಳ್ಳದ ಪರಿಣಾಮ ಸೋಂಕು ಸಮುದಾಯಕ್ಕೆ ಹರಡುವ ಆತಂಕ ಬಹುತೇಕರಲ್ಲಿ ಮನೆ ಮಾಡಿತ್ತು. ತರಕಾರಿಗಳನ್ನು ಖರೀದಿಸಲು ಬಂದವರೂ ಭಯದಲ್ಲಿಯೇ ಮನೆಗಳಿಗೆ ತೆರಳಿದ್ದರು.
ಮೈದಾನ ಬಣ ಬಣ: ಶನಿವಾರ ಜನದಟ್ಟಣೆಯಿಂದ ಕೂಡಿದ್ದ ಮೈದಾನ ಭಾನುವಾರ ಬಣ ಬಣ ಗುಡುತ್ತಿತ್ತು. ಅಗತ್ಯ ಮೂಲಸೌಕರ್ಯ ಒದಗಿಸಿದ ಬಳಿಕ ಪುನಃ ಮಾರುಕಟ್ಟೆಯನ್ನು ಪ್ರಾರಂಭಿಸಲಾಗುತ್ತದೆ. 50 ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ ಎನ್ನುವುದು ಬಿಬಿಎಂಪಿ ಮೂಲಗಳಿಂದ ತಿಳಿದುಬಂದಿದೆ.
‘ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದು ಉತ್ತಮ ನಿರ್ಧಾರ. ಇಲ್ಲವಾದಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆಯಿತ್ತು. ಸೀಮಿತ ವ್ಯಾಪಾರಿಗಳಿಗೆ ಮಾತ್ರ ಅವಕಾಶ ನೀಡಿ, ಅಗತ್ಯ ಮುಂಜಾಗರೂಕತೆ ಕ್ರಮ ಕೈಗೊಳ್ಳಲು ಸೂಚಿಸಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಗುರುತುಗಳನ್ನು ಹಾಕಬೇಕು’ ಎಂದು ಸುಂಕೇನಹಳ್ಳಿ ನಿವಾಸಿ ಶ್ರೀನಿವಾಸ್ ತಿಳಿಸಿದರು.
‘ಈ ಪ್ರದೇಶದಲ್ಲಿ ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸ ಮಾಡುತ್ತಿದ್ದಾರೆ. ಏಕಾಏಕಿ ಮಾರುಕಟ್ಟೆಯನ್ನು ಸ್ಥಳಾಂತರ ಮಾಡಿದ್ದು ಸರಿಯಾದ ಕ್ರಮ ಆಗಿರಲಿಲ್ಲ. ಇನ್ನಾದರೂ ಸೋಂಕು ಹರಡದ ರೀತಿಯಲ್ಲಿ ಅಗತ್ಯ ಕ್ರಮ ಕೈಗೊಂಡು, ಮಾರುಕಟ್ಟೆ ಪ್ರಾರಂಭಿಸಲಿ’ ಎಂದು ಗವಿಪುರದ ರಾಮಕೃಷ್ಣ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.