ADVERTISEMENT

ನೆಲಮಂಗಲ–ದಾಬಸ್‌ಪೇಟೆ ರಾಷ್ಟ್ರೀಯ ಹೆದ್ದಾರಿ: ಅಪಘಾತಕ್ಕೆ ರಹದಾರಿ

ಹೆದ್ದಾರಿಯೂ ಗುಂಡಿಮಯ, ಸಂಚಾರ ತ್ರಾಸದಾಯಕ

ಆದಿತ್ಯ ಕೆ.ಎ
Published 5 ಸೆಪ್ಟೆಂಬರ್ 2025, 0:00 IST
Last Updated 5 ಸೆಪ್ಟೆಂಬರ್ 2025, 0:00 IST
ಎನ್‌ಎಚ್‌–48ರ ಗುಂಡೇನಹಳ್ಳಿ ಬಳಿ ಲಾರಿ ಹಾಗೂ ಬಸ್‌ ನಡುವೆ ಸಂಭವಿಸಿದ್ದ ಅಪಘಾತ 
ಎನ್‌ಎಚ್‌–48ರ ಗುಂಡೇನಹಳ್ಳಿ ಬಳಿ ಲಾರಿ ಹಾಗೂ ಬಸ್‌ ನಡುವೆ ಸಂಭವಿಸಿದ್ದ ಅಪಘಾತ    

ಬೆಂಗಳೂರು: ಬೆಂಗಳೂರು–ಪುಣೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–48 ಅಪಘಾತ ವಲಯವಾಗಿ ಮಾರ್ಪಟ್ಟಿದೆ. ನೆಲಮಂಗಲದಿಂದ ಹಳೇ ನಿಜಗಲ್ಲುವರೆಗೆ ಹೆದ್ದಾರಿಯ ಸ್ಥಿತಿ ಹದಗೆಟ್ಟಿದ್ದು, ಈ ಮಾರ್ಗದಲ್ಲಿ ಪ್ರತಿನಿತ್ಯ ಅಪಘಾತ ಸಂಭವಿಸಿ ಸಾವು–ನೋವಿಗೆ ಕಾರಣವಾಗುತ್ತಿದೆ.  

ನೆಲಮಂಗಲ ಜಂಕ್ಷನ್‌, ಹನುಮಂತಪುರ, ಕುಲವನಹಳ್ಳಿ, ಟಿ.ಬೇಗೂರು, ತಿಪ್ಪಗೊಂಡನಹಳ್ಳಿ, ರಾಯರಪಾಳ್ಯ, ಎಡೇಹಳ್ಳಿ, ಹಳೇ ನಿಜಗಲ್ಲು ಬಳಿ ಪ್ರತಿನಿತ್ಯ ಅಪಘಾತಗಳು ಸಂಭವಿಸುತ್ತಿವೆ. ವಾರದಲ್ಲಿ ನಾಲ್ಕೈದು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೆದ್ದಾರಿಯ ಪಕ್ಕದಲ್ಲೇ ಹಲವು ಗ್ರಾಮಗಳಿವೆ. ಜಮೀನಿಗೆ ತೆರಳಲು ಹೆದ್ದಾರಿ ದಾಟುವ ಸಂದರ್ಭದಲ್ಲಿ ವೇಗವಾಗಿ ಬರುವ ವಾಹನಗಳು ಡಿಕ್ಕಿ ಹೊಡೆದು ಕೃಷಿಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಒಂದು ತಿಂಗಳಲ್ಲಿ 20ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಈ ಮಾರ್ಗವನ್ನು ಹತ್ತುಪಥದ ಹೆದ್ದಾರಿಯನ್ನಾಗಿ ಪರಿವರ್ತಿಸಲಾಗುತ್ತಿದ್ದು, ಕಾಮಗಾರಿ ಆಮೆವೇಗದಿಂದ ಸಾಗುತ್ತಿದೆ. ಅಲ್ಲದೇ ಧುತ್ತೆಂದು ಎದುರುಗೊಳ್ಳುವ ಗುಂಡಿಗಳು, ಅಪಾಯಕಾರಿ ತಿರುವುಗಳು ಸಹ ವಾಹನ ಚಾಲಕರು ಹಾಗೂ ಪ್ರಯಾಣಿಕರ ಜೀವಕ್ಕೆ ಸಂಚಕಾರ ತಂದೊಡ್ಡುತ್ತಿವೆ. ಸಂಚಾರವೂ ತ್ರಾಸದಾಯಕವಾಗಿದೆ.

