ಕೆಂಗೇರಿ: ನಿಶ್ಚಲಾನಂದನಾಥ ಮಹಾಸ್ವಾಮೀಜಿ ಅವರು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠಕ್ಕೆ ಉತ್ತರಾಧಿಕಾರಿಯಾಗಿ ನೂರಾರು ಸ್ವಾಮೀಜಿಗಳ ಸಮ್ಮುಖದಲ್ಲಿ ಭಾನುವಾರ ಜವಾಬ್ದಾರಿ ವಹಿಸಿಕೊಂಡರು.
ಮೈಸೂರು ರಸ್ತೆಯ ಕೆಂಗೇರಿಯಲ್ಲಿರುವ ಮಠದ ಆವರಣದಲ್ಲಿ ವಿಧಿ ವಿಧಾನಗಳೊಂದಿಗೆ ಸನ್ಯಾಸತ್ವ ದೀಕ್ಷೆ ಪಡೆದ ನಿವೃತ್ತ ಕೆ.ಎ.ಎಸ್ ಅಧಿಕಾರಿ ಎಚ್.ಎಲ್.ನಾಗರಾಜ್ ನಾಡಿನ ಮಠಾಧೀಶರು, ಸಾವಿರಾರು ಜನರ ಸಮ್ಮುಖದಲ್ಲಿ ನಿಶ್ಚಲಾನಂದನಾಥ ಮಹಾಸ್ವಾಮೀಜಿ ಎಂಬ ನಾಮಾಂಕಿತದೊಂದಿಗೆ ಪೀಠ ಏರಿದರು.
ನಿಡುಮಾಮಿಡಿ ಜಗದ್ಗುರು ಮಠದ ವೀರಭದ್ರ ಚನ್ನಮಲ್ಲ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ, ‘ಕೆ.ಎ.ಸ್‌ನಂತಹ ಅಧಿಕಾರ ಹೊಂದಿದವರು ಲೌಕಿಕ ಆಕರ್ಷಣೆ ತೊರೆದು ಸನ್ಯಾಸತ್ವ ಸ್ವೀಕರಿಸುವುದು ಅಸಾಮಾನ್ಯ ಸಂಗತಿ. ಭಕ್ತರು ಹಾಗೂ ಸಮಾಜದ ಒಳಿತಿಗೆ ಪೂರಕವಾಗಿ ಕಾರ್ಯ ನಿರ್ವಹಿಸಬೇಕು. ಗುರುಗಳಿಗೆ ನಿಷ್ಠನಾಗಿರಬೇಕು’ ಎಂದು ಸಲಹೆ ನೀಡಿದರು.
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಆದಿ ಚುಂಚನಗಿರಿ ಮಠ ಹಾಗೂ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನದ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎರಡೂ ಮಠಕ್ಕೂ ಇರುವುದು ಒಂದೇ ಪರಂಪರೆ, ಒಬ್ಬರೇ ಗುರು. ಒಂದೇ ಸಮುದಾಯವರಾದ ನಾವು ಎಂದಿಗೂ ಒಂದೇ ತಾಯಿಯ ಮಕ್ಕಳು ಎಂದು ಸ್ಪಷ್ಟಪಡಿಸಿದರು. ನಮಗೆ ಮೂರನೇ ವ್ಯಕ್ತಿಯ ಅವಶ್ಯಕತೆ ಬರಬಾರದು ಎಂದೂ ಹೇಳಿದರು.
ಶ್ರೀಮಠದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿ, ‘ನನಗೆ 80 ವರ್ಷ ಆಗಿರುವುದರಿಂದ ಆರೋಗ್ಯ ಕ್ಷೀಣಿಸುತ್ತಿದೆ. ಹೀಗಾಗಿ, ಮುಂದಿನ ಉತ್ತರಾಧಿಕಾರಿ ಮಾಡಬೇಕು ಎನ್ನುವ ತೀರ್ಮಾನ ತೆಗೆದುಕೊಳ್ಳಲಾಯಿತು. ಅದರಂತೆ ನಾವು ಎಚ್.ಎಂ ನಾಗರಾಜ್ ಅವರ ಪಟ್ಟಾಭಿಷೇಕ ಮಾಡಿದ್ದೇವೆ. ಬಡ ಜನರು ಮೆಡಿಕಲ್ ವಿದ್ಯಾಭ್ಯಾಸ ಮಾಡಲು ಕಾಲೇಜು ನಿರ್ಮಾಣದ ಸಂಕಲ್ಪ ಮಾಡಬೇಕಾಗಿದೆ. ನಿಮ್ಮೆಲ್ಲರ ಸಹಕಾರ ಬೇಕು’ ಎಂದರು.
ಉತ್ತರಾಧಿಕಾರಿ ನಿಶ್ಚಲಾನಂದನಾಥ ಸ್ವಾಮೀಜಿ ಮಾತನಾಡಿ, ‘ನಾನು ಇಂದು ಸಮಾಜಕ್ಕೆ ಅರ್ಪಣೆಯಾಗಲು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳು ಹಾಗೂ ಆದಿಚುಂಚನಗಿರಿ ಶ್ರೀಗಳು ಕಾರಣ’ ಎಂದರು.
‘ಸಂಸ್ಥಾನ ಮಠಕ್ಕೆ ಹಲವರ ತ್ಯಾಗದ ಕೊಡುಗೆ ಇದೆ. ನಾನು ಎಲ್ಲವನ್ನೂ ತ್ಯಾಗ ಮಾಡಿ ಬಂದಿದ್ದೇನೆ. ನಿರ್ಮಲಾನಂದನಾಥ ಶ್ರೀಗಳು ಕೂಡ ನನಗೆ ಸಲಹೆ ನೀಡಿದ್ದಾರೆ. ಹಿಂಜರಿಕೆ ಇಲ್ಲದೆ ನಾವಿಬ್ಬರೂ ಸಮಾಜವನ್ನು ಮುನ್ನಡೆಸೋಣ ಎಂದಿದ್ದಾರೆ’ ಎಂದು ಹೇಳಿದರು. ಪಟ್ಟಾಧಿಕಾರ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಶ್ರೀಗಳು ಬರುವುದಿಲ್ಲ ಎಂದು ಹಲವರು ಹೇಳಿದ್ದರು. ಆದರೆ, ಇಂದು ನನ್ನ ಪಕ್ಕ ಕುಳಿತು ನನ್ನ ಶಕ್ತಿಯಾಗಿ ನಿಂತಿದ್ದಾರೆ ಎಂದು ಕೃತಜ್ಞತೆ ಸೂಚಿಸಿದರು.
ಸ್ಫಟಿಕಪುರಿ ಮಹಾ ಸಂಸ್ಥಾನದ ನಂಜಾವದೂತ ಸ್ವಾಮೀಜಿ, ಅವಧೂತ ವಿನಯ್ ಗುರೂಜಿ, ಬೇಲಿಮಠದ ಶಿವಾನುಭವ ಚರಮೂರ್ತಿ ಮಹಾಸ್ವಾಮೀಜಿ, ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟಾಧ್ಯಕ್ಷರು, ಮಧುರೆ ಭಗೀರಥ ಪೀಠದ ಪುರುಷೋತ್ತಮಾನಂದ ಮಹಾಸ್ವಾಮೀಜಿ, ವಿಶ್ವಕರ್ಮ ಏಕದಂಡಗಿ ಪೀಠದ ಕಾಳಹಸ್ತೇಂದ್ರ ಮಹಾಸ್ವಾಮೀಜಿ, ಮುಖಂಡರಾದ ಪಂಚಲಿಂಗಯ್ಯ, ರಾಮಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.