
ಬೆಂಗಳೂರು: ಕ್ರಿಸ್‌ಮಸ್ ಹಬ್ಬ ಮುಕ್ತಾಯವಾದ ಬೆನ್ನಲ್ಲೇ ನಗರವು ಹೊಸ ವರ್ಷದ ಸಂಭ್ರಮಕ್ಕೆ ತೆರೆದುಕೊಳ್ಳಲು ಸಜ್ಜುಗೊಳ್ಳುತ್ತಿದೆ.
ಡಿ.31ರ ರಾತ್ರಿ (ಬುಧವಾರ) ಯುವ ಸಮೂಹವನ್ನು ಸೆಳೆಯುವ ಮಹಾತ್ಮ ಗಾಂಧಿ ರಸ್ತೆ, ಚರ್ಚ್ ರಸ್ತೆ, ಕೋರಮಮಂಗಲದ ರಸ್ತೆಗಳು ವರ್ಷಾಚರಣೆಗೆ ಅಣಿಗೊಳ್ಳುತ್ತಿವೆ. ಪಬ್, ಕ್ಲಬ್, ರೆಸ್ಟೋರೆಂಟ್‌ಗಳಲ್ಲೂ ಭರ್ಜರಿ ಪಾರ್ಟಿಗೆ ತಯಾರಿ ನಡೆಯುತ್ತಿದೆ.
ಹೊಸ ವರ್ಷದ ಆಚರಣೆಗೆ ನಾಲ್ಕು ದಿನಗಳಷ್ಟೇ ಬಾಕಿಯಿದ್ದು, ನಗರದಾದ್ಯಂತ ಪೊಲೀಸ್ ಪಹರೆ ಹೆಚ್ಚಿಸ
ಲಾಗಿದೆ. ವಾಹನ ತಪಾಸಣೆ ಬಿಗಿಗೊಳಿಸಲಾಗಿದೆ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಆಗದಂತೆ ಪೊಲೀಸರು ಮುನ್ನೆಚ್ಚರಿಕೆ ಕೈಗೊಂಡಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ನಗರ ಪೊಲೀಸ್ ಕಮಿಷನರ್ ಸೀಮಾಂತ್‌ಕುಮಾರ್ ಸಿಂಗ್, ಕೇಂದ್ರ ವಲಯದ ಡಿಸಿಪಿ ಅಕ್ಷಯ್ ಹಾಕೇ, ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಅವರು ಎರಡು ದಿನಗಳಿಂದ ವಿವಿಧೆಡೆ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ.
ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಚರ್ಚ್ ರಸ್ತೆ, ಒಪೆರಾ ಜಂಕ್ಷನ್, ರೆಸ್ಟ್‌ಹೌಸ್ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ರಿಚ್ಮಂಡ್ ರಸ್ತೆ, ರೆಸಿಡೆನ್ಸಿ ರಸ್ತೆಯಲ್ಲಿ ಬುಧವಾರದಂದು ನಡೆಯುವ ಸಂಭ್ರಮಾಚರಣೆಗೆ ಕಳೆದ ವರ್ಷಕ್ಕಿಂತ ಹೆಚ್ಚಿನ ಜನರು ಜಮಾವಣೆಗೊಳ್ಳುವ ನಿರೀಕ್ಷೆಯಿದೆ. ಅಲ್ಲಿ ಯಾವುದೇ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಚನೆ ನೀಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.
ಪೊಲೀಸ್ ಕಮಿಷನರ್ ಅವರು ಬೈಕ್‌ನಲ್ಲಿ ತೆರಳಿ ಬಂದೋಬಸ್ತ್ ವ್ಯವಸ್ಥೆ ಪರಿಶೀಲನೆ ನಡೆಸಿದ್ದಾರೆ. ಅದರ ಬೆನ್ನಲ್ಲೇ ಶ್ವಾನ ದಳದ ಸಿಬ್ಬಂದಿ ಸೂಕ್ಷ್ಮ ಪ್ರದೇಶಗಳಲ್ಲಿ ವಿವಿಧೆಡೆ ಸಂಚಾರ ನಡೆಸಿ ಪರಿಶೀಲಿಸಿದ್ದಾರೆ.
ಸಂಭ್ರಮಾಚರಣೆ ನಡೆಯುವ ರಸ್ತೆಗಳಲ್ಲಿ ಬುಧವಾರ ಮಧ್ಯಾಹ್ನದ ಬಳಿಕ ವಾಹನ ನಿಲುಗಡೆಗೆ ನಿರ್ಬಂಧ ಇರಲಿದೆ. ದೂರದ ಸ್ಥಳಗಳಲ್ಲಿ ವಾಹನ ನಿಲುಗಡೆ ಮಾಡಿ ಅಥವಾ ಮೆಟ್ರೊ ಮೂಲಕ ಬಂದು ಸಂಭ್ರಮಾಚರಣೆ ನಡೆಯುವ ಪ್ರದೇಶವನ್ನು ತಲುಪ
ಬಹುದು ಎಂದು ಪೊಲೀಸರು ಮನವಿ ಮಾಡಿದರು.