ADVERTISEMENT

ಎಡೇಹಳ್ಳಿ ಬಳಿ ಕೈಗಾರಿಕಾ ಪ್ರದೇಶವಿದೆ. ಸರಕು ಕೊಂಡೊಯ್ಯಲು ಈ ಪ್ರದೇಶಕ್ಕೆ ಬೃಹತ್‌ ಕಂಟೈನರ್‌ಗಳು, ಲಾರಿಗಳು ಬರುತ್ತವೆ. ವೇಗವಾಗಿ ಬರುವ ಕಂಟೈನರ್‌ಗಳು ಉರುಳಿ ಅನಾಹುತ ಸೃಷ್ಟಿಸುತ್ತಿವೆ. ನೆಲಮಂಗಲದಿಂದ ಆಪೆ ಆಟೊಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದೆ. ವೇಗವಾಗಿ ಸಾಗುವ ಭರದಲ್ಲಿ ಆಪೆ ಆಟೊಗಳು ಉರುಳಿ ಬಿದ್ದು, ಪ್ರಯಾಣಿಕರ ಜೀವಕ್ಕೆ ಆಪತ್ತು ತರುತ್ತಿವೆ ಎಂದು ಸ್ಥಳೀಯರಾದ ರಾಜೇಶ್‌ ಹೇಳಿದರು.

ನೆಲಮಂಗಲ ಜಂಕ್ಷನ್‌ ಕಥೆ ವ್ಯಥೆ: ಬೆಂಗಳೂರು– ಮಂಗಳೂರು ಹೆದ್ದಾರಿ 75 ಹಾಗೂ ಬೆಂಗಳೂರು –ಪುಣೆ ಹೆದ್ದಾರಿ 48 ಅನ್ನು ಸಂಪರ್ಕಿಸುವ ನೆಲಮಂಗಲ ಜಂಕ್ಷನ್‌ ಸಹ ಕಿರಿದಾಗಿದ್ದು, ಜಂಕ್ಷನ್‌ ದಾಟಲು ವಾಹನ ಸವಾರರು ನಿತ್ಯ ಪರದಾಡುತ್ತಿದ್ದಾರೆ. ಅದರಲ್ಲೂ ವಾರಾಂತ್ಯ ಹಾಗೂ ಸರಣಿ ರಜೆಗಳಿದ್ದಾಗ ಸ್ವಂತ ವಾಹನಗಳಲ್ಲಿ ಪ್ರವಾಸಕ್ಕೆ ತೆರಳುವವರ ಸಂಖ್ಯೆ ಹೆಚ್ಚು. ಆಗ, ಈ ಜಂಕ್ಷನ್‌ನಲ್ಲಿ ವಾಹನಗಳು ಸಾಲುಗಟ್ಟಿ ನಿಂತಿರುತ್ತವೆ.

‘ಹೆದ್ದಾರಿಯಲ್ಲಿ ಸಾಗುವ ವಾಹನಗಳ ವೇಗಕ್ಕೆ ಕಡಿವಾಣ ಬಿದ್ದಿಲ್ಲ. ಸರಕು ಸಾಗಣೆ ಲಾರಿಗಳು, ಕಂಟೈನರ್‌ಗಳು ಹೆದ್ದಾರಿಯ ಎಡಬದಿಯಲ್ಲಿ ಚಲಿಸಬೇಕೆಂಬ ನಿಯಮವಿದೆ. ಆದರೆ, ಬಹುತೇಕ ಕಂಟೈನರ್‌ಗಳ ಚಾಲಕರು ಆ ನಿಯಮವನ್ನು ಪಾಲನೆ ಮಾಡುತ್ತಿಲ್ಲ. ನೆಲಮಂಗಲದಿಂದ ಜಿಂದಾಲ್‌ ಟೋಲ್‌ ವರೆಗೂ ಹೆದ್ದಾರಿಯ ಮಧ್ಯದ ಪಥದಲ್ಲೇ ಲಾರಿಗಳು ಸಂಚರಿಸುತ್ತಿವೆ. ಬೇರೆ ಜಿಲ್ಲೆಗಳಿಂದ ನಗರಕ್ಕೆ ಬರುವ ಆಂಬುಲೆನ್ಸ್‌ಗಳು ಮುಂದಕ್ಕೆ ಸಾಗಲೂ ಅವಕಾಶ ಸಿಗುವುದಿಲ್ಲ. ನೆಲಮಂಗಲದಿಂದ ದಾಬಸ್‌ಪೇಟೆ ವರೆಗೆ ಹಲವು ಡಾಬಾಗಳಿದ್ದು, ಹೆದ್ದಾರಿ ಪಕ್ಕದಲ್ಲೇ ಲಾರಿ ಹಾಗೂ ಕಂಟೈನರ್‌ಗಳನ್ನು ಅವೈಜ್ಞಾನಿಕವಾಗಿ ನಿಲುಗಡೆ ಮಾಡಲಾಗುತ್ತಿದೆ. ವೇಗವಾಗಿ ಬರುವ ವಾಹನಗಳು ನಿಲುಗಡೆ ಮಾಡಿದ್ದ ಲಾರಿಗಳಿಗೆ ಡಿಕ್ಕಿಯಾಗಿ ಅನಾಹುತಗಳು ಸಂಭವಿಸುತ್ತಿವೆ’ ಎಂದು ಸ್ಥಳೀಯರು ಹೇಳುತ್ತಾರೆ.

