
ಬೆಂಗಳೂರು: ಆಂಧ್ರಪ್ರದೇಶದ ಕರ್ನೂಲ್ ಬಳಿ ಬಸ್ ಬೆಂಕಿಗೆ ಆಹುತಿಯಾದ ಘಟನೆಯ ಬಳಿಕ ಬಸ್‌ಗಳಲ್ಲಿ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸರ್ಕಾರ ಮುಂದಾಗಿದೆ. ತುರ್ತು ನಿರ್ಗಮನ ಬಾಗಿಲು ಇಲ್ಲದ ಹೊರ ರಾಜ್ಯಗಳ ಬಸ್‌ಗಳ ಮೇಲೆ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆ ಚಿಂತನೆ ನಡೆಸಿದೆ.
ಅಖಿಲ ಭಾರತ ಪರವಾನಗಿ ಹೊಂದಿರುವ ಬಸ್‌ಗಳು ದೇಶದ ವಿವಿಧೆಡೆಯಿಂದ ರಾಜ್ಯಕ್ಕೆ ಬರುತ್ತಿವೆ. ಅವುಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳಿರುವುದಿಲ್ಲ. ಕರ್ನಾಟಕದಲ್ಲಿ ಇರುವ ಸುರಕ್ಷತಾ ನಿಯಮಗಳನ್ನು ಆ ಬಸ್‌ಗಳಲ್ಲಿಯೂ ಅಳವಡಿಸಬೇಕು. ಏಕಾಏಕಿ ಕ್ರಮ ಕೈಗೊಳ್ಳುವ ಬದಲು ಆರಂಭಿಕ ಹಂತದಲ್ಲಿ ತಪಾಸಣೆ ನಡೆಸಿ ಅವರಿಗೆ ಸುರಕ್ಷತಾ ಕ್ರಮಗಳನ್ನು ಅಳವಡಿಸಲು ಸೂಚಿಸಬೇಕು. ನಿಗದಿತ ಸಮಯದ ಒಳಗೆ ಅಳವಡಿಸದೇ ಇದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಬೇಕು ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತಾ ಇಲಾಖೆ ನಿರ್ಧರಿಸಿದೆ.
ತಪಾಸಣೆ ನಡೆಸಿ ಎಚ್ಚರಿಕೆ ನೀಡಿದ ಬಳಿಕವೂ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಳ್ಳದ ಬಸ್‌ಗಳ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸುವುದು, ಪರವಾನಗಿಯನ್ನು ಅಮಾನತು ಮಾಡುವುದು, ಸಂಬಂಧಪಟ್ಟ ಮೂಲ ನೋಂದಣಿ ಪ್ರಾಧಿಕಾರಕ್ಕೆ ಪತ್ರ ಬರೆದು ಕ್ರಮ ವಹಿಸಲು ತಿಳಿಸುವುದು ಮುಂತಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.
‘ರಾಜ್ಯದಲ್ಲಿ ಸಾರ್ವಜನಿಕ ಸೇವಾ ವಾಹನಗಳಲ್ಲಿ ತುರ್ತು ನಿರ್ಗಮನ ದ್ವಾರಗಳಿರುವುದನ್ನು ಖಚಿತಪಡಿಸಿಕೊಂಡ ನಂತರವೇ ವಾಹನ ನೋಂದಣಿ ಮತ್ತು ಅರ್ಹತಾ ಪತ್ರವನ್ನು ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ. ಇದೇ ನಿಯಮ ಹೊರರಾಜ್ಯಗಳ ಬಸ್‌ಗಳಿಗೂ ಅನ್ವಯವಾಗಬೇಕು. ಯಾಕೆಂದರೆ ಆ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರಿಗೂ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದ್ದಾರೆ.
‘ಬೇರೆ ರಾಜ್ಯದ ವಾಹನಗಳಿರಬಹುದು. ಆದರೆ, ರಾಜ್ಯಕ್ಕೆ ಬರುವಾಗ ಸುರಕ್ಷಿತವಾಗಿರಬೇಕು. ಇತ್ತೀಚೆಗೆ ಕರ್ನೂಲ್‌ನಲ್ಲಿ ಬೆಂಕಿಗಾಹುತಿಯಾದ ಬಸ್ ಕೂಡ ಹೈದರಾಬಾದ್‌ನಿಂದ ಬೆಂಗಳೂರಿಗೆ ಬರುತ್ತಿತ್ತು. ಅಖಿಲ ಭಾರತ ಪರವಾನಗಿ (ಆಲ್ ಇಂಡಿಯಾ ಪರ್ಮಿಟ್) ಹೊಂದಿರುವ ಬಸ್‌ಗಳ ಪರ್ಮಿಟ್‌ಗಳನ್ನು ರದ್ದು ಮಾಡುವ ಅಧಿಕಾರ ಇಲ್ಲದೇ ಇದ್ದರೂ ತಾತ್ಕಾಲಿಕವಾಗಿ ಅಮಾನತು ಮಾಡುವ ಅಧಿಕಾರವಿದೆ. ಮೊದಲು ಎಚ್ಚರಿಕೆ ಕೊಡುತ್ತೇವೆ. ಬಸ್ ಮಾಲೀಕರು ಎಚ್ಚೆತ್ತುಕೊಳ್ಳಬೇಕು’ ಎಂದು ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ನಾವು ರಾಜ್ಯದ ಮಾತ್ರವಲ್ಲ, ಹೊರರಾಜ್ಯಗಳ ಬಸ್‌ಗಳನ್ನೂ ತಪಾಸಣೆ ಮಾಡುತ್ತಿದ್ದೇವೆ. ಸುರಕ್ಷತಾ ಕ್ರಮಗಳಿಲ್ಲದ ಹೊರರಾಜ್ಯಗಳ ಬಸ್‌ಗಳ ಮಾಲೀಕರಿಗೆ ಎಚ್ಚರಿಕೆ ನೀಡಿದ್ದೇವೆ. ಇನ್ನೂ ಒಂದೆರಡು ತಿಂಗಳು ಸಮಯ ನೀಡುತ್ತೇವೆ. ಆನಂತರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ’ ಎಂದು ಹೆಚ್ಚುವರಿ ಆಯುಕ್ತ ಸಿ. ಮಲ್ಲಿಕಾರ್ಜುನ ಮಾಹಿತಿ ನೀಡಿದರು.
‘ರಾಜ್ಯಕ್ಕೆ ಬರುವಾಗ ಸರಿ ಇರಬೇಕು’
‘ಯಾವುದೇ ವಿಚಾರದಲ್ಲಿ ತಕ್ಷಣಕ್ಕೆ ಕ್ರಮ ಕೈಗೊಳ್ಳುವುದು ಸರಿಯಲ್ಲ. ಅದಕ್ಕಾಗಿ ಮೊದಲು ಸಮಯ ನೀಡಿ ಆಮೇಲೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಬೇರೆ ರಾಜ್ಯಗಳಲ್ಲಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸದೇ ವಾಹನ ಸದೃಢ ಪ್ರಮಾಣಪತ್ರ (ಎಫ್‌ಸಿ) ನೀಡಿರಬಹುದು. ನಮ್ಮ ರಾಜ್ಯಕ್ಕೆ ಬರುವಾಗ ಎಲ್ಲವೂ ಸರಿ ಇರಬೇಕು. ಇಲ್ಲದೇ ಇದ್ದರೇ ರಾಜ್ಯಕ್ಕೆ ಪ್ರವೇಶಿಸಬಾರದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.