ಹೆಚ್ಚುವರಿ ಸಿ.ಸಿ.ಟಿ.ವಿ ಅಳವಡಿಕೆ: ಸೂಕ್ಷ್ಮ ಪ್ರದೇಶ ಹಾಗೂ ಹೆಚ್ಚಿನ ಜನರು ಸೇರುವ ಪ್ರದೇಶಗಳಲ್ಲಿ ಹೆಚ್ಚುವರಿ ಸಿ.ಸಿ.ಟಿ.ವಿ ಅಳವಡಿಕೆ ಕಾರ್ಯವು ಪ್ರಗತಿಯಲ್ಲಿದೆ.
ಪಬ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ನೂತನ ವರ್ಷದ ಪಾರ್ಟಿ ಆಯೋಜಿಸಲಾಗಿದೆ. ಆಗಲೇ ನೋಂದಣಿ ಕಾರ್ಯವು ನಡೆಯುತ್ತಿದೆ. ಮೊದಲು ಬುಕ್ ಮಾಡಿದವರಿಗೆ ವಿಶೇಷ ರಿಯಾಯಿತಿ ಸಹ ಘೋಷಿಸಲಾಗಿದೆ.
ಎಲ್ಲೆಲ್ಲಿ ಆಚರಣೆ?: ಇಂದಿರಾನಗರದ 100 ಅಡಿ ರಸ್ತೆ, ಮಹದೇವಪುರದ ಐಟಿಪಿಎಲ್ ಮುಖ್ಯರಸ್ತೆ, ಗರುಡಾಚಾರ್ ಪಾಳ್ಯ, ಕೋರಮಂಗಲದ ನ್ಯಾಷನಲ್ ಗೇಮ್ ವಿಲೇಜ್– ಯುಕೊ ಬ್ಯಾಂಕ್ ರಸ್ತೆ, ವೈಡಿ ಮಠ ರಸ್ತೆ, ರಾಜಾಜಿನಗರದ ಓರಾಯನ್ ಮಾಲ್ ಎದುರೂ ಸಂಭ್ರಮಾಚರಣೆಗಳು ನಡೆಯಲಿವೆ. ಅಪಾರ್ಟ್‌ಮೆಂಟ್ ಆವರಣದಲ್ಲೂ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ.
ಹೊರ ಜಿಲ್ಲೆಗಳಿಂದ ಹೆಚ್ಚುವರಿ ಸಿಬ್ಬಂದಿ ಕರೆಸಿಕೊಳ್ಳಲಾಗುವುದು. ತರಬೇತಿ ಸಿಬ್ಬಂದಿ, ಕೆಎಸ್‌ಆರ್‌ಪಿ ತುಕಡಿಗಳನ್ನು ಬಂದೋಬಸ್ತ್‌ಗೆ ಬಳಸಿಕೊಳ್ಳಲಾಗುವುದು. ಹೋಟೆಲ್, ಪಬ್–ಕ್ಲಬ್ ಮಾಲೀಕರ ಸಭೆ ನಡೆಸಿ ಸಲಹೆ, ಸೂಚನೆ ನೀಡಲಾಗಿದೆ. ಸೂಚನೆ ಪಾಲನೆ ಮಾಡದ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ಹೇಳಿವೆ.
ಕಳೆದ ವರ್ಷದಂತೆ ಎಂ.ಜಿ. ರಸ್ತೆ ಬ್ರಿಗೇಡ್ ರಸ್ತೆಗೆ ಈ ಬಾರಿ ಮುಕ್ತ ಪ್ರವೇಶ ಇರುವುದಿಲ್ಲ. ನಿರೀಕ್ಷೆಗಿಂತಲೂ ಹೆಚ್ಚಿನ ಜನರು ಬಂದರೆ ಪ್ರವೇಶದ್ವಾರ ಬಂದ್ ಮಾಡಲಾಗುವುದುಸೀಮಾಂತ್ಕುಮಾರ್ ಸಿಂಗ್ ನಗರ ಪೊಲೀಸ್ ಕಮಿಷನರ್
ಮಹಿಳೆಯರ ಸುರಕ್ಷತೆಗೆ ಕ್ರಮ
ಸಂಭ್ರಮಾಚರಣೆಗೆ ಬರುವ ಮಕ್ಕಳು ಮಹಿಳೆಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಅಲ್ಲಲ್ಲಿ ಸುರಕ್ಷತಾ ಟೆಂಟ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಂಬುಲೆನ್ಸ್ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಂದು ರಾತ್ರಿ 12 ಗಂಟೆ ಕಳೆದ ಬಳಿಕ ಸ್ಥಳದಿಂದ ತೆರಳುವಂತೆ ಸೂಚನೆ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
ಮೇಲ್ಸೇತುವೆ ಬಂದ್
ಬುಧವಾರ ರಾತ್ರಿ ನಗರದ ಎಲ್ಲ ಮೇಲ್ಸೇತುವೆಗಳಲ್ಲಿ ವಾಹನ ಸಂಚಾರ ಬಂದ್ ಮಾಡಲಾಗುತ್ತದೆ. ಅಲ್ಲದೇ ಉದ್ಯಾನಗಳಿಗೂ ಪ್ರವೇಶ ನಿರ್ಬಂಧ ಇರಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.