ಗುಂಡೇನಹಳ್ಳಿ ಬಳಿ ಅಪಾಯಕಾರಿ ತಿರುವಿದ್ದು ದುರಸ್ತಿ ಸರಿಪಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಬಿಐಇಸಿ ಎದುರು ತಪ್ಪದ ಸಂಕಟ 

ತುಮಕೂರು ರಸ್ತೆಯ ಬೆಂಗಳೂರು ಅಂತರರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದ (ಬಿಐಇಸಿ) ಎದುರು ಯಾವಾಗಲೂ ಸಂಚಾರ ದಟ್ಟಣೆ ಉಂಟಾಗುತ್ತಿದ್ದು ಪ್ರಯಾಣಿಕರು ಹಾಗೂ ವಾಹನ ಸವಾರರು ಪರದಾಡುತ್ತಿದ್ದಾರೆ. ದಟ್ಟಣೆ ಅವಧಿಯಲ್ಲಿ ಟ್ರಕ್‌ಗಳಿಗೆ ನಗರಕ್ಕೆ ಪ್ರವೇಶ ಇರುವುದಿಲ್ಲ. ಸರ್ವೀಸ್ ರಸ್ತೆಯಲ್ಲೇ ನಿಂತಿರುತ್ತವೆ. ಇದರಿಂದ ದಟ್ಟಣೆ ಉಂಟಾಗುತ್ತಿದೆ ಎಂದು ಸ್ಥಳೀಯರು ನೋವು ತೋಡಿಕೊಂಡಿದ್ದಾರೆ.‌ ‘ವಾಹನ ದಟ್ಟಣೆ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಕೆಲವು ದಿನಗಳ ಹಿಂದೆ ಸಭೆ ನಡೆಸಿದ್ದರು. ಆದರೆ ಸಮಸ್ಯೆಗೆ ಪರಹಾರ ಮಾತ್ರ ಸಿಕ್ಕಿಲ್ಲ’ ಎಂದು ಮಂಜುನಾಥ್‌ ನಗರದ ನಿವಾಸಿ ವಿಷ್ಣು ಹೇಳಿದರು.

ಕಂಟೈನರ್‌ಗಳು ತಂದ ದುರಂತ

ಏಪ್ರಿಲ್‌ 10ರಂದು ದಾಬಸ್‌ಪೇಟೆ ಬಳಿ ಕಾರಿನ ಮೇಲೆ ಕಂಟೈನರ್‌ ಉರುಳಿ ಉದ್ಯಮಿ ಸೇರಿ ಆರು ಮಂದಿ ಮೃತಪಟ್ಟಿದ್ದರು. ಜೂನ್‌ 17ರಂದು ಎನ್‌ಎಚ್‌–75ರ ನೆಲಮಂಗಲ–ಕುಣಿಗಲ್‌ ಬೈಪಾಸ್‌ನಲ್ಲಿ ಲಾರಿ ಹಾಗೂ ಬೈಕ್‌ ನಡುವೆ ಅಪಘಾತ ಸಂಭವಿಸಿ ಇಬ್ಬರು ನೃತ್ಯ ಕಲಾವಿದರು ಮೃತಪಟ್ಟಿದ್ದರು. ‌ ಆಗಸ್ಟ್ 16ರ ರಾತ್ರಿ ಎನ್‌ಎಚ್‌– 48ರ ಗುಂಡೇನಹಳ್ಳಿ ಬಳಿ ಮೇಕೆ ಕುರಿಗಳನ್ನು ತುಂಬಿದ್ದ ಲಾರಿ ಹಾಗೂ ಕಲ್ಯಾಣ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಕೆಆರ್​ಟಿಸಿ) ಬಸ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದರು. ಆಗಸ್ಟ್‌ 25ರಂದು ಹನುಮಂತಪುರ ಗೇಟ್ ಬಳಿ ಬೈಕ್ ಮತ್ತು ಕ್ಯಾಂಟರ್ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ಅರಣ್ಯ ರಕ್ಷಕ ಸೇರಿ ಇಬ್ಬರು ಮೃತಪಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.