
ನಿಮ್ಹಾನ್ಸ್‌ನ 28ನೇ ಘಟಿಕೋತ್ಸವದಲ್ಲಿ ಪದಕ ವಿಜೇತ ವಿದ್ಯಾರ್ಥಿಗಳ ಸಂಭ್ರಮ
ಪ್ರಜಾವಾಣಿ ಚಿತ್ರ
ಬೆಂಗಳೂರು: ‘ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯ (ನಿಮ್ಹಾನ್ಸ್) ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದ್ದು, ಸಂಸ್ಥೆಯ ಉತ್ತರ ಕ್ಯಾಂಪಸ್‌ನಲ್ಲಿ (ಕ್ಯಾಲಸನಹಳ್ಳಿ) ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ’ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದರು.
ನಿಮ್ಹಾನ್ಸ್ ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ 28ನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು. ‘40 ಎಕರೆಯಲ್ಲಿ ₹ 498 ಕೋಟಿ ಮೊತ್ತದಲ್ಲಿ 300 ಬೆಡ್‌ಗಳ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಒಪ್ಪಿಗೆ ದೊರೆತಿದೆ. ಅಲ್ಲದೆ, ಸಂಸ್ಥೆಯ ಸೆಂಟ್ರಲ್ ಕ್ಯಾಂಪಸ್‌ನಲ್ಲಿ ₹ 440 ಕೋಟಿಯಲ್ಲಿ ನಾಲ್ಕು ಮಹಡಿಗಳ ಹೊರರೋಗಿ ವಿಭಾಗದ (ಒಪಿಡಿ) ಕಾಂಪ್ಲೆಕ್ಸ್ ನಿರ್ಮಿಸಲೂ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ನಿತ್ಯ ಸುಮಾರು ಐದು ಸಾವಿರ ರೋಗಿಗಳಿಗೆ ಸೇವೆ ಒದಗಿಸುವ ಸಾಮರ್ಥ್ಯವನ್ನು ಇದು ಹೊಂದಿರಲಿದೆ’ ಎಂದು ಹೇಳಿದರು.
‘ಟೆಲಿಮನಸ್’ ಸಹಾಯವಾಣಿಯಲ್ಲಿ 30 ಲಕ್ಷ ಕರೆಗಳನ್ನು ಸ್ವೀಕರಿಸಿ, ಪರಿಣಾಮಕಾರಿಯಾಗಿ ಸ್ಪಂದಿಸಲಾಗಿದೆ. ಕಲ್ಯಾಣ ಕರ್ನಾಟಕ, ದೇಶದ ಈಶಾನ್ಯ ರಾಜ್ಯಗಳಿಗೆ ವೈದ್ಯಕೀಯ ಸೇವೆ ತಲುಪಿಸುವ ನಿಟ್ಟಿನಲ್ಲಿ ನಿಮ್ಹಾನ್ಸ್ ವೈದ್ಯರನ್ನು ರೂಪಿಸಬೇಕು’ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ, ‘ಹೆಚ್ಚುತ್ತಿರುವ ಮನೋವೈದ್ಯಕೀಯ ಮತ್ತು ಮಾನಸಿಕ ಅಸ್ವಸ್ಥತೆಗಳ ಸವಾಲು ಎದುರಿಸಲು ವಿಶೇಷ ನವೀಕೃತ ಮತ್ತು ನಾವೀನ್ಯತಾ ಪ್ರಯತ್ನ ಕೈಗೊಳ್ಳಬೇಕಾದ ಅಗತ್ಯವಿದೆ’ ಎಂದು ಹೇಳಿದರು.
ನಿಮ್ಹಾನ್ಸ್ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ, ‘ನಿಮ್ಹಾನ್ಸ್‌ನಲ್ಲಿ ಕಳೆದ ವರ್ಷ ದಾಖಲೆಯ 6.85 ಲಕ್ಷ ರೋಗಿಗಳಿಗೆ ಸೇವೆ ಕಲ್ಪಿಸಿದ್ದು, ಪ್ರಯೋಗಾಲಯದ ಮೂಲಕ 23.5 ಲಕ್ಷ ರೋಗಿಗಳಿಗೆ ರೋಗನಿರ್ಣಯ ಮಾಡಿದ್ದೇವೆ. 8 ಸಾವಿರ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ’ ಎಂದರು.
28ನೇ ಘಟಿಕೋತ್ಸವದಲ್ಲಿ 251 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಜತೆಗೆ 28 ವಿದ್ಯಾರ್ಥಿಗಳು ವಿಷಯಾಧಾರಿತ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.